ಮೈಸೂರು: ಶಿಕ್ಷಣ ಮತ್ತು ಸಂಸ್ಕೃತಿಗೆ ಹೆಸರಾಗಿರುವ ಮೈಸೂರು ನಗರವು ಇತ್ತೀಚೆಗೆ ಮಾದಕ ದ್ರವ್ಯ ಉತ್ಪಾದನೆಯ ಅಡಗಿತ ಸ್ಥಳವಾಗಿ ಪರಿಣಮಿಸಿರುವುದು ಗಂಭೀರ ಸಮಸ್ಯೆಯಾಗಿ ಮಾರ್ಪಟ್ಟಿದೆ. ಈ ಕುರಿತು ಲೋಕಸಭೆಯಲ್ಲಿ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಳವಳ ವ್ಯಕ್ತಪಡಿಸಿ, ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ.
ಬುಧವಾರ ಲೋಕಸಭೆಯಲ್ಲಿ ಮಾತನಾಡಿದ ಅವರು, “ಮೈಸೂರಿನಲ್ಲಿ ₹390 ಕೋಟಿ ಮೌಲ್ಯದ ಎಂಡಿಎಂಎ ಡ್ರಗ್ಸ್ ಪತ್ತೆಯಾಗಿರುವುದು ಅತ್ಯಂತ ಆತಂಕಕಾರಿ ವಿಷಯ. ಆಶ್ಚರ್ಯದ ಸಂಗತಿಯೆಂದರೆ, ಈ ಡ್ರಗ್ಸ್ ಕೇಂದ್ರವು ರಾಜ್ಯ ಸರ್ಕಾರದ ಜಾಗದಲ್ಲಿಯೇ ಕಾರ್ಯನಿರ್ವಹಿಸುತ್ತಿತ್ತು. ಕರ್ನಾಟಕ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಮಹಾರಾಷ್ಟ್ರದ ಪೊಲೀಸರು ಮೈಸೂರಿಗೆ ಬಂದು ದಾಳಿ ನಡೆಸಿ ಈ ಅಕ್ರಮ ಜಾಲವನ್ನು ಪತ್ತೆಹಚ್ಚಿದ್ದಾರೆ,” ಎಂದು ಅವರು ಹೇಳಿದರು.
ರಾಜ್ಯ ಸರ್ಕಾರದ ಲೋಪವಿದೆ ಎಂದು ಆರೋಪ ಮಾಡಿದ ಯದುವೀರ್, “ಗೃಹ ಸಚಿವರು ನಮ್ಮ ವೈಫಲ್ಯವಿದೆ ಎಂದು ಹೇಳಿ ನಿರ್ಲಿಪ್ತವಾಗಿದೆ. ಇದು ಬೇಜವಾಬ್ದಾರಿಯ ಪರಮಾವಧಿ. ಇದರಿಂದ ಕಾನೂನು ಸುವ್ಯವಸ್ಥೆಗೆ ಭಾರಿ ಧಕ್ಕೆ ಉಂಟಾಗಿದೆ. ಉದಯಗಿರಿಯಲ್ಲಿ ನಡೆದ ಪೊಲೀಸ್ ಠಾಣೆಯ ಮೇಲಿನ ಕಲ್ಲು ತೂರಾಟದ ಪ್ರಕರಣಕ್ಕೂ ಗೃಹ ಇಲಾಖೆ ಕಣ್ಣುಮುಚ್ಚಿದಂತಾಗಿದೆ,” ಎಂದರು.
ಅಂತರರಾಜ್ಯ ತನಿಖೆ ಹಾಗೂ ಕೇಂದ್ರಸ್ಥಾಯಿಯ ಕ್ರಮಕ್ಕೆ ಒತ್ತಾಯ ಮಾಡಿದ ಅವರು, “ಡ್ರಗ್ಸ್ ದಂಧೆಯನ್ನೇ ನಿರ್ವಹಿಸುವ ಅಂತರರಾಜ್ಯ ಜಾಲವಿರುವ ಸಾಧ್ಯತೆ ಇರುವುದರಿಂದ, ಪ್ರಕರಣವನ್ನು ಸಿಬಿಐ ಅಥವಾ ಎನ್‌ಸಿಬಿಗೆ (NCB) ನೀಡಬೇಕು. ಜೊತೆಗೆ, ಮೈಸೂರಿನಲ್ಲಿ ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ (NCB) ಘಟಕ ಸ್ಥಾಪನೆಯ ಅಗತ್ಯವಿದೆ,” ಎಂದು ಮನವಿ ಮಾಡಿದರು.ಇದನ್ನು ಓದಿ –ಭಾರತಕ್ಕೆ ಶೇ 25ರಷ್ಟು ಸುಂಕ ವಿಧಿಸಿದ ಅಮೆರಿಕ
ಯದುವೀರ್ ಅವರ ಈ ಹೇಳಿಕೆ ರಾಜ್ಯ ಸರ್ಕಾರದ ನಿಷ್ಕ್ರಿಯತೆಯ ವಿರುದ್ಧ ತೀವ್ರವನ್ನ ಒತ್ತಿಸಿಕೊಂಡಿದ್ದು, ಮೈಸೂರಿನ ಭದ್ರತೆ ಮತ್ತು ಗೌರವವನ್ನು ಉಳಿಸಿಕೊಳ್ಳುವ ವಿಚಾರವಾಗಿ ಕೇಂದ್ರ ಸರಕಾರ ತ್ವರಿತ ಕ್ರಮ ಕೈಗೊಳ್ಳಬೇಕೆಂಬ ಒತ್ತಡವನ್ನ ಮೂಡಿಸಿದೆ.