ನವದೆಹಲಿ: ದೇಶದ ಉಪರಾಷ್ಟ್ರಪತಿ ಸ್ಥಾನಕ್ಕೆ ಇಂದು (ಸೆ.9) ಚುನಾವಣೆ ನಡೆಯುತ್ತಿದೆ. ಜಗದೀಪ್ ಧನ್ಕರ್ ಅವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಈ ಸ್ಥಾನ ತೆರವಾಗಿದ್ದು, ಇದೀಗ ಎನ್‌ಡಿಎ (NDA) ಅಭ್ಯರ್ಥಿ ಹಾಗೂ ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಮತ್ತು ಇಂಡಿಯಾ ಮೈತ್ರಿಕೂಟ (INDI) ಬೆಂಬಲಿತ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ನಡುವೆ ಕಣ ಜರುಗುತ್ತಿದೆ.
ಚುನಾವಣೆ ಇಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ನಡೆಯಲಿದ್ದು, ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು ತಮ್ಮ ಮತ ಚಲಾಯಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಬೆಳಗ್ಗೆ 10ಕ್ಕೆ ಮತ ಚಲಾಯಿಸಲಿದ್ದಾರೆ. ಸಂಜೆ ನಂತರವೇ ಫಲಿತಾಂಶ ಹೊರಬೀಳಲಿದೆ.
ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಅವರ ಗೆಲುವು ಬಹುತೇಕ ಖಚಿತವೆಂದು ರಾಜಕೀಯ ವಲಯ ಹೇಳುತ್ತಿದೆ. ಬಿಆರ್‌ಎಸ್ (BRS) ಮತ್ತು ಬಿಜೆಡಿ (BJD) ಈ ಚುನಾವಣೆಯಿಂದ ದೂರ ಉಳಿದಿದ್ದು, ಇದರ ಪರಿಣಾಮ ಎನ್‌ಡಿಎಗೆ ಸಂಖ್ಯಾಬಲದ ಲಾಭ ಸ್ಪಷ್ಟವಾಗಿದೆ. ತೆಲಂಗಾಣದ ರೈತರ ಯೂರಿಯಾ ಕೊರತೆ ಸಮಸ್ಯೆಯನ್ನು ಎತ್ತಿ ತೋರಿಸಲು ಬಿಆರ್‌ಎಸ್ ಮತದಾನದಿಂದ ದೂರ ಉಳಿಯುವುದಾಗಿ ಕೆ.ಟಿ. ರಾಮರಾವ್ ತಿಳಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡರಿಗೂ ಸಮಾನ ಅಂತರ ಕಾಯ್ದುಕೊಳ್ಳುವ ನಿಲುವಿನ ಭಾಗವಾಗಿ ಬಿಜೆಡಿ ದೂರ ಉಳಿಯುವ ನಿರ್ಧಾರ ಕೈಗೊಂಡಿದೆ.
ಪ್ರಸ್ತುತ ರಾಜ್ಯಸಭೆಯಲ್ಲಿ 239 ಮತ್ತು ಲೋಕಸಭೆಯಲ್ಲಿ 542 ಸದಸ್ಯರಿದ್ದು, ಒಟ್ಟು 781 ಮತಗಳು ಚಲಾಯಿಸಲಿವೆ. ಬಹುಮತಕ್ಕೆ 391 ಮತಗಳು ಅಗತ್ಯ. ಎನ್‌ಡಿಎ ಶಕ್ತಿಯಲ್ಲಿ 422 ಸಂಸದರು ಇದ್ದು, ಅವರ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಗೆಲುವು ಖಚಿತವೆಂದು ಹೇಳಲಾಗುತ್ತಿದೆ.ಇದನ್ನು ಓದಿ –ಮೈಸೂರು :ಮಾಲ್ ಮೇಲಿನಿಂದ ಬಿದ್ದು ಒರ್ವ ಸಾವು, ಮತ್ತೋರ್ವ ಗಂಭೀರ ಗಾಯ
ಇಂಡಿಯಾ ಮೈತ್ರಿಕೂಟ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಅವರನ್ನು ಕಣಕ್ಕಿಳಿಸಿದ್ದು, ಎನ್‌ಡಿಎ ಮಿತ್ರ ಪಕ್ಷಗಳೂ ಸೇರಿದಂತೆ ಕೆಲವು ವಿರೋಧ ಪಕ್ಷಗಳ ಬೆಂಬಲ ಸಿಗಬಹುದೆಂದು ನಿರೀಕ್ಷಿಸಿದೆ. ಇನ್ನು ವೈಎಸ್‌ಆರ್ ಕಾಂಗ್ರೆಸ್ (YSRCP) ಒಟ್ಟು 11 ಸಂಸದರನ್ನು ಹೊಂದಿದ್ದು, ಅವರ ನಿಲುವೂ ಅಂತಿಮ ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.