ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ
ಗಣೇಶ ಚತುರ್ಥಿ ಹಬ್ಬ –
ಗಣೇಶ ಚತುರ್ಥಿ ಹಬ್ಬ ಹಿಂದುಗಳ ಒಂದು ಪ್ರಮುಖ ಹಬ್ಬ. ಭಾರತದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸಲ್ಪಡುವ ಹಬ್ಬಗಳಲ್ಲಿ ಒಂದಾಗಿದೆ. ಗಣೇಶನ ಹಬ್ಬವನ್ನು ಭಾರತದಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಮನೆ ಮನೆಗಳಲ್ಲಿ ಪೂಜಿಸುವ, ಮನ ಮನಗಳಲ್ಲಿ ಆರಾಧಿಸುವ ದೈವ ಈಶ್ವರಪಾರ್ವತಿ ಸುತ ಗಣೇಶ , ಗಣೇಶ ಹಬ್ಬ ಜಾತ್ಯಾತೀತವಾಗಿ, ಪಕ್ಷತೀತಾವಾಗಿ, ಧರ್ಮಾತೀಥವಾಗಿ ಆಚರಿಸುವ ಉತ್ಸವ. ಪುರಾಣಗಳ ಉಲ್ಲೇಖದ ಪ್ರಕಾರ ಗಣೇಶನ ಹುಟ್ಟೇ ರೋಚಕ. ಆತ ನಡೆದು ಬಂದ ಹಾದಿ ಅದ್ಭುತ. ಆತನ ವಿಶೇಷತೆ, ಬುದ್ಧಿ ಚಾತುರ್ಯತೆ ಬಗ್ಗೆ ಇರುವ ಉಪಕಥೆಗಳು ಸಾವಿರ. ಅಗ್ರಪೂಜೆಗೆ ಅಧಿಪತಿ, ವಿಘ್ನ ನಿವಾರಕ, ಸಂಕಷ್ಟ ಹರ, ಒಂದಾ ಎರಡಾ ಸಾಕಷ್ಟು ನಾಮಧೇಯಗಳ ಒಡೆಯ ಗಣಪ. ಗೌರಿಹಬ್ಬ : ಸುಮಂಗಲೆಯರಿಗೆ ಸಕಲ ಸೌಭಾಗ್ಯ ನೀಡುವ ಹಬ್ಬ
ಗಣಪತಿ ಉತ್ಸವದ ಆಚರಣೆ ಆರಂಭವಾಗಿದ್ದು ಯಾವಾಗ
1892ರಲ್ಲಿ. ಬಾಹು ಸಾಹೇಬ್ ಲಕ್ಷ್ಮಣ್ ಜಾವಲೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿದರು ,

1893ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರು ತಮ್ಮ ಕೇಸರಿ ಪತ್ರಿಕೆಯಲ್ಲಿ ಸಾರ್ವಜನಿಕ ಗಣೇಶ ಉತ್ಸವದ ಬಗ್ಗೆ ಹೊಗಳಿ ಬರೆದರು. ಆಗ ಗಣೇಶ ಉತ್ಸವ ಒಂದು ಸಂಚಲನವನ್ನು ಮೂಡಿಸಿತು. ಅಷ್ಟೇ ಅಲ್ಲ ಗಣೇಶ ಉತ್ಸವವನ್ನು ಪ್ರತಿ ವರ್ಷ ಅತ್ಯಂತ ವ್ಯವಸ್ಥಿತವಾಗಿ ಆಚರಣೆ ಮಾಡುವ ಎಲ್ಲಾ ವ್ಯವಸ್ಥೆಗಳನ್ನು ತಿಲಕರು ಮಾಡಿದರು. ಗಣೇಶ ಉತ್ಸವ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿತ್ತೆಂದರೆ ಸ್ವಾತಂತ್ರ್ಯ ಹೋರಾಟದಲ್ಲಿ ಜನರನ್ನೂ ಒಗ್ಗೂಡಿಸಲು ಗಣೇಶ ಹಬ್ಬ ಅತ್ಯಂತ ಪ್ರಮುಖ ಪಾತ್ರವಹಿಸಿತು.
ಮಣ್ಣಿನ ಮೂರ್ತಿಯ ಗಣಪ : ಗಣಪತಿಗೆ ಇರುವ ಆಕಾರ, ವೇಷ, ಭೂಷಣ ಬಹುಶಃ ಬೇರೆ ಯಾವುದೇ ದೇವರು ಅಥವಾ ಜೀವಿಗಳಿಗೆ ಇರಲು ಸಾಧ್ಯವೇ ಇಲ್ಲ. ಅಷ್ಟರ ಮಟ್ಟಿಗೆ ಗಣಪತಿಯ ರೂಪಗಳು ಕಾಣ ಸಿಗುತ್ತವೆ. ಗಣಪತಿ ವಿಗ್ರಹ ಕೆರೆಯ ಮಣ್ಣಿನಿಂದ ಮಾಡಿದ್ದರೆ ಮಾತ್ರ ಗಣಪತಿ ಉತ್ಸವದ ಆಚರಣೆ ಅರ್ಥಪೂರ್ಣವಾಗುತ್ತದೆ. ನಮ್ಮಲ್ಲಿ ಎಷ್ಟೋ ಜನರಿಗೆ ಮಣ್ಣಿನ ಗಣಪತಿ ಮೂರ್ತಿಯ ತಯಾರಿಕೆಯ ಕಾರಣವೇ ಗೊತ್ತಿಲ್ಲ. ಹೌದು ಕೆರೆ ಮಣ್ಣಿನ ಗಣಪತಿ ತಯಾರಿಕೆ ಹಾಗೂ ಅದನ್ನು ಕೆರೆಯಲ್ಲಿ ಮುಳುಗಿಸುವ ಹಿಂದೆ ನಮ್ಮ ಹಿರಿಯರು ಕಂಡುಕೊಂಡಿದ್ದ ಅದ್ಬುತ ವೈಜ್ಞಾನಿಕ ಕಾರಣವಿದೆ.
ಕೆರೆಯ ಮಣ್ಣು ನಮ್ಮ ಪೂರ್ವಜರು ಗಣಪತಿಯನ್ನು ಕೆರೆಯ ಮಣ್ಣಿನಿಂದಲೇ ತಯಾರಿಸುತ್ತಿದ್ದರು. ಅದು ಗಣಪತಿ ಹಬ್ಬದ ಮೂರು ನಾಲ್ಕು ತಿಂಗಳ ಮುಂಚೆ ಕೆರೆಯಿಂದ ಮಣ್ಣನ್ನು ಸಂಗ್ರಹಿಸಲಾಗುತಿತ್ತು. ಗಣಪತಿ ಹಬ್ಬದ ಮೂರು ನಾಲ್ಕು ತಿಂಗಳ ಹಿಂದೆ ಅಂದರೆ ಅದು ಬಹುತೇಕ ಬೇಸಿಗೆ ಕಾಲವಾಗಿರುತಿತ್ತು. ಆ ಸಮಯದಲ್ಲಿ ಕೆರೆಗಳು ನೀರು ಬಹುತೇಕ ಬತ್ತಿ ಹೋಗಿ ಖಾಲಿ ಮೈದಾನದಂತಾಗಿರುತ್ತಿದ್ದವು. ಅಂತಹ ಸಮಯದಲ್ಲಿ ಕೆರೆಯ ಮಣ್ಣನ್ನು ಸಂಗ್ರಹಿಸುವುದರಿಂದ ಕೆರೆಯ ಹೂಳು ಎತ್ತಿದಂತಾಗುತಿತ್ತು. ಇದಾದ ನಂತರ ಮಳೆಗಾಲ ಆರಂಭವಾಗಿ ಮಳೆ ಸುರಿದಾಗ ಸಹಜವಾಗಿ ಕೆರೆಗಳು ತುಂಬುತ್ತಿದ್ದವು. ಜೊತೆಗೆ ಮಣ್ಣು ತೆಗೆದಿದ್ದ ಕಾರಣ ಹೆಚ್ಚಿನ ಪ್ರಮಾಣದಲ್ಲಿ ನೀರು ಶೇಖರಣೆಯಾಗುತಿತ್ತು.

ನಮ್ಮ ಪೂರ್ವಜರ ಮುಂದಾಲೋಚನೆ ಅಷ್ಟಕ್ಕೆ ನಿಲ್ಲುತ್ತಿರಲಿಲ್ಲ. ಕೆರೆಯ ಮಣ್ಣಿನಲ್ಲಿ ಮಾಡಿದ ಗಣಪನನ್ನು ಪೂಜಿಸಿದ ನಂತರ ಆ ಗಣಪತಿ ಮೂರ್ತಿಯನ್ನು ಮತ್ತೆ ಅದೇ ಕೆರೆಯಲ್ಲಿ ಮುಳುಗಿಸುತ್ತಿದ್ದರು. ಇದರಿಂದಾಗಿ ಕೆರೆಯಿಂದ ತೆಗೆದ ಮಣ್ಣು ಮತ್ತೆ ಗಣಪನ ರೂಪದಲ್ಲಿ ಕೆರೆಯ ಒಡಲು ಸೇರಿಕೊಳ್ಳುತಿತ್ತು. ಅರಿತವರು ಹೇಳುತ್ತಿದ್ದ ರೀತಿಯಲ್ಲಿ ಹೇಳುವುದಾದರೆ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಅನ್ನೋ ಮಾತಿನಂತೆ. ಇದನ್ನು ತಿಳಿದಾಗ ಹೌದಲ್ವಾ ? ಎಂತಹ ಅದ್ಬುತ ಪರಿಕಲ್ಪನೆ ನಮ್ಮ ಹಿರಿಯರದ್ದು ಅನಿಸದೇ ಇರಲಾರದು.
ಆದರೆ ಈಗ ಕೆರೆಗಳೇ ವಿರಳವಾಗಿವೆ. ಇನ್ನು ಕೆರೆ ಮಣ್ಣನ್ನು ಎಲ್ಲಿಂದ ತೆಗೆಯೋದು ? ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಹಜವೇ. ಇದ್ದ ಕೆರೆ ಕಟ್ಟೆಗಳನ್ನು ಒತ್ತುವರಿ ಮಾಡಿಕೊಂಡು ಕಾಂಕ್ರಿಟ್ ನಾಡನ್ನು ನಿರ್ಮಿಸಿಯಾಗಿದೆ. ಅದಕ್ಕೆ ಮಣ್ಣಿನ ಗಣಪನ ಜಾಗವನ್ನು ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣಪ ಆಕ್ರಮಿಸಿಕೊಂಡಿದ್ದಾನೆ. ಶ್ರದ್ದಾ, ಭಕ್ತಿಯ ಜಾಗವನ್ನು ಆಡಂಬರ, ತೋರಿಕೆ ಆಕ್ರಮಿಸಿಕೊಂಡು ಬಿಟ್ಟಿದೆ. ಆ ಗಣಪತಿ ವಿಗ್ರಹಗಳು ನೀರಿನಲ್ಲಿ ಕರಗದೆ ಜಲ ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಪರಿಸರ ನಾಶಕ್ಕೆ ಕಾರಣವಾಗುತ್ತಿವೆ.
ಗೌರಿಪುತ್ರನ ರೂಪದ ಒಂದೊಂದು ಅಂಗವೂ ಏನನ್ನು ಸಂಕೇತಿಸುತ್ತದೆ.

ಆನೆ ನಡೆದಿದ್ದೇ ದಾರಿ : ಗಣೇಶ ಕೂಡ ಆನೆಯ ತಲೆಯೊಂದಿಗೆ ಭಕ್ತರಿಗೆ ದಾರಿ ಮಾಡಿಕೊಡುತ್ತದೆ ಮತ್ತು ಅವರ ಮಾರ್ಗದಿಂದ ಎಲ್ಲಾ ಅಡೆತಡೆಗಳು ದೂರವಾಗುತ್ತವೆ.
ದೊಡ್ಡ ತಲೆ :ವಿಘ್ನೇಶ್ವರನ ದೊಡ್ಡ ತಲೆಯು ಅವನ ಬುದ್ಧಿವಂತಿಕೆ ಮತ್ತು ಶಕ್ತಿಯುತ ಆಲೋಚನಾ ಸಾಮರ್ಥ್ಯಗಳನ್ನು ಪ್ರತಿನಿಧಿಸುತ್ತದೆ. ಗಣಪ ಮಹಾನ್ ಬುದ್ಧಿವಂತ, ವಿವೇಕವಂತ ಜ್ಞಾನವಂತಿಕೆಯ ಸ್ವರೂಪ. ಆನೆಯು ಜ್ಞಾನಶಕ್ತಿ ಮತ್ತು ಕರ್ಮಶಕ್ತಿ ಎರಡನ್ನೂ ಪ್ರತಿನಿಧಿಸುತ್ತದೆ.
ದೊಡ್ಡ ಕಿವಿಗಳು : ಮೊರದಂಥಹ ವಿನಾಯಕನ ದೊಡ್ಡ ದೊಡ್ಡ ಕಿವಿಗಳು ಹೆಚ್ಚು ಕೇಳಿಸಿಕೊಳ್ಳುವ ಸಾಮರ್ಥ್ಯ ಮತ್ತು ಭಕ್ತರ ಪ್ರಾರ್ಥನೆ, ತೊಂದರೆಗಳನ್ನು ಕೇಳುವ ಸಾಮರ್ಥ್ಯವನ್ನು ಪ್ರತಿನಿಧಿಸುತ್ತವೆ. ಅಂತೆಯೇ ಎಲ್ಲರೂ ಹೆಚ್ಚು ಕೇಳಿಸಿಕೊಳ್ಳಿ ಕಡಿಮೆ ಮಾತನಾಡಿ ಎನ್ನುವುದನ್ನು ಪ್ರತಿನಿಧಿಸುತ್ತದೆ.
ಗಣೇಶನ ಸೊಂಡಿಲು ವಿಘ್ನ ನಿವಾರಕನ ಸೊಂಡಿಲು ಜೀವನದಲ್ಲಿ ಸದಾ ಕ್ರಿಯಾಶೀಲನಾಗಿರು ಎಂದು ಬೋಧಿಸುತ್ತದೆ. ವಿವಿಧ ಸನ್ನಿವೇಶಗಳನ್ನು ಎದುರಿಸಲು ಹೊಂದಿಕೊಳ್ಳುವಿಕೆ ಅಗತ್ಯ ಎಂಬುದನ್ನು ಮತ್ತು ದಕ್ಷತೆಯನ್ನು ಸಂಕೇತಿಸುತ್ತದೆ.
ಏಕದಂತ : ಮೋದಕ ಪ್ರಿಯನ ಏಕದಂತವು ಒಂದೇ ಮನಸ್ಸಿನಿಂದ ಕೆಲಸ ಮಾಡಬೇಕು ಎಂದು ಸೂಚಿಸುತ್ತದೆ. ಏಕ ಚಿತ್ತವನ್ನು ಸಂಕೇತಿಸುತ್ತದೆ.

ಪಾಶ, ಅಂಕುಶ ಹಾಗೂ ಮೋದಕ : ಗಣೇಶನ ಕೈಯಲ್ಲಿರುವ ಪಾಶ, ಅಂಕುಶ ಹಾಗೂ ಮೋದಕ ಗಜಮುಖನ ಕೈಯಲ್ಲಿರುವ ಪಾಶ ನೀತಿ, ಸತ್ಯ ಮತ್ತು ಅಡೆತಡೆಗಳನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ. ಅಂಕುಶವು ನಮ್ಮ ಅಜ್ಞಾನವನ್ನು ನಿವಾರಿಸುವ ಸಂಕೇತ. ಮತ್ತೊಂದು ಕೈಯಲ್ಲಿರುವ ಮೋದಕವು ಆಧ್ಯಾತ್ಮಿಕ ಅನ್ವೇಷಣೆಯ ಆನಂದ ಮತ್ತು ಸಂತೋಷವನ್ನು ಪ್ರತಿನಿಧಿಸುತ್ತದೆ.
ಕಮಲ ಹಸ್ತ, ಅಭಯ ಹಸ್ತ : ಸುಖಕರ್ತನ ಇನ್ನೊಂದು ಕೈಯಲ್ಲಿರುವ ಕಮಲವು ಸ್ವಯಂ ಸಾಕ್ಷಾತ್ಕಾರದ ಮಾಧುರ್ಯವನ್ನು ಪ್ರತಿನಿಧಿಸುತ್ತದೆ. ಇನ್ನೊಂದು ವರದಹಸ್ತವು ಗಣೇಶನನ್ನು ಮೊರೆ ಹೊಕ್ಕವರಿಗೆ ಭಯವಿಲ್ಲ ಎಂಬುದನ್ನು ಸೂಚಿಸುತ್ತದೆ ಹಾಗೂ ಅಭಯಹಸ್ತವು ‘ಹೆದರದಿರು, ನಾನು ನಿನ್ನ ಜೊತೆಗಿದ್ದೇನೆ’ ಎಂದು ಅರ್ಥ ನೀಡುತ್ತದೆ.

ಗಣೇಶನ ಹೊಟ್ಟೆ : ದುಃಖಹರ್ತನ ಹೊಟ್ಟೆಯು ಜೀವನದಲ್ಲಿ ಒಳ್ಳೆಯ ಮತ್ತು ಕೆಟ್ಟ ವಿಷಯಗಳನ್ನು ತಾಳ್ಮೆಯಿಂದ ಮತ್ತು ಸಂತೋಷದಿಂದ ಅನುಭವಿಸುವ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ. ಅಲ್ಲದೆ, ಲಂಬೋದರನ ದೊಡ್ಡ ಹೊಟ್ಟೆಯು ಔದಾರ್ಯವನ್ನು ಮತ್ತು ಸಂಪೂರ್ಣ ಸ್ವೀಕಾರವನ್ನು ಪ್ರತಿನಿಧಿಸುತ್ತವೆ. ಅಷ್ಟೇ ಅಲ್ಲದೆ ಹೊಟ್ಟೆಯು ಇಡೀ ಬ್ರಹ್ಮಾಂಡವೇ ಗಣಪತಿಯಲ್ಲಿ ಅಡಗಿದೆ ಎಂಬ ಅರ್ಥವನ್ನು ಕೊಡುತ್ತದೆ.
ಮೂಷಿಕನ ವಾಹನ ಇಲಿ : ಮೂಷಿಕ ಗಣೇಶನು ಅಷ್ಟು ಚಿಕ್ಕದಾದ ಇಲಿಯ ಮೇಲೆ ಕುಳಿತು ಏಕೆ ಸಂಚರಿಸುತ್ತಾನೆ ಎಲ್ಲರಿಗೂ ಈ ಪ್ರಶ್ನೆ ಮೂಡದೇ ಇರದು. ಮೂಷಿಕನ ವಾಹನವೇ ಇಲಿಯಾಗಿದೆ. ಇಲಿಯೇ ಏಕೆ ಎಂದರೆ ಕೋಪ, ಅಹಂಕಾರ, ತನಗೇ ಎಲ್ಲ ಬೇಕು ಎಂಬ ಸ್ವಾರ್ಥ – ಇಂತಹ ಕೆಟ್ಟ ಗುಣಗಳನ್ನು ಇಲಿ ಸೂಚಿಸುತ್ತದೆ. ಈ ಕೆಟ್ಟ ಗುಣಗಳನ್ನು ಗಣಪತಿ ತಡೆದಿಡುತ್ತಾನೆ ಎಂದು ಇಲಿಯನ್ನು ಸವಾರಿ ಮಾಡುವುದು ತೋರಿಸುತ್ತದೆ. ಅಂದರೆ ಇಲಿ ಮಾನವನ ಅನಿರಂತರ ಆಸೆಯನ್ನು ಮತ್ತು ಗಣೇಶನನ್ನು ಆಸೆ ಮತ್ತು ಅಹಂಕಾರವನ್ನು ನಿಯಂತ್ರಿಸುವುದನ್ನು ಪ್ರತಿನಿಧಿಸುತ್ತಾನೆ.
ವಿಘ್ನೇಶ್ವರಾಯ ವರದಾಯ ಸುರಪ್ರಿಯಯಾ
ಲಂಬೋದರಾಯ ಸಕಲಾಯ ಜಗದ್ವಿತಾಯ
ನಾಗಾನನ್ಯಾಯ ಶ್ರುತಿಯಗ್ನ ವಿಭೂಶಿತಾಯ
ಗೌರಿ-ಸುತಾಯ ಗಣನಾಥ ನಮೋ ನಮಸ್ತೆ