ತುಮಕೂರು: ಬೆಂಗಳೂರು ಮಾದರಿಯಲ್ಲಿ ತುಮಕೂರು ನಗರವನ್ನು ‘ಗ್ರೇಟರ್ ತುಮಕೂರು’ ಆಗಿ ರೂಪಿಸುವ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದ್ದು, ಈ ಸಂಬಂಧ ಅಗತ್ಯ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, ಈಗಾಗಲೇ ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಐದು ಮಹಾನಗರ ಪಾಲಿಕೆಗಳಾಗಿ ಪುನರ್‌ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ವಿಸ್ತರಣೆ ತುಮಕೂರಿನ ಅಂಚಿನವರೆಗೂ ತಲುಪಿರುವ ಹಿನ್ನೆಲೆಯಲ್ಲಿ, ಅದೇ ಮಾದರಿಯಲ್ಲಿ ತುಮಕೂರನ್ನೂ ‘ಗ್ರೇಟರ್ ಸಿಟಿ’ಯಾಗಿ ಅಭಿವೃದ್ಧಿಪಡಿಸುವ ಅವಶ್ಯಕತೆ ಇದೆ ಎಂದು ಹೇಳಿದರು.
ತುಮಕೂರು ಸುತ್ತಮುತ್ತಲಿನ ಪ್ರದೇಶಗಳ ವೇಗವಾದ ನಗರೀಕರಣ, ಜನಸಂಖ್ಯೆ ಹೆಚ್ಚಳ ಹಾಗೂ ಮೂಲಸೌಕರ್ಯಗಳ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ‘ಗ್ರೇಟರ್ ತುಮಕೂರು’ ಕಲ್ಪನೆಗೆ ಮುಂದಾಗಲಾಗಿದೆ. ನಗರ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಮತ್ತು ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲು ಪಾಲಿಕೆ ಪುನರ್‌ರಚನೆ ಸಹಕಾರಿಯಾಗಲಿದೆ ಎಂದು ಪರಮೇಶ್ವರ್ ಅಭಿಪ್ರಾಯಪಟ್ಟರು.ಇದನ್ನು ಓದಿ –ಬೊಂಡಿ ಬೀಚ್‌ನಲ್ಲಿ ಉಗ್ರರ ಗುಂಡಿನ ದಾಳಿ: 16 ಮಂದಿ ಬಲಿ
ಈ ವಿಷಯದ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ‘ಗ್ರೇಟರ್ ತುಮಕೂರು’ ರೂಪದಲ್ಲಿ ಹೊಸ ಪಾಲಿಕೆ ವ್ಯವಸ್ಥೆ ಜಾರಿಯಾದರೆ, ನಗರ ಅಭಿವೃದ್ಧಿಗೆ ಹೊಸ ದಿಕ್ಕು ಸಿಗಲಿದೆ ಎಂಬ ವಿಶ್ವಾಸವನ್ನೂ ಸಚಿವರು ವ್ಯಕ್ತಪಡಿಸಿದರು.








