ಬ್ಯಾಂಕಾಕ್: ಉತ್ತರ ಗೋವಾದಲ್ಲಿ ನಡೆದ ನೈಟ್‌ಕ್ಲಬ್ ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ನೈಟ್‌ಕ್ಲಬ್ ಮಾಲೀಕರಾದ ಲೂಥ್ರಾ ಸಹೋದರರು , ಗೌರವ್ ಲೂತ್ರಾ ಮತ್ತು ಸೌರಭ್ ಲೂತ್ರಾ ಅವರನ್ನು ಥೈಲ್ಯಾಂಡ್ ಪೊಲೀಸರು ಬಂಧಿಸಿದ್ದಾರೆ. ಬಂಧನದ ಬಳಿಕ ಇವರಿಬ್ಬರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಗೋವಾ ಪೊಲೀಸರು ಲೂಥ್ರಾ ಸಹೋದರರ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ನಂತರ, ಇಂಟರ್‌ಪೋಲ್ ಬ್ಲೂ ಕಾರ್ನರ್ ನೋಟಿಸ್ ನೀಡಲಾಗಿತ್ತು. ಇದನ್ನು ಆಧಾರವಾಗಿ ತೆಗೆದುಕೊಂಡ ಥಾಯ್ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಇದಲ್ಲದೆ, ಗೋವಾ ಸರ್ಕಾರದ ವಿನಂತಿಯ ಮೇರೆಗೆ ವಿದೇಶಾಂಗ ಸಚಿವಾಲಯವು ಇವರಿಬ್ಬರ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸಿದೆ. ಬಂಧಿತರನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಗಿದ್ದು, ಶೀಘ್ರದಲ್ಲೇ ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಡಿಸೆಂಬರ್ 6ರ ಮಧ್ಯರಾತ್ರಿ ಉತ್ತರ ಗೋವಾದ ಅರ್ಪೋರಾ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 25 ಜನರು ಸಾವನ್ನಪ್ಪಿದ್ದ ಸಂದರ್ಭದಲ್ಲಿ, ಲೂಥ್ರಾ ಸಹೋದರರು ಥೈಲ್ಯಾಂಡ್‌ಗೆ ಪರಾರಿಯಾಗಿದ್ದಾರೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಆರು ಮಂದಿಯನ್ನು ಬಂಧಿಸಲಾಗಿದೆ. ಜೊತೆಗೆ, ಗೋವಾ ಸರ್ಕಾರದ ಆದೇಶದ ಮೇರೆಗೆ ಲೂಥ್ರಾ ಸಹೋದರರಿಗೆ ಸೇರಿದ ಇನ್ನೊಂದು ನೈಟ್‌ಕ್ಲಬ್‌ನ್ನು ನೆಲಸಮಗೊಳಿಸಲಾಗಿದೆ. ಇದಕ್ಕೂ ಮೀರಿಸಿ, ಈ ಅವಘಡದ ಹೊಣೆಗಾರಿಕೆ ನಿಗದಿಪಡಿಸಲು ಮೂವರು ಹಿರಿಯ ಅಧಿಕಾರಿಗಳನ್ನು ಅಮಾನತು ಮಾಡಲು ಗೋವಾ ಮುಖ್ಯಮಂತ್ರಿ ಆದೇಶ ಹೊರಡಿಸಿದ್ದಾರೆ.ಇದನ್ನು ಓದಿ –ಲಂಚ ಪಡೆದ ಎಂಜಿನಿಯರ್ ಲೋಕಾಯುಕ್ತ ಬಲೆಗೆ
ಉತ್ತರ ಗೋವಾದ ಈ ದುರಂತ ದೇಶದಾದ್ಯಂತ ಆತಂಕ ಮೂಡಿಸಿದ್ದು, ಈಗ ಲೂಥ್ರಾ ಸಹೋದರರ ಬಂಧನ ಪ್ರಕರಣಕ್ಕೆ ಮಹತ್ವದ ತಿರುವು ತಂದುಕೊಟ್ಟಿದೆ.








