ಸಿಡ್ನಿ: ಆಸ್ಟ್ರೇಲಿಯಾದ ಬೊಂಡಿ ಬೀಚ್‌ನಲ್ಲಿ ಯಹೂದಿ ಸಮುದಾಯದ ಮೇಲೆ ನಡೆದ ಭೀಕರ ಗುಂಡಿನ ದಾಳಿಯಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ. ಈ ದಾಳಿಯನ್ನು ಆಸ್ಟ್ರೇಲಿಯಾ ಸರ್ಕಾರ ಉಗ್ರರ ಕೃತ್ಯವಾಗಿ ಪರಿಗಣಿಸಿದ್ದು, ಪಾಕಿಸ್ತಾನ ಮೂಲದ ತಂದೆ ಮತ್ತು ಮಗ ಈ ಹತ್ಯಾಕಾಂಡ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಹೂದಿಗಳ ಹನುಕ್ಕಾ ಹಬ್ಬದ ಆಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಬೀಚ್ ಸಮೀಪದ ಸಣ್ಣ ಉದ್ಯಾನವನದಲ್ಲಿ ಆಯೋಜಿಸಿದ್ದ ಹನುಕ್ಕಾ ಕಾರ್ಯಕ್ರಮದಲ್ಲಿ ಸುಮಾರು 1,000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಅಲ್ಲಿ ಅಚಾನಕ್ ಆಗಿ ಇಬ್ಬರು ಬಂದೂಕುಧಾರಿಗಳು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ಸುಮಾರು 10 ನಿಮಿಷಗಳ ಕಾಲ ಭೀತಿ ಆವರಿಸಿತು. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ನ್ಯೂ ಸೌತ್ ವೇಲ್ಸ್ ಪೊಲೀಸ್ ಆಯುಕ್ತ ಮಾಲ್ ಲ್ಯಾನ್ಯನ್ ಮಾಹಿತಿ ನೀಡಿರುವಂತೆ, ದಾಳಿ ನಡೆಸಿದವರಲ್ಲಿ 50 ವರ್ಷದ ಸಾಜಿದ್ ಅಕ್ರಮ್ ಎಂಬಾತನನ್ನು ಪೊಲೀಸರು ಸ್ಥಳದಲ್ಲೇ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಆತನ 24 ವರ್ಷದ ಮಗ ನವೀದ್ ಅಕ್ರಮ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ತಂದೆ–ಮಗ ಇಬ್ಬರೂ ಪಾಕಿಸ್ತಾನ ಮೂಲದವರು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಸಾಜಿದ್ ಅಕ್ರಮ್ ಸ್ಥಳೀಯವಾಗಿ ಹಣ್ಣು ಅಂಗಡಿ ನಡೆಸುತ್ತಿದ್ದ ವ್ಯಕ್ತಿಯಾಗಿದ್ದಾನೆ. ಆತನ ಮಗ ನವೀದ್ ಅಕ್ರಮ್ ಸಿಡ್ನಿಯ ಸೆಂಟ್ರಲ್ ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯ ಹಾಗೂ ಇಸ್ಲಾಮಾಬಾದ್‌ನ ಹಮ್‌ದರ್ಡ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಜೊತೆಗೆ ಪಶ್ಚಿಮ ಸಿಡ್ನಿಯ ಹೆಕೆನ್‌ಬರ್ಗ್ ಪ್ರದೇಶದಲ್ಲಿರುವ ಅರೇಬಿಕ್ ಮತ್ತು ಕುರಾನ್ ಅಧ್ಯಯನ ಕಲಿಸುವ ಅಲ್–ಮುರಾದ್ ಸಂಸ್ಥೆಯಲ್ಲಿ ನವೀದ್ ಕುರಾನ್ ಅಧ್ಯಯನ ಮಾಡಿಕೊಂಡಿದ್ದ ಮಾಹಿತಿ ಲಭ್ಯವಾಗಿದೆ.
ಆಸ್ಟ್ರೇಲಿಯಾದಲ್ಲಿ ಅತ್ಯಂತ ಕಠಿಣ ಬಂದೂಕು ನಿಯಂತ್ರಣ ಕಾನೂನುಗಳು ಜಾರಿಯಲ್ಲಿದ್ದರೂ, ಕಳೆದ ಸುಮಾರು ಮೂರು ದಶಕಗಳಲ್ಲಿ ಸಂಭವಿಸಿದ ಅತ್ಯಂತ ಮಾರಕ ಗುಂಡಿನ ದಾಳಿ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಬಳಿಕ ದೇಶಾದ್ಯಂತ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದ್ದು, ಉಗ್ರ ಸಂಪರ್ಕಗಳ ಬಗ್ಗೆ ವಿಸ್ತೃತ ತನಿಖೆ ಕೈಗೊಳ್ಳಲಾಗಿದೆ.ಇದನ್ನು ಓದಿ –ಶಾಮನೂರು ಶಿವಶಂಕರಪ್ಪ ವಿಧಿವಶ -ಇಂದು ಸಂಜೆ ಅಂತ್ಯಸಂಸ್ಕಾರ
ಈ ದಾಳಿಯಿಂದ ಆಸ್ಟ್ರೇಲಿಯಾದ ಜನತೆ ಆಘಾತಗೊಂಡಿದ್ದು, ಪ್ರಧಾನಿ ಹಾಗೂ ರಾಜ್ಯ ನಾಯಕರು ಮೃತರಿಗೆ ಸಂತಾಪ ಸೂಚಿಸಿದ್ದಾರೆ.








