ನವದೆಹಲಿ: 2026–27ನೇ ಹಣಕಾಸು ವರ್ಷದಿಂದ ಅನ್ವಯವಾಗುವಂತೆ ಫಾಸ್ಟ್ಯಾಗ್ ವಾರ್ಷಿಕ ಪಾಸ್ ದರವನ್ನು ಹೆಚ್ಚಿಸಲಾಗಿದೆ. ಏಪ್ರಿಲ್ 1ರಿಂದ ಹೊಸ ದರ ಜಾರಿಗೆ ಬರಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ತಿಳಿಸಿದೆ.
ಪ್ರಸ್ತುತ ಫಾಸ್ಟ್ಯಾಗ್ ವಾರ್ಷಿಕ ಪಾಸ್ ದರ 3,000 ರೂಪಾಯಿ ಇದ್ದು, ಇದೀಗ ಅದನ್ನು 3,075 ರೂಪಾಯಿಗೆ ಹೆಚ್ಚಿಸಲಾಗಿದೆ. ಅಂದರೆ 75 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಈ ವಾರ್ಷಿಕ ಪಾಸ್ ಸೌಲಭ್ಯ ಕೇವಲ ಖಾಸಗಿ ವಾಹನಗಳಾದ ಕಾರು, ಜೀಪ್ ಮತ್ತು ವ್ಯಾನ್ಗಳಿಗೆ ಮಾತ್ರ ಅನ್ವಯಿಸುತ್ತದೆ. ವಾಣಿಜ್ಯ ವಾಹನಗಳಿಗೆ ಈ ಸೌಲಭ್ಯ ಲಭ್ಯವಿಲ್ಲ.
ಒಮ್ಮೆ ಪಾಸ್ ಪಡೆದರೆ ಅದು ಒಂದು ವರ್ಷ ಅಥವಾ 200 ಬಾರಿ ಟೋಲ್ ದಾಟುವವರೆಗೆ (ಯಾವುದು ಮೊದಲು ಆಗುತ್ತದೋ ಅದು) ಮಾನ್ಯವಾಗಿರುತ್ತದೆ. ದೇಶಾದ್ಯಂತ ಇರುವ ಸುಮಾರು 1,150 ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ಈ ಪಾಸ್ ಬಳಸಿ ಸುಗಮವಾಗಿ ಸಂಚರಿಸಬಹುದು.
ಸವಾರರು ‘ರಾಜಮಾರ್ಗ ಯಾತ್ರಾ’ ಮೊಬೈಲ್ ಆಪ್ ಅಥವಾ NHAI ಅಧಿಕೃತ ವೆಬ್ಸೈಟ್ ಮೂಲಕ ಈ ಪಾಸ್ ಖರೀದಿಸಬಹುದು. ಆನ್ಲೈನ್ನಲ್ಲಿ ಹಣ ಪಾವತಿಸಿದ ಎರಡು ಗಂಟೆಗಳ ಒಳಗೆ ಅಸ್ತಿತ್ವದಲ್ಲಿರುವ ಫಾಸ್ಟ್ಯಾಗ್ ಐಡಿಗೆ ವಾರ್ಷಿಕ ಪಾಸ್ ಸಕ್ರಿಯಗೊಳ್ಳುತ್ತದೆ.
ಈ ಪಾಸ್ ಪಡೆಯಲು ವಾಹನದ ಫಾಸ್ಟ್ಯಾಗ್ ಸಕ್ರಿಯವಾಗಿರಬೇಕು ಹಾಗೂ ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿರಬೇಕು.ಇದನ್ನು ಓದಿ –ವಿವಿಧ ಇಲಾಖೆ ನೇಮಕಾತಿ ಪರೀಕ್ಷೆ: ಅಂತಿಮ ಪಟ್ಟಿ ಪ್ರಕಟ
ವಾರ್ಷಿಕ ಪಾಸ್ ಹೊಂದಿದ್ದರೆ ಪ್ರತಿ ಬಾರಿ ಟೋಲ್ ಪ್ಲಾಜಾಗಳಲ್ಲಿ ರೀಚಾರ್ಜ್ ಅಥವಾ ಪಾವತಿ ಮಾಡುವ ಅಗತ್ಯವಿಲ್ಲ. ಹೆದ್ದಾರಿಗಳನ್ನು ನಿರಂತರವಾಗಿ ಬಳಸುವ ವಾಹನ ಸವಾರರಿಗೆ ಇದು ಸಾಮಾನ್ಯ ಟೋಲ್ ದರಕ್ಕಿಂತ ಹೆಚ್ಚು ಲಾಭದಾಯಕವಾಗಿದೆ. ಒಂದು ವರ್ಷದಲ್ಲಿ 200 ಬಾರಿ ಟೋಲ್ ದಾಟಿದ ಬಳಿಕ ಇದು ಮತ್ತೆ ಸಾಮಾನ್ಯ ಫಾಸ್ಟ್ಯಾಗ್ ಆಗಿ ಬದಲಾಗುತ್ತದೆ.








