ಬೆಂಗಳೂರು:ರಾಜ್ಯ ಸರ್ಕಾರವು ದೇಶದಲ್ಲೇ ಮೊದಲ ಬಾರಿಗೆ ಮಾಸಿಕ ಋತುಚಕ್ರದ ರಜೆ ನೀತಿಯನ್ನು ಜಾರಿಗೆ ತರಲು ನಿರ್ಧರಿಸಿದೆ.
ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ದುಡಿಯವ ಮಹಿಳಾ ನೌಕರರಿಗೆ ತಿಂಗಳಿಗೆ ಒಂದು ದಿನದ ವೇತನ ಸಹಿತ ರಜೆ ಸಿಗಲಿದೆ.
ಸಾರ್ವಜನಿಕ ಮತ್ತು ಖಾಸಗಿ ವಲಯದ ಎಲ್ಲ ಉದ್ಯೋಗದಾತರು ಈ ನೀತಿಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕಾಗುತ್ತದೆ.
ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ಅನುಮೋದನೆ ನೀಡಲಾಗಿದೆ. ಕಾನೂನು ಸಚಿವ ಎಚ್ಕೆ ಪಾಟೀಲ್ ಈ ಕುರಿತು ಮಾಹಿತಿ ನೀಡಿ, ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್, ಎಂಎನ್ಸಿ, ಐಟಿ ಮತ್ತು ಇತರೆ ಖಾಸಗಿ ಸಂಸ್ಥೆ, ಕೈಗಾರಿಕೆಗಳು ಸೇರಿದಂತೆ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆ ನೀಡುವ “ಋತುಚಕ್ರ ರಜೆ ನೀತಿ”ಗೆ ಸಂಪುಟ ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದರು
ಸಚಿವ ಸಂಪುಟ ಸಭೆ ಇತರೆ ಪ್ರಮುಖ ನಿರ್ಣಯಗಳು:
1) 2025 – 26ನೇ ಸಾಲಿನಲ್ಲಿ ರಸಗೊಬ್ಬರ ದಾಸ್ತಾನು ಮಾಡಲು ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿಯವರು ಪಡೆಯುವ ತಲಾ 200 ಕೋಟಿ ರೂಪಾಯಿಗಳ ಬಂಡವಾಳ ಸಾಲಕ್ಕೆ ರಾಜ್ಯ ಸರ್ಕಾರ ಖಾತರಿ ನೀಡಲು ಒಪ್ಪಿಗೆ
2) ರಾಜ್ಯ ಸಿವಿಲ್ ಸೇವೆಗಳ ಹುದ್ದೆಗಳ ನೇರ ನೇಮಕಾತಿಯಲ್ಲಿ ಎಲ್ಲಾ ಪ್ರವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆ ನೀಡಿ ಹೊರಡಿಸಲಾಗಿದೆ ಆದೇಶಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ.
3) ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಎರಡನೇ ಹಂತದಲ್ಲಿ 11 ಶ್ರಮಿಕ ವಸತಿ ಶಾಲೆಗಳನ್ನು 405 ಕೋಟಿ 55 ಲಕ್ಷ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
4) ರಾಜ್ಯದಲ್ಲಿ ಸೇತುವೆಗಳ ಪುನರ್ ನಿರ್ಮಾಣ ಹಾಗೂ ಪುನಶ್ಚೇತನ ಕಾಮಗಾರಿಗಳಿಗಾಗಿ 2000 ಕೋಟಿ ರೂಪಾಯಿಗಳ ಯೋಜನೆಗೆ ತಾತ್ವಿಕ ಅನುಮೋದನೆ ನೀಡಲಾಗಿದೆ.
5) ಬೀದರ್ ಜಿಲ್ಲೆಯ ಔರಾದ್ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ಸಂಪುಟ ಒಪ್ಪಿದೆ.
6) ರಾಜಕಾಲುವೆ ಹಂತ-2ರ ಅಡಿಯಲ್ಲಿ 40 ಎಂಎಲ್ ಡಿ ಸಾಮರ್ಥ್ಯದ ನೀರು ಸಂಸ್ಕರಣಾ ಘಟಕ ಸ್ಥಾಪನೆ ಮತ್ತು 5 ವರ್ಷಗಳ ನಿರ್ವಹಣೆಗಾಗಿ 29.70 ಕೋಟಿ ರೂ. ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ.ಇದನ್ನು ಓದಿ –ಅನ್ನಭಾಗ್ಯ ಯೋಜನೆಗೆ ಹೊಸ ರೂಪು
ಕಾರ್ಮಿಕ ಇಲಾಖೆಯಿಂದ ಸರ್ಕಾರಕ್ಕೆ ಸಲ್ಲಿಸಲಾದ ಪ್ರಸ್ತಾವನೆಯಲ್ಲಿ 2025 ರ ಮಾಸಿಕ ಋತುಸ್ರಾವದ ರಜೆ ನೀತಿಗಾಗಿ ಆಡಳಿತಾತ್ಮಕ ಅನುಮೋದನೆ ಕೋರಿತ್ತು. ಈಗಾಗಲೇ ಕೇರಳವು ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ಗಳಲ್ಲಿನ ಮಹಿಳಾ ತರಬೇತಿದಾರರಿಗೆ ಎರಡು ದಿನಗಳ ಮಾಸಿಕ ಋತುಸ್ರಾವದ ರಜೆಯನ್ನು ಪರಿಚಯಿಸಿದೆ. ಬಿಹಾರ ಮತ್ತು ಒಡಿಶಾದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಮಾತ್ರ 12 ದಿನಗಳ ವಾರ್ಷಿಕ ಮಾಸಿಕ ಋತುಸ್ರಾವದ ರಜೆ ನೀತಿ ಜಾರಿಯಲ್ಲಿದೆ. ಆದರೆ, ಕರ್ನಾಟಕವು ಈ ನೀತಿಯನ್ನು ಸಮಗ್ರವಾಗಿ ಜಾರಿಗೆ ತರುವ ಮೊದಲ ರಾಜ್ಯವಾಗಲಿದೆ.
–ಸಂತೋಷ್ ಲಾಡ್ ಕಾರ್ಮಿಕ ಸಚಿವರು








