ಬೆಂಗಳೂರು: ನಗರದ ಗೋವಿಂದರಾಜನಗರದಲ್ಲಿ ಗ್ಯಾಸ್ ಗೀಸರ್ ಸೋರಿಕೆಯ ಪರಿಣಾಮ ತಾಯಿ ಮತ್ತು ನಾಲ್ಕು ವರ್ಷದ ಮಗುವಿನ ದುರ್ಘಟನಾಪೂರ್ಣ ಸಾವು ಸಂಭವಿಸಿದೆ.
ಮೃತರನ್ನು 26 ವರ್ಷದ ಚಾಂದಿನಿ ಮತ್ತು ಅವಳ ಮಗುವಾದ ಯುವಿ ಎಂದು ಪೊಲೀಸರು ಗುರುತಿಸಿದ್ದಾರೆ.
ಸೋಮವಾರ (ಡಿ. 11) ಮಧ್ಯಾಹ್ನ ಸ್ನಾನಕ್ಕೆಂದು ಬಾತ್‌ರೂಮ್‌ಗೆ ತೆರಳಿದ್ದ ಚಾಂದಿನಿ ಹಾಗೂ ಮಗು ಗ್ಯಾಸ್ಸ್ ಸೋರಿಕೆಯ ಪರಿಣಾಮ ಅಸ್ವಸ್ಥರಾಗಿದ್ದು, ಮನೆಯವರು ಕಂಡು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.
ಪ್ರತಿದಿನವೂ ಮಧ್ಯಾಹ್ನ 4 ಗಂಟೆಗೆ ದೊಡ್ಡ ಮಗಳನ್ನು ಶಾಲೆಯಿಂದ ಕರೆದುಕೊಂಡು ಬರುತ್ತಿದ್ದ ಚಾಂದಿನಿ, ಆ ದಿನ ಶಾಲೆಗೆ ತೆರಳದಿದ್ದ ಕಾರಣ ಶಾಲೆ ವತಿಯಿಂದ ಪತಿ ಕಿರಣ್‌ಗೆ ಫೋನ್ ಮಾಡಲಾಗಿತ್ತು. ನಂತರ ಕಿರಣ್ ಚಾಂದಿನಿಗೆ ಕರೆ ಮಾಡಿದರೂ ಸ್ವೀಕರಿಸದ ಕಾರಣಕ್ಕೆ , ತಮ್ಮ ಪ್ರವೀಣ್‌ರನ್ನು ಮನೆಗೆ ಹೋಗಿ ಪರಿಶೀಲಿಸಲು ತಿಳಿಸಿದ್ದಾರೆ.
ಪ್ರವೀಣ್ ಮನೆಗೆ ಬಂದಾಗ ಬಾತ್‌ರೂಮ್‌ನಲ್ಲಿ ತಾಯಿ–ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಗ್ಯಾಸ್ ಗೀಸರ್‌ನಿಂದ ಸೋರಿಕೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಕುರಿತು ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.








