- ಸ್ಕ್ರ್ಯಾಪ್ ನೀತಿಗೆ ಸರ್ಕಾರ ಅನುಮೋದನೆ
ಬೆಂಗಳೂರು: ರಾಜ್ಯದಲ್ಲಿ ದಿನೇದಿನೇ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಹಳೆಯ ವಾಹನಗಳು ಇನ್ನೂ ಸಂಚಾರದಲ್ಲೇ ಇರುವುದು ವಾಯುಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂಬ ಆರೋಪಗಳಿವೆ.
ಈ ಹಿನ್ನೆಲೆ 15 ವರ್ಷ ಮೀರಿದ ವಾಹನಗಳನ್ನು ಗುಜರಿಗೆ ಹಾಕಲು ಸರ್ಕಾರ ಅನುಮೋದನೆ ನೀಡಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಧಾನಪರಿಷತ್ತಿನಲ್ಲಿ ತಿಳಿಸಿದ್ದಾರೆ. ವಾಹನವನ್ನು ಗರಿಷ್ಠ 15 ವರ್ಷಗಳವರೆಗೆ ಸುಸ್ಥಿತಿಯಲ್ಲಿ ಬಳಸಬಹುದು. ಕೇಂದ್ರ ಸರ್ಕಾರದ ನೀತಿಯಂತೆ ವಾಣಿಜ್ಯ ವಾಹನಗಳಿಗೆ ಐದು ವರ್ಷಗಳ ವಿನಾಯಿತಿ ನೀಡಲಾಗಿದೆ. ಆದರೆ ಸರ್ಕಾರಿ ವಾಹನಗಳನ್ನು 15 ವರ್ಷ ಮೀರಿದ ನಂತರ ಬಳಸುವಂತಿಲ್ಲ. ಆಯಸ್ಸು ಮೀರಿದ ಸುಮಾರು 1.38 ಕೋಟಿ ವಾಹನಗಳನ್ನು ಗುಜರಿಗೆ ಹಾಕಬೇಕೆಂಬ ಒತ್ತಾಯ ಕೇಳಿಬಂದಿದೆ ಎಂದು ಸಚಿವರು ಹೇಳಿದರು.
ಕೆಲವು ರಾಜ್ಯಗಳಲ್ಲಿ, ವಿಶೇಷವಾಗಿ ತಮಿಳುನಾಡಿನಲ್ಲಿ, ನಿರ್ದಿಷ್ಟ ವಾಹನಗಳಿಗೆ ವಿನಾಯಿತಿ ಕೋರುವ ಬೇಡಿಕೆಗಳು ಕೇಳಿಬಂದಿವೆ. ಅಗ್ನಿಶಾಮಕ ಇಲಾಖೆಯಲ್ಲಿ ಕಡಿಮೆ ಬಳಕೆಯಾದ ಕೆಲವು ವಾಹನಗಳಿರುವುದರಿಂದ ಅವುಗಳಿಗೆ ವಿನಾಯಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎಂದು ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು. ನಿಗಮದ ವ್ಯಾಪ್ತಿಯಲ್ಲಿ 15 ವರ್ಷ ಮೀರಿದ ಬಸ್‌ಗಳು ಇಲ್ಲವೆಂದೂ ಅವರು ಹೇಳಿದರು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಾಹನ ಗುಜರಿ ನೀತಿಯ ಉದ್ದೇಶ ಹಳೆಯ ಹಾಗೂ ಹೆಚ್ಚು ಮಾಲಿನ್ಯ ಉಂಟುಮಾಡುವ ವಾಹನಗಳನ್ನು ಹಂತ ಹಂತವಾಗಿ ನಿವಾರಿಸಿ ಪರಿಸರ ಸಂರಕ್ಷಣೆ ಹಾಗೂ ವಾಹನ ಉದ್ಯಮಕ್ಕೆ ಉತ್ತೇಜನ ನೀಡುವುದಾಗಿದೆ.
ಈ ನೀತಿಯಂತೆ 15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕುವುದು ಕಡ್ಡಾಯವಾಗಿದೆ. ಖಾಸಗಿ ವಾಹನಗಳ ವಿಷಯದಲ್ಲಿ 20 ವರ್ಷ ಮೇಲ್ಪಟ್ಟ ವಾಹನಗಳಿಗೆ ಫಿಟ್‌ನೆಸ್ ಪರೀಕ್ಷೆ ಕಡ್ಡಾಯವಾಗಿದ್ದು, ಅದರಲ್ಲಿ ಉತ್ತೀರ್ಣವಾಗದ ವಾಹನಗಳನ್ನು ಗುಜರಿಗೆ ಹಾಕಬೇಕಾಗಿದೆ.ಇದನ್ನು ಓದಿ –ಶಿಲ್ಪಾ ಶೆಟ್ಟಿ ಒಡೆತನದ ಪಬ್ ಮೇಲೆ ಐಟಿ ದಾಳಿ
ಗುಜರಿಗೆ ಹಾಕುವವರಿಗೆ ಹೊಸ ವಾಹನ ಖರೀದಿಯಲ್ಲಿ ತೆರಿಗೆ ವಿನಾಯಿತಿ ಮತ್ತು ಪ್ರೋತ್ಸಾಹಧನವನ್ನೂ ನೀಡಲಾಗುತ್ತದೆ. ಅಧಿಕೃತ ಮಾಹಿತಿಯಂತೆ, ಬೆಂಗಳೂರು ನಗರದಲ್ಲೇ 15 ವರ್ಷ ಮೀರಿದ 37,45,339 ವಾಹನಗಳಿವೆ. ಇದರಲ್ಲಿ 24,46,372 ದ್ವಿಚಕ್ರ ವಾಹನಗಳು, 7,05,939 ಕಾರುಗಳು ಹಾಗೂ ಲಾರಿ, ಬಸ್ ಸೇರಿದಂತೆ ಇತರೆ ವಾಹನಗಳು 5,93,028 ಸಂಖ್ಯೆಯಲ್ಲಿವೆ. ಈ ಹಿನ್ನೆಲೆ ಹಳೆಯ ವಾಹನಗಳ ನಿಯಂತ್ರಣಕ್ಕೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.








