ಬೆಳಗಾವಿ, ಏಪ್ರಿಲ್ 30 : ರಾಜ್ಯದ ಲಕ್ಷಾಂತರ ಗೃಹಿಣಿಯರಿಗೆ ಹರ್ಷದ ಸುದ್ದಿಯೊಂದು ಲಭಿಸಿದೆ. ‘ಗೃಹಲಕ್ಷ್ಮೀ’ ಯೋಜನೆಯಡಿ ಬಾಕಿ ಉಳಿದಿರುವ ಜನವರಿ, ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಮೂರು ಕಂತಿನ ಹಣವನ್ನು ಈ ಮೇ ತಿಂಗಳಲ್ಲಿ ಬಿಡುಗಡೆ ಮಾಡುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಹಣಕಾಸು ಇಲಾಖೆಯಿಂದ ಸಹ ಅನುಮೋದನೆ ಸಿಕ್ಕಿದೆ ಎಂದು ತಿಳಿಸಿದ್ದಾರೆ. “ಒಂದು ವಾರದಲ್ಲಿ ಒಂದು ತಿಂಗಳ ಹಣ, ಮತ್ತೊಂದು ವಾರದಲ್ಲಿ ಉಳಿದ ಎರಡು ತಿಂಗಳ ಹಣಗಳನ್ನು ಫಲಾನುಭವಿಗಳ ಖಾತೆಗಳಿಗೆ ಜಮ ಮಾಡಲಾಗುತ್ತದೆ,” ಎಂದರು.
ಯೋಜನೆಯ ವಿಳಂಬದಿಂದಾದ ಆತಂಕ:
ಮೂರೂ ತಿಂಗಳ ಕಂತುಗಳು ತಡವಾಗಿದ್ದರಿಂದ ಹಲವಾರು ಮಹಿಳೆಯರು ಬೇಸತ್ತು, ಹಣಕಾಸು ಸಂಕಷ್ಟವನ್ನು ಅನುಭವಿಸುತ್ತಿದ್ದರು. ಈ ಹಣದಿಂದ ಮನೆ ಮೊತ್ತದ ಖರ್ಚು ನಿರ್ವಹಿಸುತ್ತಿದ್ದವರಿಗಿದು ನಿರೀಕ್ಷಿತ ನಿರ್ಧಾರವಾಗಿದೆ.
ಬಿಜೆಪಿಯ ಟೀಕೆ – ಸಚಿವೆಯ ತಿರುಗೇಟು:
ಬಿಜೆಪಿ ಈ ಬಗ್ಗೆ ಕಿಡಿಕಾರಿದ್ದು, “ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ಅಭಿವೃದ್ಧಿಗೆ ಹಣ ಸಿಗದೆ ಸಾಲದಲ್ಲಿ ಮುಳುಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯೊಂದಿಗೆ ಜನತೆಗೆ ಮೋಸ ಮಾಡುತ್ತಿದೆ,” ಎಂದು ಆರೋಪಿಸಿದೆ.
ಇದಕ್ಕೆ ತೀವ್ರ ಪ್ರತಿಕ್ರಿಯೆ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್, “ಬಿಜೆಪಿಯವರು ಮೊದಲು ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಲಿ. ಇಂಧನ, ಗ್ಯಾಸ್, ದಿನಸಿ ಬೆಲೆ ಏರಿಸಿದ್ದು ಕೇಂದ್ರವೇ. ರೈತರ ನೆರವಿಗಾಗಿ ಹಾಲಿನ ಬೆಲೆ ಏರಿಸಿದ್ದು ಜನರಿಗೆ ಹೊರೆ ಆಗಿಲ್ಲ,” ಎಂದು ಸ್ಪಷ್ಟಪಡಿಸಿದರು.ಇದನ್ನು ಓದಿ –ಪಹಲ್ಗಾಮ್ ದಾಳಿಗೆ ತಕ್ಕ ಪ್ರತೀಕಾರಕ್ಕೆ ಸೇನೆಗೆ ಸಂಪೂರ್ಣ ಹಸಿರು ನಿಶಾನೆ: ಪ್ರಧಾನಿ ಮೋದಿ
ರಾಜಕೀಯದ ಪ್ರತಿದ್ವನಿ:
“ರಾಜ್ಯ ಬಿಜೆಪಿ ನಾಯಕರು ಕೇಂದ್ರದ ವಿರುದ್ಧ ಧೈರ್ಯದಿಂದ ನಿಲ್ಲಲಾಗದೆ, ಕಾಂಗ್ರೆಸ್ ವಿರುದ್ಧ ಮಾತನಾಡುತ್ತಾರೆ. ಇದು ಜನತೆಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ,” ಎಂದು ಅವರು ಗುಡುಗಿದರು.