- “2028ರ ತನಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುತ್ತಾರೆ” ಎಂದು ಜಮೀರ್ ಖಾನ್ ಸ್ಪಷ್ಟನೆ
- “ಡಿ.ಕೆ. ಶಿವಕುಮಾರ್ ನಂತರ ಸಿಎಂ ಆಗಲಿ ಎನ್ನುವುದು ನನ್ನ ವೈಯಕ್ತಿಕ ಆಸೆ”
ಕೊಪ್ಪಳ– ರಾಜ್ಯದಲ್ಲಿ ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷ ಹುದ್ದೆಗಳು ಖಾಲಿಯಿಲ್ಲ. 2028ರ ತನಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುತ್ತಾರೆ. ಬಳಿಕ ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕು ಎನ್ನುವುದು ನನ್ನ ಆಶೆ ಎಂದು ವಕ್ಫ್ ಮತ್ತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಮುಖ್ಯಮಂತ್ರಿಯಾಗಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಶಿವಕುಮಾರ್ ಅವರ ಅಭಿಮಾನಿಗಳು ಕೂಡ ಆಸೆ ಇಟ್ಟುಕೊಂಡಿದ್ದಾರೆ. ಆದರೆ ಸಿದ್ದರಾಮಯ್ಯ ಅವರಿಗೆ ಎಲ್ಲ ಶಾಸಕರ ಬೆಂಬಲವಿದ್ದು, ಪೂರ್ಣ ಅವಧಿಗೆ ಅವರೇ ಸಿಎಂ ಆಗಿರುತ್ತಾರೆ. ಬಳಿಕ ಈ ಕುರಿತು ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ” ಎಂದರು.
ಬಿಜೆಪಿಯ ವ್ಯಂಗ್ಯ
“ಶಿವಕುಮಾರ್ ಅಪಾರ ದೈವಭಕ್ತರಾಗಿದ್ದು, ದೇವಸ್ಥಾನಗಳಿಗೆ ಹೋಗುವುದು ಅವರ ದೈನಂದಿನ ರೂಟೀನ್. ದೇವಸ್ಥಾನ ಭೇಟಿ ಮತ್ತು ಸಿಎಂ ಸ್ಥಾನ ಪೈಪೋಟಿಗೆ ಯಾವುದೇ ಸಂಬಂಧವಿಲ್ಲ. ನವೆಂಬರ್‌ನಲ್ಲಿ ಯಾವ ಕ್ರಾಂತಿಯೂ ಇಲ್ಲ — ಇದು ಬಿಜೆಪಿಯ ಕಲ್ಪನೆ ಮಾತ್ರ” ಎಂದು ವ್ಯಂಗ್ಯವಾಡಿದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಅವರು, “ವಿಸ್ತರಣೆ ಸಾಧ್ಯತೆ ಇದೆ. ಪಕ್ಷ ಸೂಚಿಸಿದರೆ ಸಚಿವ ಸ್ಥಾನ ತ್ಯಜಿಸಲು ಸಿದ್ಧನಿದ್ದೇನೆ. ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡುತ್ತೇನೆ” ಎಂದರು.ಇದನ್ನು ಓದಿ –ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧ ಐದು ವಿಕೆಟ್ ಜಯ
ಬಿಜೆಪಿಯ ಒಳಗಿನ ವಿಭಜನೆ ಕುರಿತು ಟೀಕಿಸಿದ ಜಮೀರ್ ಖಾನ್, “ಹಿಂದೆ ಬಿಜೆಪಿಯಲ್ಲಿ ಎರಡು ಗುಂಪುಗಳಷ್ಟೇ ಇತ್ತು. ಈಗ ಬಿ.ವೈ. ವಿಜಯೇಂದ್ರ, ಆರ್. ಅಶೋಕ್, ಬಸನಗೌಡ ಪಾಟೀಲ ಯತ್ನಾಳ, ಕೆ.ಎಸ್. ಈಶ್ವರಪ್ಪ—ಇವರಂತೆಯೇ ಎಲ್ಲರೂ ಪ್ರತ್ಯೇಕ ಗುಂಪುಗಳಾಗಿದ್ದಾರೆ. ಮೊದಲು ಅವರು ತಮ್ಮ ಭಿನ್ನಾಭಿಪ್ರಾಯ ಪರಿಹರಿಸಿಕೊಂಡು ಬಳಿಕ ನಮ್ಮ ಬಗ್ಗೆ ಮಾತನಾಡಲಿ” ಎಂದು ಹೇಳಿದರು.








