ಕೂಡ್ಲಿಗಿ (ವಿಜಯನಗರ): ಬೆಳಗಾವಿ ಅಧಿವೇಶನದ ಹೊತ್ತಿಗೆ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಬರಲಿದ್ದಾರೆ, ಆದರೆ ಡಿ.ಕೆ. ಶಿವಕುಮಾರ್ ಅವರಂತೂ ಸಿಎಂ ಆಗುವುದಿಲ್ಲ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಡಿ.ಕೆ. ಶಿವಕುಮಾರ್ ಈಗ ಕೆಪಿಸಿಸಿ ಅಧ್ಯಕ್ಷರೂ, ಉಪಮುಖ್ಯಮಂತ್ರಿಯೂ ಆಗಿದ್ದಾರೆ. ಅವರಿಗೆ ನಾಲ್ಕೈದು ಖಾತೆಗಳ ಜವಾಬ್ದಾರಿ ಇದೆ ಮತ್ತು ಅವರು ಅದನ್ನೇ ಮುಂದುವರಿಸಲಿದ್ದಾರೆ.
2028ರವರೆಗೂ ಅವರು ಸಿಎಂ ಆಗುವುದಿಲ್ಲ. ಹೊಸ ವ್ಯಕ್ತಿಯೇ ಮುಖ್ಯಮಂತ್ರಿಯಾಗಲಿದ್ದಾರೆ,” ಎಂದು ಅಭಿಪ್ರಾಯಪಟ್ಟರು.
ಇದನ್ನು ಓದಿ –ಹರಿಯಾಣದಲ್ಲೂ ಮತ ಕಳ್ಳತನ : ರಾಗಾ ಗಂಭೀರ ಆರೋಪ
ನವೆಂಬರ್‌ನಲ್ಲಿ ಹೊಸ ನಾಯಕ ಬರುವರು
‘ನಿಮ್ಮ ಸಮುದಾಯದವರಾದ ಸತೀಶ್ ಜಾರಕಿಹೊಳಿ ಅವರಿಗೆ ಬೆಂಬಲ ನೀಡುತ್ತೀರಾ?’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, “ಸತೀಶ್ ಜಾರಕಿಹೊಳಿ ಅಹಿಂದ ನಾಯಕರು. ಅವರಿಗೆ ಅವಕಾಶ ಕೊಡಬೇಕೆಂದು ಸಿಎಂ ಪುತ್ರ ಕೂಡ ಹೇಳಿದ್ದಾರೆ. ಸತೀಶ್ ಸಿಎಂ ಆದರೆ ನಾವು ಸಂತೋಷಪಡುತ್ತೇವೆ, ಅವರು ಉತ್ತರ ಕರ್ನಾಟಕದವರಾದ್ದರಿಂದ ಆ ಭಾಗಕ್ಕೂ ಪ್ರಯೋಜನವಾಗುತ್ತದೆ. ನವೆಂಬರ್ ಕ್ರಾಂತಿಯಿಂದ ಸರ್ಕಾರ ಬಿದ್ದರೆ ಮಧ್ಯಂತರ ಚುನಾವಣೆಗೆ ನಾವು ಸಿದ್ಧರಾಗಿದ್ದೇವೆ,” ಎಂದರು.








