ನವದೆಹಲಿ: ಚಿನ್ನದ ಬೆಲೆಗಳನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಆರ್‌ಬಿಐ ಸಹ ದರಗಳ ಮೇಲೆ ನಿಗಾ ವಹಿಸಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಬಜೆಟ್ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರೀಯ ನಿರ್ದೇಶಕರ ಮಂಡಳಿಯೊಂದಿಗೆ ಸಭೆ ನಡೆಸಿದ ಬಳಿಕ ಅವರು ಮಾಧ್ಯಮಗಳಿಗೆ ಮಾತನಾಡಿದರು. ಭಾರತೀಯರು ಸಂಪ್ರದಾಯವಾಗಿ ಚಿನ್ನದಲ್ಲಿ ಹೂಡಿಕೆ ಮಾಡುತ್ತಾರೆ. ಹಬ್ಬದ ಕಾಲದಲ್ಲಿ ಚಿನ್ನದ ಬೇಡಿಕೆ ಮತ್ತು ಬೆಲೆ ಏರಿಕೆ ಸಾಮಾನ್ಯ ಎಂದು ಹೇಳಿದರು.
ಭಾರತದಲ್ಲಿ ಚಿನ್ನದ ಉತ್ಪಾದನೆ ಸಾಕಷ್ಟು ಇಲ್ಲದ ಕಾರಣ ಆಮದು ಮಾಡಿಕೊಳ್ಳಬೇಕಾಗಿದೆ. ದೇಶೀಯ ಮೂಲಗಳಿಂದ ಚಿನ್ನದ ಬೇಡಿಕೆಯನ್ನು ಪೂರೈಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಚಿನ್ನದ ಬೆಲೆ ಆತಂಕಕಾರಿ ಮಟ್ಟ ತಲುಪಿಲ್ಲವೆಂದು ತಾವು ಭಾವಿಸುತ್ತಿದ್ದು, ಆರ್‌ಬಿಐ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದರು.
ವಿದೇಶಿ ಕೇಂದ್ರೀಯ ಬ್ಯಾಂಕುಗಳು ಚಿನ್ನ ಮತ್ತು ಬೆಳ್ಳಿ ಸಂಗ್ರಹ ಹೆಚ್ಚಿಸುತ್ತಿರುವುದನ್ನು ಉಲ್ಲೇಖಿಸಿದ ಅವರು, ಜಾಗತಿಕ ಮಟ್ಟದಲ್ಲಿಯೂ ಚಿನ್ನದ ಬೇಡಿಕೆ ಏರಿಕೆಯಾಗಿದೆ ಎಂದು ಹೇಳಿದರು.
ಅಮೆರಿಕದ ಸುಂಕ ವಿಷಯದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ. ಈಗಲೇ ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ ಎಂದರು. ವಿದೇಶಿ ನೇರ ಹೂಡಿಕೆ (FDI) ಬಲವಾಗಿದ್ದು, ದೇಶದ ವಿದೇಶಿ ವಿನಿಮಯ ಮೀಸಲು ನಿಧಿ ಸಮೃದ್ಧವಾಗಿದೆ ಎಂದು ತಿಳಿಸಿದರು.ಇದನ್ನು ಓದಿ –ಸ್ನೇಹದ ನೆಪದಲ್ಲಿ 7 ಕೋಟಿ ಸೈಬರ್ ವಂಚನೆ
ಬಜೆಟ್ ನಂತರದ ಈ ಸಭೆಯಲ್ಲಿ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಹಾಗೂ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಸೇರಿದಂತೆ ಇತರ ಅಧಿಕಾರಿಗಳು ಭಾಗವಹಿಸಿದ್ದರು.








