ಭಾರತ ದೇಶದಲ್ಲಿ ಮಾತೃದೇವೋಭವ, ಪಿತೃದೇವೋಭವ, ಆಚಾರ್ಯ ದೇವೋಭವ ಅಂದರೆ ತಾಯಿ ತಂದೆ ಗುರು ಈ ಮೂವರನ್ನು ಅತ್ಯಂತ ಪೂಜನೀಯ ವ್ಯಕ್ತಿಗಳು ಎಂದು ಭಾವಿಸಿ ಗೌರವಿಸಿದ್ದಾರೆ. ಹೊತ್ತು ಹೆತ್ತು ಲಾಲಿಸಿ ಮೊಲೆಯೂಡಿಸಿದ ತಾಯಿ ನಮ್ಮ ಪ್ರಥಮ ಪೂಜಿತಳಾದರೆ ನಮ್ಮನ್ನು ಪೋಷಿಸಿ ಬೆಳೆಸಿ ನಮ್ಮ ಅಭ್ಯುದಯದಲ್ಲಿಯೇ ತಮ್ಮ ಬಾಳಿನ ಸಾರ್ಥಕತೆಯನ್ನು ಕಾಣುವ ತಂದೆ ಕೂಡ ಪೂಜನೀಯರು. ಬದುಕು ಎಂಬ ಭವ ಸಾಗರವನ್ನು ದಾಟಲು ಬೇಕಾದ ಶಿಕ್ಷಣ ಹಾಗೂ ಮೌಲ್ಯಗಳನ್ನು ಕಲಿಸಿಕೊಡುವ ಗುರು ಕೂಡ ನಮಗೆ ಪೂಜನೀಯರು.
ಇದರ ಜೊತೆಗೆ ಅತಿಥಿ ದೇವೋಭವ ಎಂಬ ಪರಿಕಲ್ಪನೆ ಕೂಡ ನಮ್ಮಲ್ಲಿದೆ. ನಮ್ಮ ಮನೆಗೆ ಬರುವ ಅತಿಥಿಗಳು ಕೂಡ ದೇವತಾ ಸ್ವರೂಪಿಗಳು ಎಂಬ ಅರ್ಥವನ್ನು ನೀಡುವ ಈ ವಾಕ್ಯ ಭಾರತೀಯ ಸಂಸ್ಕೃತಿಯಲ್ಲಿ ಅತಿಥಿಗಳಿಗೆ ಇರುವ ಮಹತ್ವವನ್ನು ಸಾರಿ ಹೇಳುತ್ತದೆ.
12ನೇ ಶತಮಾನದಲ್ಲಿ ಬಸವಣ್ಣನವರು ತಮ್ಮ ಮನೆಗೆ ಭಕ್ತರ ವೇಷದಲ್ಲಿ ಬಂದ ಕಳ್ಳರನ್ನು ಕೂಡ ಅತಿಥಿ ಎಂದು ಆದರಿಸಿ ಅವರ ಮನ ಪರಿವರ್ತನೆಗೆ ಕಾರಣರಾದರು.. ಶರಣ ಸಂಸ್ಕೃತಿಯಲ್ಲಿ ಅತಿಥಿಗಳಿಗೆ ಮಾಡುವ ದಾಸೋಹ ಸಂಪತ್ತಿನ ವಿನಿಯೋಗದ ಅತ್ಯುತ್ಕೃಷ್ಟ ವಿಧಾನಗಳಲ್ಲಿ ಒಂದಾಯಿತು…. ಅದುವೇ ಅವರ ಜೀವನದ ಮಾರ್ಗಸೂಚಿಯಾಯಿತು ಎಂದರೆ ಕೂಡ ತಪ್ಪಿಲ್ಲ.
ಇದಕ್ಕೆ ಪೂರಕವಾಗಿ ಸ್ವಾಮಿ ವಿವೇಕಾನಂದರು ಹೇಳಿದ ಒಂದು ಕಥೆಯನ್ನು ನೋಡೋಣ.
ಆತ ಓರ್ವ ಸನ್ಯಾಸಿ. ಊರೂರು ತಿರುಗುತ್ತಾ ಧರ್ಮ ಪ್ರಸಾರ ಮಾಡುತ್ತಾ ಕೊಟ್ಟಷ್ಟು ಭಿಕ್ಷೆಯನ್ನು ಪಡೆದು ಜೀವನ ಸಾಗಿಸುತ್ತಿದ್ದ ಸಂತ. ಅದೊಂದು ದಿನ ತಾನು ಉಳಿದುಕೊಂಡಿದ್ದ ರಾಜ್ಯದ ರಾಜಕುಮಾರಿಯ ಸ್ವಯಂವರದ ವಿಷಯವನ್ನು ತಿಳಿದು ಅಲ್ಲಿ ಏನು ನಡೆಯುತ್ತದೆ ಎಂಬ ಸಹಜ ಕುತೂಹಲದಿಂದ ಬಂದು ಪಾಲ್ಗೊಂಡ ವ್ಯಕ್ತಿ. ಹಲವಾರು ರಾಜ್ಯಗಳಿಂದ ಬಂದ ರಾಜಕುಮಾರರು ಕೂಡ ಆ ಯಜ್ಞದಲ್ಲಿ ಪಾಲ್ಗೊಂಡಿದ್ದರು.
ಸಭೆಗೆ ಬಂದ ರಾಜಕುಮಾರಿ ಅಲ್ಲಿದ್ದ ರಾಜಕುಮಾರ ರನ್ನು ನೋಡಿ ಅಂತಿಮವಾಗಿ ಒಳ್ಳೆಯ ಅಂಗ ಸೌಷ್ಟವವನ್ನು, ಪ್ರಶಾಂತ ಮುಖ ಮುದ್ರೆಯನ್ನು ಹೊಂದಿದ್ದ ಸನ್ಯಾಸಿಯತ್ತ ಆಕರ್ಷಿತಳಾಗಿ ಆತನಿಗೆ ಹಾರ ಹಾಕಲು ಬಂದಳು.
.’ ಅಯ್ಯೋ!, ನಾನು ಲೌಕಿಕದ ವ್ಯಕ್ತಿಯಲ್ಲ’ ಎಂದು ಸನ್ಯಾಸಿ ಅಲ್ಲಿಂದ ದಾಪುಗಾಲು ಹಾಕುತ್ತಾ ಸಭೆಯಿಂದ ಹೊರಗೆ ನಡೆದರೆ ಆ ರಾಜಕುಮಾರಿಯೂ ಆತನ ಹಿಂದೆ ಹಾರ ಹಿಡಿದು ಹಿಂಬಾಲಿಸಿದಳು… ಈಗಾಗಲೇ ರಾಜಕುಮಾರಿಯ ಚಿತ್ರಪಟವನ್ನು ನೋಡಿ ಮೆಚ್ಚಿಕೊಂಡ ರಾಜಕುಮಾರ ಕೂಡ ಆಕೆಯನ್ನು ಹಿಂಬಾಲಿಸಿದ.
ಸನ್ಯಾಸಿಯನ್ನು ಹಿಂಬಾಲಿಸಿ ಆತನ ವೇಗವನ್ನು ಸರಿಗಟ್ಟಲಾರದೆ ದಾಪುಗಾಲು ಹಾಕುತ್ತಿದ್ದ ರಾಜಕುಮಾರಿ, ರಾಜಕುಮಾರಿಯನ್ನು ಹಿಂಬಾಲಿಸಿ ರಾಜಕುಮಾರ ಹೀಗೆಯೇ ನಡಿಗೆ ಓಟವಾಗಿ ಪರಿಣಮಿಸಿ ಅಂತಿಮವಾಗಿ ಸನ್ಯಾಸಿ ಅಲ್ಲಿಯೇ ಹತ್ತಿರದ ಕಾಡಿನಲ್ಲಿ ಕಣ್ಮರೆಯಾಗಿ ಬಿಟ್ಟ. ಆತನನ್ನು ಹುಡುಕುತ್ತಾ ರಾಜಕುಮಾರಿ ಮತ್ತು ಪಕ್ಕದ ರಾಜ್ಯದ ರಾಜಕುಮಾರ ಗೊಂಡಾರಣ್ಯದಲ್ಲಿ ಕಳೆದುಹೋದರು. ಇಷ್ಟೊತ್ತಿಗೆ ಕತ್ತಲು ಆವರಿಸಿ ಕಾಡಿನಲ್ಲಿ ದಾರಿ ಸಿಗದೆ ಅವರಿಬ್ಬರೂ ದಿಕ್ಕು ತಪ್ಪಿದಂತಾದರು
ಏನು ಮಾಡಲೂ ತೋಚದೆ ಅಲ್ಲಿಯೇ ಇದ್ದ ಮರದ ಬುಡದಲ್ಲಿ ಆಶ್ರಯ ಪಡೆದರು. ರಾಜಕುಮಾರ ಮತ್ತು ರಾಜಕುಮಾರಿ ಇಬ್ಬರಿಗೂ ಹಸಿವು, ಬಾಯಾರಿಕೆ ಮತ್ತು ಬಳಲಿಕೆಗಳು ಹೆಚ್ಚಾಗಿದ್ದರೂ ಕಾಡಿನಲ್ಲಿ ಯಾವುದಕ್ಕೂ ಆಸ್ಪದವಿಲ್ಲದೆ ಹೋಗಿತ್ತು. ಮರದ ಬೊಡ್ಡೆಗೆ ಒರಗಿದ ರಾಜಕುಮಾರಿ ಹಸಿವಿನಿಂದ ಕಂಗೆಟ್ಟಿದ್ದು ಸ್ಪಷ್ಟ ಗೋಚರವಾಗುತ್ತಿತ್ತು. ರಾಜಕುಮಾರ ಕೂಡ ಅಸಹಾಯಕನಾಗಿದ್ದ.
ಆ ಮರದ ಪೊಟರೆಯೊಂದರಲ್ಲಿ ಗೂಡು ಕಟ್ಟಿಕೊಂಡು ಒಂದು ಜೊತೆ ಪಕ್ಷಿಗಳು ತಮ್ಮ ಮರಿ ಗಳೊಂದಿಗೆ ವಾಸವಾಗಿದ್ದವು. ಕಾಡಿನಲ್ಲಿ ವಾಸವಾಗಿದ್ದ ಪಕ್ಷಿ ಪ್ರಪಂಚದ ಅವು ತಮ್ಮ ಮನೆಯ ಬಾಗಿಲಿಗೆ ಬಂದ ಅವರೀರ್ವರನ್ನು ಅವಶ್ಯಕತೆ ಇಲ್ಲದೆ ಹೋದರೂ ಕೂಡ ಅತಿಥಿಗಳು ಎಂದು ಭಾವಿಸಿದವು. ಕಾಡಿನ ಶೀತಲ ಮಂದ ಮಾರುತಕ್ಕೆ ಅವರ ಸುಕುಮಾರ ದೇಹಗಳು ನಡುಗುತ್ತಿರುವುದು ಸ್ಪಷ್ಟ ಗೋಚರವಾಗುತ್ತಿತ್ತು.
ಕೂಡಲೇ ಕಾರ್ಯಪ್ರವೃತ್ತರಾದ ಎರಡು ಹಕ್ಕಿಗಳು ಅಲ್ಲಲ್ಲಿ ಇದ್ದ ಸಣ್ಣ ಪುಟ್ಟ ಕಟ್ಟಿಗೆಯ ತುಂಡುಗಳನ್ನು ತಂದು ಅವರ ಮುಂದೆ ಹಾಕಿದವು. ತುಸು ದೂರ ಹಾರಿ ಹೋದ ಗಂಡು ಹಕ್ಕಿ ಯಾವುದೋ ಒಂದು ಮನೆಯ ಒಲೆಯ ಉರಿಯಿಂದ ಬೆಂಕಿ ಹತ್ತಿದ ಕಟ್ಟಿಗೆಯ ತುಂಡನ್ನು ತಂದು ತಾವು ರಾಶಿ ಹಾಕಿದ ಕಟ್ಟಿಗೆಯ ಗುಂಪಿಗೆ ಬೆಂಕಿ ಇಕ್ಕಿತು.ಇದನ್ನು ನೋಡಿ ರಾಜಕುಮಾರ ಕೂಡ ಸುತ್ತ ಇದ್ದ ಕಟ್ಟಿಗೆಯ ತುಂಡುಗಳನ್ನು ಆರಿಸಿ ತಂದು ಒಟ್ಟು ಮಾಡಿ ಉರಿಯನ್ನು ಹೆಚ್ಚಿಸಲು ಅನುವು ಮಾಡಿದ. ಬೆಂಕಿಯ ಬೆಚ್ಚಗಿನ ಶಾಖದಿಂದ ಅವರಿಬ್ಬರೂ ಚಳಿಯಿಂದ ಕೊಂಚಮಟ್ಟಿಗೆ ಪಾರಾದರು ಆದರೆ ಅವರ ಹಸಿವು ಅವರ ಮುಖದಲ್ಲಿ ಸ್ಪಷ್ಟ ಗೋಚರವಾಗುತ್ತಿತ್ತು.
ತುಸು ಯೋಚಿಸಿದ ಗಂಡು ಹಕ್ಕಿ ತನ್ನ ಮನೆಗೆ ಬಂದ ಅತಿಥಿಗಳು ಉಪವಾಸ ಇರುವುದು ಬೇಡ ಎಂದು ಭಾವಿಸಿ ತಾನೇ ಅವುಗಳಿಗೆ ಆಹಾರವಾಗುತ್ತೇನೆ ಎಂದು ಯೋಚಿಸಿ ಕಟ್ಟಿಗೆಯ ಒಲೆಯ ಉರಿಗೆ ಬಿದ್ದು ಸತ್ತು ಹೋಯಿತು. ಇದನ್ನು ನೋಡಿದ ಹೆಣ್ಣು ಹಕ್ಕಿ ಅವರಿಬ್ಬರ ಹೊಟ್ಟೆ ಹಸಿವನ್ನು ನೀಗಿಸಲು ತನ್ನ ಪತಿಯ ದೇಹದ ಮಾಂಸ ಸಾಕಾಗುವುದಿಲ್ಲ ಎಂದು ಯೋಚಿಸಿ ಮಕ್ಕಳ ಮೈ ನೇವರಿಸಿ ತಾನು ಕೂಡ ಬೆಂಕಿಯ ಝಳಕ್ಕೆ ಬಿದ್ದು ಸತ್ತು ಹೋಯಿತು. ಇದನ್ನು ನೋಡಿದ ಮರಿ ಹಕ್ಕಿಗಳು ಬದುಕಿನಲ್ಲಿ ಮನೆಗೆ ಬಂದ ಅತಿಥಿಗಳನ್ನು ನೋಡಿಕೊಳ್ಳಲು ಪ್ರಾಣವನ್ನೇ ತೆತ್ತ ತಮ್ಮ ಪಾಲಕರಿಂದ ಬಹುದೊಡ್ಡ ಬದುಕಿನ ಪಾಠವನ್ನು ಕಲಿತರು.
ಇಷ್ಟೊಂದು ತ್ಯಾಗದ ಅಗತ್ಯ ಇದೆಯೇ? ಎಂದು ನಮಗೆ ಅನ್ನಿಸಬಹುದು. ಇದು ಸಾಧ್ಯವೇ! ಹೀಗೆಲ್ಲಾದರೂ ನಡೆದಿರುವುದು ಉಂಟೇ? ಎಂದು ಅಚ್ಚರಿ ಕೂಡ ಆಗಬಹುದು…ಆದರೆ ಸ್ನೇಹಿತರೇ ಕೊರೊನಾದ ಸಂಕಷ್ಟ ಕಾಲದಲ್ಲಿ ದೈನಂದಿನ ದುಡಿಮೆಯನ್ನು ಕಳೆದುಕೊಂಡು ಒಂದು ಹೊತ್ತಿನ ಊಟಕ್ಕೂ ಒದ್ದಾಡುತ್ತಿರುವ ಸಮಯದಲ್ಲಿ ಸಹಾನುಭೂತಿ ಹೊಂದಿದ ಸಾಕಷ್ಟು ಜನ ತಮ್ಮ ಪ್ರಾಣಕ್ಕೆ ಎರವಾಗುವ ಅಪಾಯವನ್ನು ಲೆಕ್ಕಿಸದೆ ಕಾರ್ಯನಿರ್ವಹಿಸಿ ಬಡವ, ದೀನ, ಅಸಹಾಯಕ, ವೃದ್ಧ ಜನರಿಗೆ ದಿನಸಿ, ಕನಿಷ್ಠ ಒಪ್ಪೊತ್ತಿನ ಊಟ,ಆರೋಗ್ಯ ಸೇವೆಗಳ ಜೊತೆಗೆ ಸತ್ತ ರೋಗಿಗಳ ಶವ ಸಂಸ್ಕಾರಕ್ಕೆ ಕಟಿಬದ್ಧರಾಗಿ ನಿಂತರು.
ಹೀಗೆ ಮಾಡಬೇಕೆಂದು ಅವರನ್ನು ಯಾರೂ ಒತ್ತಾಯಿಸಿಲ್ಲ ನಿಜ, ಆದರೆ ಬದುಕಿನ ಹತ್ತು ಹಲವು ನೋವು, ಅಸಹಾಯಕತೆ, ದುಃಖ, ಬೇಗುದಿಗಳನ್ನು ಹೊಂದಿದ ಅವರು ತಮ್ಮಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ ಎಂಬ ಸರ್ವಜ್ಞನ ವಚನಗಳ ಸಾರವನ್ನು ಅರಿತೋ ಅರಿಯದೆಯೂ ಭಾರತೀಯ ಸಂಸ್ಕೃತಿಯನ್ನು ಪಾಲಿಸಿದ್ದರು.
ವಿಶ್ವದ ಬಹುತೇಕ ಎಲ್ಲಾ ಧರ್ಮ ಗ್ರಂಥಗಳ ಸಾರ ಹೇಳುವುದು ಕೂಡ ಅದನ್ನೇ…. ವ್ಯಕ್ತಿಯು ತಾನು ದುಡಿದ ಸಂಪತ್ತನ್ನು ನಾಲ್ಕು ಭಾಗಗಳನ್ನಾಗಿ ಮಾಡಿ ಅದರಲ್ಲಿ ಒಂದು ಭಾಗ ತನ್ನ ಉಪಜೀವನಕ್ಕೆ, ಒಂದು ಭಾಗ ಕಾಯಿಲೆ ಕಸಾಲೆ ಮತ್ತಿತರ ಖರ್ಚು ವೆಚ್ಚಗಳಿಗೆ, ಒಂದು ಭಾಗವನ್ನು ತಮ್ಮ ಮಕ್ಕಳ ವಿದ್ಯಾಭ್ಯಾಸ, ಮದುವೆಯಂತಹ ಭವಿಷ್ಯದ ಖರ್ಚುಗಳಿಗೆ ಹಾಗೂ ಕೊನೆಯ ಒಂದು ಭಾಗವನ್ನು ಸಮಾಜದ ಉನ್ನತಿಗೆ ನೀಡಲೇಬೇಕು ಎಂದು ಭೋದಿಸುತ್ತವೆ.
ನಮ್ಮ ರೈತರಂತೂ ಒಕ್ಕುಂಡು ಮಿಕ್ಕುದನ್ನು ದಾನಮಾಡು ಎಂದೇ ಹೇಳುತ್ತಾರೆ. ಅಂತೆಯೇ ಅವರು ತಮ್ಮ ಹೊಲಗಳಲ್ಲಿ ಬೆಳೆದ ಬೆಳೆಯನ್ನು ಕಣಕ್ಕೆ ತಂದು ರಾಶಿ ಮಾಡುವಾಗ ಬರುವ ಎಲ್ಲಾ ಆಯಕಾರರಿಗೆ ತಮ್ಮ ಕೈಲಾದಷ್ಟು ಧಾನ್ಯಗಳನ್ನು ದಾನ ಮಾಡುವ ಪದ್ಧತಿಯನ್ನು ಅನೂಚಾನವಾಗಿ ನಡೆಸಿಕೊಂಡು ಬಂದಿದ್ದಾರೆ. ಕೇಳುವವರಿಲ್ಲದೆ ನಾನು ಬಡವಾದೆನಯ್ಯ ಎಂದು ಬಸವಾದಿ ಶಿವ ಶರಣರು ಗೋಳಿಟ್ಟದ್ದೂ ಉಂಟು.
ಆದ್ದರಿಂದ ಸ್ನೇಹಿತರೆ, ಬದುಕಿನಲ್ಲಿ ಅನಿವಾರ್ಯ ಕಾರಣಗಳಿಂದ ತೊಂದರೆಗೆ ಸಿಲುಕಿಕೊಂಡ ಜನರಿಗೆ ಸಹಾಯ ಮಾಡುವುದರಲ್ಲಿ ತಪ್ಪಿಲ್ಲ. ಅಯ್ಯೋ ಇವರು ಕಳ್ಳರು ಕಣ್ರೀ..ಇವರದೇ ಒಂದು ಗುಂಪು ಇದ್ದು ಆ ಗುಂಪಿನಲ್ಲಿ ಇವರು ಭಿಕ್ಷಾಟನೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡಿರುತ್ತಾರೆ ಎಂದು ಹೇಳಬೇಡಿ. ಅಂತವರಿಗೆ ದುಡ್ಡನ್ನು ನೀಡುವುದರ ಬದಲು ಆಹಾರವನ್ನು ಮಾತ್ರ ಕೊಡಿಸಿ.
ಮತ್ತೆ ಕೆಲವೊಮ್ಮೆ ನಿಜವಾಗಿಯೂ ಅಸಹಾಯಕತೆಯ ನೆವ ಹೂಡಿ ಬರುವವರನ್ನು ಸೂಕ್ಷ್ಮವಾಗಿ ದೂರವಿರಿಸಿ ಆದರೆ ಮನೆಗೆ ಬರುವ ಅತಿಥಿಗಳಲ್ಲಿ ಯಾವುದೇ ತಾರತಮ್ಯ ಬೇಡ. ಅವರ ಬಡತನ ಸಿರಿತನ ಕಟ್ಟಿಕೊಂಡು ನೀವೇನು ಮಾಡಬೇಕು…ನಿಮ್ಮ ಮನೆಗೆ ಬಂದ ಅವರು ನಿಮ್ಮ ಅತಿಥಿಗಳು ಮಾತ್ರ ಎಂದು ಭಾವಿಸಿ , ಅವರನ್ನು ಸಮಾನವಾಗಿ ಕಂಡು ಆದರಿಸಿ ಸತ್ಕರಿಸಿ.
12ನೇ ಶತಮಾನದಲ್ಲಿ ಬಸವಣ್ಣನವರು
ಏನು ಬಂದಿರಿ ಹದುಳಿದ್ದಿರೆ ಎಂದಡೆ
ನಿಮ್ಮ ಮೈಸಿರಿ ಹಾರಿ ಹೋಹುದೆ,
ಕುಳ್ಳಿರೆಂದಡೆ ನೆಲ ಕುಳಿಹೋಹುದೆ,
ಒಡನೆ ನುಡಿದಡೆ ಸಿರ ಹೊಟ್ಟೆಯೊಡೆವುದೆ, ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದಡೆ
ಮೂಗ ಕೊಯ್ವುದ ಮಾಬನೆ ಕೂಡಲಸಂಗಮದೇವಯ್ಯ .
ಎಂದು ಹೇಳಿರುವುದು.
ನಿಮ್ಮ ಮನೆಗೆ ಬರುವವನು ನಿಮ್ಮ ಶತ್ರುವೇ ಆದರೂ ಕೂಡ ಆತನನ್ನು ಕರೆದು ಕುಳ್ಳಿರಿಸಿ ನೀರುಕೊಟ್ಟು ಯೋಗ ಕ್ಷೇಮ ವಿಚಾರಿಸಬೇಕಾದ್ದು ಅತಿಥೇಯರಾದ
ನಮ್ಮ ಕರ್ತವ್ಯ ಎಂದು ನೆನಪಿಸಿದ್ದಾರೆ
ಏನಂತೀರಾ ಸ್ನೇಹಿತರೆ ?

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ








