ಮೈಸೂರು: ಕೆಆರ್‌ಎಸ್ ರಸ್ತೆಯಲ್ಲಿರುವ ಗೋಕುಲ್ ಚಿತ್ರಮಂದಿರದ ಆವರಣದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಮರಿಶೆಟ್ಟಿ (75) ಸಜೀವ ದಹನಗೊಂಡಿದ್ದಾರೆ.
ಗೋಕುಲ್ ಚಿತ್ರಮಂದಿರ ಹಲವು ವರ್ಷಗಳ ಹಿಂದೆ ಮುಚ್ಚಲ್ಪಟ್ಟಿದ್ದರೂ, ಮರಿಶೆಟ್ಟಿ ಅವರು ಸುಮಾರು 45 ವರ್ಷಗಳಿಂದ ಅಲ್ಲೇ ಕೆಲಸ ಮಾಡಿಕೊಂಡಿದ್ದು, ನಂತರವೂ ಪತ್ನಿಯೊಂದಿಗೆ ಆವರಣದಲ್ಲೇ ವಾಸವಿದ್ದರು.
ಮಂಗಳವಾರ ಬೆಳಿಗ್ಗೆ ಆವರಣವನ್ನು ಸ್ವಚ್ಛಗೊಳಿಸುತ್ತಿದ್ದ ವೇಳೆ ಕಸದ ರಾಶಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಅದು ವೇಗವಾಗಿ ಹರಡಿಕೊಂಡಿದೆ. ಬೆಂಕಿ ಆವರಣದೊಳಗೆ ವ್ಯಾಪಿಸಿದ ಪರಿಣಾಮ ಮರಿಶೆಟ್ಟಿ ಅವರು ಹೊರಬರಲು ಸಾಧ್ಯವಾಗದೆ ಸಾವನ್ನಪ್ಪಿದ್ದಾರೆ.
ಮೃತರ ಪತ್ನಿ ಸ್ಥಳಕ್ಕೆ ಬಂದು ನೋಡಿದಾಗ ಸುಟ್ಟು ಕರಕಳಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಇದನ್ನು ಓದಿ –ಐಟಿ, ಸೆಮಿಕಂಡಕ್ಟರ್ ಪಾರ್ಕ್ ಸ್ಥಾಪನೆಗೆ ಕ್ರಮ: ಪ್ರಿಯಾಂಕ್ ಖರ್ಗೆ
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಪತ್ನಿ ನೀಡಿದ ದೂರಿನ ಆಧಾರದಲ್ಲಿ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.








