ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆ ಅಂತಿಮ ಹಂತಕ್ಕೆ ತಲುಪಿದ್ದು, ಅಮಾನತುಗೊಂಡ ಐಪಿಎಸ್ ಅಧಿಕಾರಿ ದಯಾನಂದ್ ಅವರು ತಮ್ಮ ಹೇಳಿಕೆಯಲ್ಲಿ “ಉಚಿತ ಟಿಕೆಟ್ ಘೋಷಣೆ” ಕಾಲ್ತುಳಿತಕ್ಕೆ ಪ್ರಮುಖ ಕಾರಣವೆಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸುತ್ತಿವೆ.
ಕಾಲ್ತುಳಿತದಲ್ಲಿ 11 ಜನರು ಪ್ರಾಣ ಕಳೆದುಕೊಂಡಿದ್ದರು. ಈ ಪ್ರಕರಣದ ತನಿಖೆಯ ಪ್ರಮುಖ ಭಾಗವಾಗಿ ದಯಾನಂದ್ ಅವರು ಗುರುವಾರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿ, ಘಟನೆಯ ದಿನದ ವಿವರಗಳನ್ನು ನೀಡಿದರು.
ಅವರು ನೀಡಿದ ಹೇಳಿಕೆಯಲ್ಲಿ, “ಘಟನೆಯಂದು ನಾನೇ ಖುದ್ದಾಗಿ ಎಲ್ಲ 21 ಗೇಟ್‌ಗಳಿಗೂ ಭೇಟಿ ನೀಡಿದ್ದೆ. ಪ್ರತಿಯೊಂದು ಐಪಿಎಲ್ ಪಂದ್ಯದಲ್ಲಿ ಮಾಡುವಂತೆಯೇ ಬಂದೋಬಸ್ತ್ ಕಲ್ಪಿಸಲಾಗಿತ್ತು. ಆದರೆ ಆ ದಿನ ಗೇಟ್ ತೆರೆಯಲು ವಿಳಂಬವಾಯಿತು. ಉಚಿತ ಪ್ರವೇಶ ಘೋಷಣೆಯು ಜನಸಂದಣಿಗೆ ಕಾರಣವಾಯಿತು. ಈ ಕಾರಣದಿಂದಾಗಿ ಅವಾಂತರ ಉಂಟಾಯಿತು,” ಎಂದು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 140ಕ್ಕೂ ಹೆಚ್ಚು ಮಂದಿ ಸಾಕ್ಷಿಗಳ ಹೇಳಿಕೆ ದಾಖಲಾಗಿದೆ. ತನಿಖೆಯ ಕೊನೆಯ ಹಂತವಾಗಿ “ಓಪನ್ ಡೇ” ವಿಚಾರಣೆಯು ನಡೆಯಲಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರೂ ತಮ್ಮ ಮಾತು ಹೇಳಲು ಅವಕಾಶವಿದೆ. ಮುಂದಿನ ವಾರ ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗುವ ಸಾಧ್ಯತೆ ಇದೆ.
ತನಿಖೆಯಲ್ಲಿ ಬೆಳಕಿಗೆ ಬಂದ ಪ್ರಮುಖ ಅಂಶಗಳು:
- ಕಾರ್ಯಕ್ರಮಕ್ಕೆ ಪೊಲೀಸ್ ಅನುಮತಿ ದೊರಕುವ ಮೊದಲು ಅದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳು ಹರಡಿದ್ದವು.
- ಕಾರ್ಯಕ್ರಮದ ಹೊಣೆ ಹೊತ್ತವರ ನಿರ್ಲಕ್ಷ್ಯ ಹಾಗೂ ಕೋರ್ಡಿನೇಷನ್ ವಿಫಲವಾಗಿದ್ದು ಸ್ಪಷ್ಟವಾಗಿದೆ.
- ಗೇಟ್‌ಗಳು ಹಾಗೂ ಬ್ಯಾರಿಕೇಡ್‌ಗಳ ಬಳಿ ಅಗತ್ಯ ಸಿಬ್ಬಂದಿ ನಿಯೋಜಿಸದೆ ನಿರ್ವಾಹದಲ್ಲಿ ವ್ಯತ್ಯಯ ಉಂಟಾಯಿತು.
- ಅಂತಿಮ ಘಟ್ಟದಲ್ಲಿ ಉಚಿತ ಪ್ರವೇಶ ಘೋಷಣೆ ಮಾಡಿದ ಕಾರಣದಿಂದ ಜನರು ತೀವ್ರವಾಗಿ ಒತ್ತಿಕೊಂಡರು, ಇದರಿಂದ ಕಾಲ್ತುಳಿತ ಸಂಭವಿಸಿತು.
ಇದನ್ನು ಓದಿ –ಮೈಸೂರಲ್ಲಿ ಮೊದಲ ಆಷಾಢ ಶುಕ್ರವಾರದ ಸಂಭ್ರಮ
ಈ ಘಟನೆಯು ವ್ಯವಸ್ಥಾಪನೆಯಲ್ಲಿನ ಲೋಪದ ಪರಿಣಾಮವಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.