ಮಂಡ್ಯ: ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ನಾವು ಬದ್ದರಾಗಿದ್ದೇವೆ. ಕೃಷಿ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಮುಂದಾದಾಗ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಸಹೋದರ ಹೆಚ್.ಡಿ. ರೇವಣ್ಣ ರಾಜ್ಯಪಾಲರಿಗೆ ದೂರು ನೀಡುತ್ತಾರೆ. ಆದರೆ, ಈ ಕುರಿತು ಮಂಡ್ಯ ಸಂಸದರು ಮೌನವಾಗಿರುವುದು ಅರ್ಥಗರ್ಭಿತ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ ನಗರದ ಎ & ಎ ಸಮುದಾಯ ಭವನದಲ್ಲಿ ಆಯೋಜನೆಗೊಂಡಿದ್ದ “ಸರ್ಕಾರದ ನಡಿಗೆ ಕಾರ್ಯಕರ್ತರ ಕಡೆಗೆ” ಎಂಬ ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
“ಮೈಸೂರು ಮಹಾರಾಜರ ದೂರದೃಷ್ಟಿಯಿಂದ ಹುಟ್ಟಿದ ವಿ.ಸಿ. ಫಾರಂನಲ್ಲಿ ಕೃಷಿ ವಿಶ್ವವಿದ್ಯಾನಿಲಯ ತೆರೆಯಲು ನಾವು ಮುಂದಾಗಿದ್ದೇವೆ. ಆದರೆ ಇದಕ್ಕೆ ಕೇಂದ್ರ ಸಚಿವ ಸಹೋದರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ವಿಚಾರದಲ್ಲಿ ಮಂಡ್ಯ ಸಂಸದರು ಮೌನವಾಗಿರುವುದು ಸರಿಯೇ?” ಎಂದು ಪ್ರಶ್ನಿಸಿದರು.
ಶಾಶ್ವತ ಯೋಜನೆಗಳಿಗೆ ನಮ್ಮ ಬದ್ದತೆ
“ಮಂಡ್ಯ ಜಿಲ್ಲೆಯ ಜನರು ನಮಗೆ ರಾಜಕೀಯ ಶಕ್ತಿ ತುಂಬಿದಾಗ, ನಾವು ಶಾಶ್ವತ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದೇವೆ. ಆರೋಗ್ಯ ಸಚಿವನಾಗಿದ್ದಾಗ ಮೆಡಿಕಲ್ ಕಾಲೇಜು, ಆಸ್ಪತ್ರೆಗಳ ಅಭಿವೃದ್ಧಿ, ಸಾರಿಗೆ ಸಚಿವನಾಗಿದ್ದಾಗ ಬಸ್ ನಿಲ್ದಾಣಗಳ ಸುಧಾರಣೆ, ಕೆಎಸ್ಆರ್‌ಟಿಸಿ ವಿಭಾಗೀಯ ಕಚೇರಿ ಆರಂಭಿಸಿ ಬದ್ದತೆ ಮೆರೆದಿದ್ದೇನೆ,” ಎಂದು ಚಲುವರಾಯಸ್ವಾಮಿ ಹೇಳಿದರು.
“ಪ್ರಸ್ತುತ ಸರ್ಕಾರದಲ್ಲಿ ಮಂಜೂರಾತಿ ಪಡೆದಿರುವ ಕೃಷಿ ವಿಶ್ವವಿದ್ಯಾಲಯದಿಂದ ಕಾವೇರಿ ನದಿ ಪಾತ್ರದ ಐದು ಜಿಲ್ಲೆಗಳ ರೈತರು ಮತ್ತು ವಿದ್ಯಾರ್ಥಿಗಳಿಗೆ ಲಾಭವಾಗಲಿದೆ. ಸಂಶೋಧನೆ ಹಾಗೂ ಆವಿಷ್ಕಾರಗಳಿಂದ ರೈತರ ಪರಿಸ್ಥಿತಿ ಸುಧಾರಿಸಬಹುದು,” ಎಂದು ಸಚಿವರು ವಿವರಿಸಿದರು.
ಗ್ಯಾರಂಟಿ ಯೋಜನೆಗಳ ಲಾಭ ಮತ್ತು ಮುಂದಿನ ಚುನಾವಣಾ ತಯಾರಿ
“ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ 4 ಕೋಟಿ ಜನರಿಗೆ ಗ್ಯಾರಂಟಿ ಯೋಜನೆಗಳ ಲಾಭ ತಲುಪುತ್ತಿದೆ. ಪ್ರತಿವರ್ಷ ಮಂಡ್ಯ ಜಿಲ್ಲೆಯಲ್ಲಿ 1700 ಕೋಟಿ ರೂ. ಅನುದಾನ ಬಳಕೆಯಾಗುತ್ತಿದೆ. ಇದನ್ನು ಮತದಾರರಿಗೆ ಸಮಜಾಯಿಷಿ ಮಾಡಬೇಕು. ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಬೇಕು,” ಎಂದು ಕಾರ್ಯಕರ್ತರಿಗೆ ಸಚಿವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಮುಖ ನಾಯಕರು:
ಶಾಸಕರಾದ ರವಿಕುಮಾರ್ ಗೌಡ, ಪಿ.ಎಂ. ನರೇಂದ್ರಸ್ವಾಮಿ, ರಮೇಶ್ ಬಾಬು, ವಿಧಾನ ಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ, ಮಾಜಿ ಸದಸ್ಯ ಎನ್. ಅಪ್ಪಾಜಿಗೌಡ, ಮಾಜಿ ಶಾಸಕ ಹೆಚ್.ಬಿ. ರಾಮು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ರುದ್ರಪ್ಪ, ಅಪ್ಪಾಜಿ, ಕೆಪಿಸಿಸಿ ಜಿಲ್ಲಾ ಉಸ್ತುವಾರಿ ಮಂಜುನಾಥ್, ಮುಖಂಡರಾದ ಸಿ.ಕೆ. ನಾಗರಾಜು, ಯು.ಸಿ. ಶಿವಕುಮಾರ್, ಚಿದಂಬರ್, ಸಿ. ತ್ಯಾಗರಾಜು, ರವಿ ಬೋಜೆಗೌಡ, ಅಂಜನಾ ಶ್ರೀಕಾಂತ್, ಕೀಲಾರ ರಾಧಕೃಷ್ಣ, ಸಿದ್ದರೂಢ ಸತೀಶ್ ಗೌಡ, ರಾಮಲಿಂಗಯ್ಯ ಸೇರಿದಂತೆ ಹಲವರು ಈ ಸಭೆಯಲ್ಲಿ ಭಾಗವಹಿಸಿದ್ದರು.