- ನಿಯಮಗಳ ಪಾಲನೆ ಕಡ್ಡಾಯ
ಬೆಂಗಳೂರು: ಆಗಸ್ಟ್ 27ರಿಂದ ಬೆಂಗಳೂರಿನಲ್ಲಿ ಆರಂಭವಾಗುವ ಗೌರಿ-ಗಣೇಶ ಹಬ್ಬವನ್ನು ಶಾಂತಿ, ಸುವ್ಯವಸ್ಥೆಯಿಂದ ಆಚರಿಸಲು ಬೆಂಗಳೂರು ಪೊಲೀಸ್ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.
ಪ್ರಮುಖ ಸೂಚನೆಗಳು:
- ಅನುಮತಿ: ಗಣಪತಿ ವಿಗ್ರಹ ಪ್ರತಿಷ್ಠಾಪನೆಗೆ ಸಂಬಂಧಿಸಿದ ಸಂಘ-ಸಂಸ್ಥೆಗಳು, ಆಯೋಜಕರು ಕಡ್ಡಾಯವಾಗಿ ಏಕ ಗವಾಕ್ಷಿ ವ್ಯವಸ್ಥೆ (Single Window System) ಮೂಲಕ ಅನುಮತಿ ಪಡೆಯಬೇಕು.
- ಸ್ಥಳ: ಸಾರ್ವಜನಿಕ ರಸ್ತೆ ಮತ್ತು ಪಾದಚಾರಿಗಳ ಓಡಾಟಕ್ಕೆ ಅಡಚಣೆ ಆಗುವಂತೆ ಪೆಂಡಾಲ್, ಚಪ್ಪರ ಹಾಕಿ ವಿಗ್ರಹ ಪ್ರತಿಷ್ಠಾಪನೆ ಮಾಡಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪನೆಗೆ ಬಿಬಿಎಂಪಿ, ಬೆಸ್ಕಾಂ, ಅಗ್ನಿಶಾಮಕ ದಳ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ನಿರಾಕ್ಷೇಪಣಾ ಪತ್ರ ಕಡ್ಡಾಯ.
- ಧ್ವನಿವರ್ಧಕ ಬಳಕೆ: ಬೆಳಿಗ್ಗೆ 6.00ರಿಂದ ರಾತ್ರಿ 10.00ರ ತನಕ ಮಾತ್ರ ಅನುಮತಿ. ರಾತ್ರಿ 10.00ರಿಂದ ಬೆಳಿಗ್ಗೆ 6.00ರ ತನಕ ಯಾವುದೇ ಸಂದರ್ಭದಲ್ಲೂ ಬಳಸಲು ಅವಕಾಶ ಇಲ್ಲ. ಧ್ವನಿಯ ತೀವ್ರತೆ ಸುತ್ತಮುತ್ತಲಿನ ನಾಗರಿಕರಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಆಸ್ಪತ್ರೆಯ ರೋಗಿಗಳಿಗೆ ತೊಂದರೆಯಾಗದಂತೆ ಇರಬೇಕು.
- ಪಟಾಕಿ: ರಾತ್ರಿ 10.00 ನಂತರದಿಂದ ಬೆಳಿಗ್ಗೆ 6.00ರವರೆಗೆ ಪಟಾಕಿ ಸಿಡಿಸಲು ಸಂಪೂರ್ಣ ನಿಷೇಧ.
- ಹಣ ಸಂಗ್ರಹಣೆ: ಉತ್ಸವದ ಹೆಸರಿನಲ್ಲಿ ಬಲವಂತವಾಗಿ ಹಣ ಅಥವಾ ವಂತಿಕೆ ವಸೂಲಿ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇಂತಹ ಘಟನೆಗಳ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಲು ಕೋರಲಾಗಿದೆ.
- ಸಾಂಸ್ಕೃತಿಕ ಕಾರ್ಯಕ್ರಮಗಳು: ಆಯೋಜಕರು ಮುಂಚಿತವಾಗಿ ಲಿಖಿತ ಅರ್ಜಿ ಸಲ್ಲಿಸಬೇಕು. ಸ್ಥಳದಲ್ಲಿ ಅಗತ್ಯ ಭದ್ರತಾ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳುವುದು ಕಡ್ಡಾಯ.
- ಸುರಕ್ಷತಾ ಕ್ರಮಗಳು: ಪ್ರತಿಯೊಂದು ವಿಗ್ರಹ ಪ್ರತಿಷ್ಠಾಪನಾ ಸ್ಥಳದಲ್ಲಿ ಅಗ್ನಿ ನಂದಕ (Fire Extinguisher), ಕನಿಷ್ಠ 5 CCTV ಕ್ಯಾಮೆರಾಗಳು ಕಡ್ಡಾಯ. ವೇದಿಕೆಯ ಸ್ಥಿರತೆಗಾಗಿ ದೃಢೀಕರಣ ಪತ್ರ ಪಡೆಯಬೇಕು.
- ವಿಸರ್ಜನೆ: ವಿಗ್ರಹ ವಿಸರ್ಜನಾ ಮೆರವಣಿಗೆಗಳು ರಾತ್ರಿ 10.00 ಗಂಟೆಯೊಳಗೆ ಮುಗಿಯಬೇಕು. ವಿಸರ್ಜನಾ ಮಾರ್ಗ ಮತ್ತು ಸ್ಥಳಗಳಲ್ಲಿ ಕ್ರೇನ್, ಮುಳುಗು ತಜ್ಞರು, ಬೆಳಕು ಮತ್ತು ಭದ್ರತಾ ವ್ಯವಸ್ಥೆ ಕಡ್ಡಾಯ.
- ಕೋಮು ಸೌಹಾರ್ದ: ಹಬ್ಬದ ಮೊದಲು ಸ್ಥಳೀಯ ಸಮಿತಿ ಸಭೆಗಳನ್ನು ಆಯೋಜಿಸಿ ಶಾಂತಿ, ಸೌಹಾರ್ದ ಕಾಪಾಡಲು ಕ್ರಮ ಕೈಗೊಳ್ಳಲಾಗುವುದು. ಮೆರವಣಿಗೆಗಳು ಧಾರ್ಮಿಕ ಸ್ಥಳಗಳ ಬಳಿ ಹಾದುಹೋಗುವ ಸಂದರ್ಭದಲ್ಲಿ ವಿಶೇಷ ಎಚ್ಚರಿಕೆ ವಹಿಸಲಾಗುವುದು.
ಇದನ್ನು ಓದಿ –ಆಗಸ್ಟ್ 28ರಿಂದ ರಾಜ್ಯದಲ್ಲಿ ಭಾರೀ ಮಳೆ
Contents
ಪೊಲೀಸರು ಸ್ಪಷ್ಟಪಡಿಸಿರುವಂತೆ, ನಾಗರಿಕರು ಹಾಗೂ ಆಯೋಜಕರು ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಹಬ್ಬವನ್ನು ಎಲ್ಲರೂ ಸುಗಮವಾಗಿ ಮತ್ತು ಶಾಂತಿಯುತವಾಗಿ ಆಚರಿಸಬಹುದಾಗಿದೆ.