ಬೆಂಗಳೂರು: ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಸಾರ್ವಜನಿಕರಿಗೆ ಕರೆ ಮಾಡಿ, ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಬೆದರಿಸಿ ಲಕ್ಷಾಂತರ ರೂಪಾಯಿ ಹಣ ವಂಚಿಸುತ್ತಿದ್ದ 16 ಮಂದಿ ಆರೋಪಿಗಳನ್ನು ಎಚ್ಎಸ್ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಎಚ್ಎಸ್ಆರ್ ಲೇಔಟ್ 27ನೇ ಮುಖ್ಯರಸ್ತೆಯಲ್ಲಿ ನಕಲಿ ಬಿಪಿಎಲ್ ಕಂಪನಿ ತೆರೆಯಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಇನ್‌ಸ್ಪೆಕ್ಟರ್ ಹರೀಶ್ ಕುಮಾರ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ 40ಕ್ಕೂ ಹೆಚ್ಚು ಕಂಪ್ಯೂಟರ್‌ಗಳು ಹಾಗೂ ಇತರ ಉಪಕರಣಗಳು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ತನಿಖೆಯನ್ನು ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಮುಂದುವರೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಬಿಟ್ಸ್ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನಲ್ಲಿ ವಂಚಕರು ಸುಮಾರು ಎರಡು ವರ್ಷಗಳ ಹಿಂದೆ ಬಿಪಿಓ ಕಂಪನಿ ಆರಂಭಿಸಿದ್ದರು. ಕಟ್ಟಡದ ಎರಡು ಮಹಡಿಗಳಲ್ಲಿ 20 ರಿಂದ 25 ಮಂದಿ ಕೆಲಸ ಮಾಡುತ್ತಿದ್ದು, ಆನ್‌ಲೈನ್ ಮೂಲಕ ಉದ್ಯೋಗ ನೀಡುವ ನೆಪದಲ್ಲಿ ಜನರನ್ನು ನೇಮಿಸಿಕೊಂಡಿದ್ದರು. ನಂತರ, ಅವರಿಗೆ ವಂಚನೆ ಮಾಡುವ ವಿಧಾನಗಳ ತರಬೇತಿ ನೀಡಲಾಗುತ್ತಿತ್ತು.
ಈ ತಂಡವು ಅಮೆರಿಕಾ ಸೇರಿದಂತೆ ಹಲವು ದೇಶಗಳ ಪ್ರಜೆಗಳಿಗೆ ರಾತ್ರಿ ವೇಳೆಯಲ್ಲಿ ಕರೆ ಮಾಡಿ, ತಮ್ಮನ್ನು ಪೊಲೀಸರು ಅಥವಾ ತನಿಖಾ ಸಂಸ್ಥೆಗಳ ಅಧಿಕಾರಿಗಳು ಎಂದು ಪರಿಚಯಿಸಿಕೊಂಡು, ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಬೆದರಿಸಿ “ಸಹಾಯ ಮಾಡುವುದಾಗಿ” ಹೇಳಿ ಹಣ ವಂಚಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಇದನ್ನು ಓದಿ –ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತು ಬಿಡುಗಡೆ
ಪ್ರಸ್ತುತ ಬಂಧಿತರಿಂದ ವಿಚಾರಣೆ ಮುಂದುವರಿದಿದ್ದು, ಈ ವಂಚನೆ ಜಾಲದ ಹಿಂದೆ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದರ ತನಿಖೆ ನಡೆಯುತ್ತಿದೆ.








