ದ್ವಿತೀಯ ಪಿಯುಸಿ (PUC) ಫಲಿತಾಂಶ ಬಂದಾಯ್ತು. ಅತ್ಯುತ್ತಮ ಅಂಕ ಗಳಿಸಿರುವ ಮಕ್ಕಳ ಪೋಷಕರು ಅತ್ಯಂತ ಹೆಮ್ಮೆಯಿಂದ ತಮ್ಮ ಮಕ್ಕಳ ಅಂಕಪಟ್ಟಿ ಸಹಿತ ತಮ್ಮ ತಮ್ಮ ಫ಼ೇಸ್ ಬುಕ್ ಗೋಡೆಗಳಲ್ಲಿ ಅದನ್ನು ಪೋಸ್ಟ್ ಮಾಡಿ ಸಂಭ್ರಮಿಸುತ್ತಿದ್ದಾರೆ. ಇವುಗಳಲ್ಲಿ ಬಹುಪಾಲು ಶೇ 90 % ಕ್ಕಿಂತ ಹೆಚ್ಚಿಗೆ ಅಂಕ ಗಳಿಸಿರುವ ಮಕ್ಕಳ ಪೋಷಕರದ್ದೇ ಪೋಸ್ಟುಗಳು.!
ತಮ್ಮ ಮಕ್ಕಳ ಸಾಧನೆಯನ್ನು ಹೀಗೆ ಹೆಮ್ಮೆಯಿಂದ ಹಂಚಿಕೊಳ್ಳುವುದು ಯಾವುದೇ ಪೋಷಕರಿಗೇ ಆಗಲೀ ಅತ್ಯಂತ ಸಂತಸದ ವಿಚಾರ. ಗ್ರೇಟ್.
ಮೊದಲನೆಯದಾಗಿ, ವರ್ಷವಿಡೀ ಕಷ್ಟಪಟ್ಟು ಓದಿ ಉತ್ತಮ ಅಂಕಗಳನ್ನು ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸು ಮಾಡಿರುವ ಎಲ್ಲಾ ವಿಧ್ಯಾರ್ಥಿ ವಿಧ್ಯಾರ್ಥಿನಿಯರಿಗೂ ಹಾಗೂ ಅವರ ಯಶಸ್ಸಿಗೆ ಕಾರಣರಾದ ತಂದೆ ತಾಯಂದಿರಿಗೂ, ಗುರುಗಳಿಗೂ ಅಭಿನಂದನೆಗಳು. ಅವರೆಲ್ಲರ ಮುಂದಿನ ಭವಿಷ್ಯ ಉಜ್ವಲವಾಗಿರಲಿ.
ಇದೇ ಸಮಯದಲ್ಲಿ…..
ಶೇ. 90 ಕ್ಕಿಂತಲೂ ಕಡಿಮೆ ಅಂಕ ಗಳಿಸಿರುವ, ಸಾಧಾರಣ ಅಂಕಗಳಿಂದ ಪಾಸು ಮಾಡಿರುವ ಅಥವಾ ಜಸ್ಟ್ ಪಾಸಾಗಿ ಸಿ.ಇ.ಟಿ. ನೀಟ್ ಗೆ ಅಪಿಯರ್ ಆಗಲು ಮುಜುಗರ ಪಟ್ಟುಕೊಂಡು ಕೂತಿರುವ ಹಾಗೂ ಫ಼ೇಸ್ ಬುಕ್ಕಲ್ಲಿ ಕ್ರಿಯಾಶೀಲರಾಗಿದ್ದೂ ಇತರರಂತೆ ಶೇ 80% – 90% ಅಂಕಗಳನ್ನು ಗಳಿಸದೇ ಇರುವುದರಿಂದ ತಮ್ಮ ಮಕ್ಕಳ ಅಂಕಪಟ್ಟಿಗಳನ್ನು ಎಫ಼್.ಬಿ.ಯಲ್ಲಿ ಹಂಚಿಕೊಳ್ಳಲು ನಿರಾಶರಾಗಿರುವ ಕೆಲವು ಪೋಷಕರು ಹಾಗೂ ವಿಧ್ಯಾರ್ಥಿಗಳಿಗೂ ಹಾರ್ದಿಕ ಅಭಿನಂದನೆಗಳು.
ಫ಼ಸ್ಟ್ ಆಫ಼್ ಆಲ್…. ನೀವು ಯಾರಿಗಿಂತಲೂ ಕಡಿಮೆಯಿಲ್ಲ. ಪಿಯುಸಿ ಯಲ್ಲಿ ತೆಗೆದ ಅಂಕಗಳಷ್ಟೇ ನಿಮ್ಮ ಜೀವನದ ಸಾಮರ್ಥ್ಯವೆಲ್ಲವನ್ನೂ ಅಳೆಯುವ ಮಾನದಂಡವೂ ಅಲ್ಲ ಅಥವಾ ಅದೇ ಜೀವನವೂ ಅಲ್ಲ. ಅತೀ ಹೆಚ್ಚು ಅಂಕಗಳನ್ನು ಗಳಿಸಿ ಫ಼ೇಸ್ ಬುಕ್ಕಲ್ಲಿ ಅಂಕಪಟ್ಟಿಗಳೊಂದಿಗೆ ಮಿಂಚುತ್ತಿರುವ ವಿಧ್ಯಾರ್ಥಿಗಳೊಂದಿಗೆ ದಯಮಾಡಿ ಯಾವುದೇ ಕಾರಣಕ್ಕೂ ಹೋಲಿಸಿಕೊಂಡು ಮಾನಸಿಕವಾಗಿ ಕುಗ್ಗಬೇಡಿ. ನಿಮ್ಮ ಮುಂದಿನ ಭವಿಷ್ಯ ನಿರ್ಧಾರವಾಗುವುದು ಪಿಯುಸಿ.ಯಲ್ಲಿನ ಅಂಕಗಳಿಂದಷ್ಟೇ ಅಲ್ಲ, ಬದಲಿಗೆ ಮುಂದಿನ ತಿಂಗಳು ಬರಲಿರುವ ಸಿ.ಇ.ಟಿ ಹಾಗೂ ನೀಟ್ ರೀತಿಯ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ನೀವು ಗಳಿಸುವ ರ್ಯಾಂಕುಗಳಿಂದ !
ಪಿಯುಸಿಯಲ್ಲಿ ನಿಮ್ಮ ಅಂಕಗಳು ಕಡಿಮೆಯಿದ್ದರೂ, ಈಗಿನಿಂದಲೇ ಕಷ್ಟಪಟ್ಟು ತಯಾರಿ ನಡೆಸಿ ಸಿ.ಇ.ಟಿ.ಯಲ್ಲಿ ಉತ್ಯಮ ರ್ಯಾಂಕು ಗಳಿಸಿದಲ್ಲಿ ಒಳ್ಳೆಯ ಕಾಲೇಜಿನಲ್ಲಿಯೇ ನಿಮಗೆ ವೃತ್ತಿಪರ ಕೋರ್ಸು ಮಾಡಲು ಪ್ರವೇಶ ಸಿಗಬಹುದು. ಆಗ ಅಲ್ಲಿ ನಿಮ್ಮ ಪ್ರತಿಭೆ ತೋರಿ ಮಿಂಚಿದಲ್ಲಿ ಇಂದು ಪಿಯುಸಿಯಲ್ಲಿನ ನಿಮ್ಮ ಶೇ. ಐವತ್ತು ಅರವತ್ತು ಅಂಕಗಳೆಲ್ಲವೂ ಲೆಕ್ಕಕ್ಕೇ ಬಾರದೇ ಪಕ್ಕಕ್ಕೇ ಸರಿಯುತ್ತವೆ.
ಇದನ್ನು ಅಂತಹ ಮಕ್ಕಳಿಗೆ ಮನನ ಮಾಡಬೇಕಾಗಿರುವುದು ಪೋಷಕರ ಕರ್ತವ್ಯ. ದಯಮಾಡಿ ಅವರಲ್ಲಿ ಭರವಸೆಯನ್ನು ತುಂಬಿ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಈಗಿನಿಂದಲೇ ಪ್ರೇರೇಪಿಸಿ ಸಜ್ಜಾಗಿಸಿ.
ಇನ್ನು ವಿಜ್ಞಾನ ಬಿಟ್ಟು ಕಲಾ ಮಾಧ್ಯಮ ಅಥವಾ ವಾಣಿಜ್ಯ ವಿಭಾಗದಲ್ಲಿ ಇದೇ ಸ್ಥಿತಿಯಲ್ಲಿರುವ ವಿಧ್ಯಾರ್ಥಿಗಳಿಗೂ ಇದೇ ಮಾತು ಅನ್ವಯ. ಈಗಿನಿಂದಲೇ ನಾಗರಿಕ ಸೇವಾ ಪರೀಕ್ಷೆ ಅಥವಾ ಇನ್ನಿತರೆ ಸ್ಪರ್ಧಾತ್ಮಕ ಪರೀಕ್ಷೆಗಳ ಧ್ಯೇಯವನ್ನಿಟ್ಟುಕೊಂಡು ಸತತ ಪರಿಶ್ರಮದಿಂದ ಅಭ್ಯಾಸ ಮಾಡಿ ಉತ್ತಮ ಅಂಕಗಳೊಂದಿಗೆ ಪದವಿ ಪಡೆದು ಐ.ಎ. ಎಸ್ , ಐಪಿಎಸ್ ಪರೀಕ್ಷೆ ಗುರಿ ಇಟ್ಟುಕೊಂಡಲ್ಲಿ…ಯಾರಿಗೆ ಗೊತ್ತು, ನಿಮ್ಮಲ್ಲಿ ಎಷ್ಟು ಜನ ಜಿಲ್ಲಾಧಿಕಾರಿಗಳು, ಎಸ್.ಪಿ ಗಳು, ಆದರ್ಶ ಪ್ತೊಫ಼ೆಸ್ಸರ್ ಗಳು ಇದ್ದಾರೆಂದು ?
ಸೋ….ಅವಕಾಶಗಳು ವಿಫುಲವಾಗಿವೆ. ಯಾವುದೇ ಕಾರಣಕ್ಕೂ ಪಿಯು ಅಂಕಗಳು ಕಡಿಮೆ ಬಂದಿತೆಂದು ತಲೆ ಮೇಲೆ ಕೈಹೊತ್ತು ಕೂರಬೇಡಿ. ಮುಂದಿನ ಸ್ಪರ್ಧಾತ್ಮಕ ದಿನಗಳಿಗಾಗಿ ಈಗಿನಿಂದಲೇ ತಯಾರಿ ನಡೆಸಿ. ಮುಖ್ಯವಾಗಿ…. ಮತ್ತೊಬ್ಬರ ಅಂಕಗಳೊಂದಿಗೆ ಹೋಲಿಸಿಕೊಂಡು ಕೊರಗುವ ದಯನೀಯ ಸ್ಥಿತಿಗೆ ಇಖಿಯುವುದಂತೂ ಮೊದಲೇ ಬೇಡ.
ಎಲ್ಲರಿಗೂ ಶುಭವಾಗಲಿ.
ಪಿಯುಸಿ ಯಲ್ಲಿ ಅನುತ್ತೀರ್ಣರಾಗಿರುವ ವಿಧ್ಯಾರ್ಥಿಗಳು ಮತ್ತವರ ಪೋಷಕರಿಗೂ ಒಂದು ಕಿವಿಮಾತು. ಈ ಸೋಲು, ಅಪಜಯ , ಅನುತ್ತೀರ್ಣ ಇವೆಲ್ಲವೂ ಅಪಮಾನವಲ್ಲ. ಬದಲಿಗೆ ನಿಮ್ಮಲ್ಲಿ ಜೀವನಾನುಭವವನ್ನು ತುಂಬಲು ಘಟಿಸುವ ವಿದ್ಯಮಾನಗಳಿದ್ದಂತೆ ! ಯಾವುದೇ ಕಾರಣಕ್ಕೂ ಸೋತವರನ್ನು ಮತ್ತಷ್ಟು ಅಪಮಾನವಾಗುವಂತೆ ನಡೆಸಿಕೊಳ್ಳುವುದು ಬೇಡ. ಅವರಲ್ಲಿ ಆತ್ಮವಿಶ್ವಾಸ ತುಂಬಿ ಮತ್ತೇ ಪರೀಕ್ಷೆ ಗೆ ಸನ್ನದ್ಧರನ್ನಾಗಿ ಮಾಡುವ ಹೊಣೆ ಪೋಷಕರದ್ದು. ಎಂತಹದೇ ಸಮಯದಲ್ಲೂ ಫ಼ೇಸ್ ಬುಕ್ ಪೇಜಿನಲ್ಲಿಬರುವ ನಿಮ್ಮ ಸ್ನೇಹಿತರ ಮಕ್ಕಳ ಅಂಕಪಟ್ಟಿ ನೋಡಿ ಹೋಲಿಕೆ ಮಾಡಿ ಫ಼ೇಲ್ ಆದ ನಿಮ್ಮ ಮಕ್ಕಳನ್ನು ನಿಂದಿಸುವ ಮೂರ್ಖತನದ ಕೆಲಸಕ್ಕೆ ಕೈ ಹಾಕ ಬೇಡಿ.
ಅವರಿಗೆ ಕೇವಲ ಒಂದೇ ತಿಂಗಳಲ್ಲಿ ಮತ್ತೊಂದು ಸಪ್ಲಿಮೆಂಟರಿ ಪರೀಕ್ಷೆ ಬರಲಿದೆ. ಇದೆಲ್ಲವನ್ನೂ ಮರೆತು ಅದಕ್ಕಾಗಿ ತಯಾರಿ ನಡೆಸಲು ಉತ್ತೇಜನ ತುಂಬಿ. ಆನಂತರ ಸಾಮಾನ್ಯ ಪ್ರವೇಶ ಪರೀಕ್ಷೆ ಗಾಗಿ ಸಿದ್ದತೆ ನಡೆಸಲು ಭರವಸೆ ತುಂಬಿ.
ಕೊನೆಗೆ ಏನೂ ಆಗಲಿಲ್ಲವಾ…..! ಹೀಗೆ ಕಳೆದುಕೊಂಡ ಒಂದು ವರ್ಷ ಮುಂದೆ ನಿಮ್ಮ ಬದುಕಿನಲ್ಲಿ ಹತ್ತುವರ್ಷದ ಅನುಭವವನ್ನು ಕೊಟ್ಟು ಜೀವನವನ್ನು ಎದುರಿಸುವ ಚೈತನ್ಯ ತುಂಬಲಿದೆ ಎಂಬ ಬದುಕಿನ ಭರವಸೆ ತುಂಬಿ.
ಕಡಿಮೆ ಅಂಕ ಬಂದ ಅಥವಾ ಅನುತ್ತೀರ್ಣರಾದ ವಿಧ್ಯಾರ್ಥಿಗಳು ಹಾಗೂ ಪೋಷಕರು ನೋಡಬೇಕಾಗಿರುವುದು ಸೋಲಿನ ಹಿಂದಿನ ಕಾರಣಗಳು ಹಾಗೂ ಹೋಲಿಕೆಯನ್ನಲ್ಲ…ಬದಲಿಗೆ ಅವರ ಮುಂದಿರಬಹುದಾದ ಭರವಸೆಯ ಹಾದಿಯನ್ನು….!
ಆ ಬಗ್ಗೆ ಮಾತ್ರ ತಕ್ಷಣವೇ ಗಮನ ಹರಿಸಿ. ಗುಡ್ ಲಕ್.

ಹಿರಿಯೂರು ಪ್ರಕಾಶ್.








