ಮೊನ್ನೆ ಅಂದರೆ ಶುಕ್ರವಾರ ಸಂಜೆ ಒಂದು ಹೆಂಗಸು _ ನಮ್ಮ ಗ್ರಾಹಕರೇ, ಶಾಖೆಗೆ ಬಂದರು. ಈವರೆವಿಗೂ ನಾನು ಆಕೆಯನ್ನು ಎಂದೂ ನೋಡಿರಲಿಲ್ಲ. ಆಕೆಯ ಪತಿಯ ಪರಿಚಯ ಇತ್ತು ಆತನೂ ನಮ್ಮ ಗ್ರಾಹಕರೇ. ನೋಡಿದ ಕೂಡಲೇ ಮತ್ತೆ ಮತ್ತೆ ತಿರುಗಿ ನೋಡಬೇಕೆನ್ನುವಂಥ ರೂಪ. ನೀಲವೇಣಿ ಎನ್ನುತ್ತಾರಲ್ಲ ಹಾಗೆ ದಪ್ಪಕ್ಕೆ ಮಂಡಿಯವರೆಗೂ ಬರುವಂತಹ ಉದ್ದನಾದ ಕಡು ಕಪ್ಪು ಕೂದಲು, ಬೆಳ್ಳನೆಯ ಹಾಲಿನಂತಹ ಮುಖ, ಚಂದದ ನಗು, ಹಣೆಯ ಮೇಲೆ ಬೊಟ್ಟಿನ ಕೆಳಗೊಂದು ಪುಟ್ಟ ಕುಂಕುಮ ಬೊಟ್ಟು, ಮೇಲೊಂದು ಪುಡಿ ಕುಂಕುಮ . ನೋಡಿದ ಕೂಡಲೇ ಯಾವುದೋ ದೇವತೆ ಎನಿಸಬೇಕು ಅಂತಹ ರೂಪು.
ಆಕೆಯ ಪತಿ ಚಿನ್ನದ ಸಾಲ ರಿನ್ಯೂ ಮಾಡಲು ಬಂದಿದ್ದರು. ಅವರ ಕೆಲಸವಾಗಲು ಸ್ವಲ್ಪ ಸಮಯ ಹಿಡಿಯುತ್ತಿತ್ತು. ಹಾಗಾಗಿ ನಾನು ’ಮತ್ತೆ ಕರೆ ಮಾಡುತ್ತೇನೆ ಆಗ ಬನ್ನ” ಎಂದು ಹೇಳಿದೆ. ಅವರ ಗಂಡ ಕೆಲಸಕ್ಕೆ ಹೋಗಬೇಕಿತ್ತು. ಈ ಬಾರಿ ಹೆಂಡತಿಯ ಹೆಸರಿನಲ್ಲಿ ಸಾಲ ಮಾಡುತ್ತಿದ್ದುದರಿಂದ ನಾನು ’ನೀವೊಬ್ಬರೇ ಬನ್ನಿ ಮೇಡಂ ಪರವಾಗಿಲ್ಲಾ ಅವರ ಅವಶ್ಯಕತೆ ಏನಿಲ್” ಎಂದು ಹೇಳಿದೆ. ’ಅವಳನ್ನು ಕರೆದುಕೊಂಡು ಬರಲು ನಾನೇ ಬರಬೇಕ” ಎಂದರು. ನಾನು ಹುಬ್ಬೇರಿಸಿದಾಗ ’ಅವಳು ಟೂ ವೀಲರ್ ಹತ್ತುವುದಿಲ್ಲ, ಅವಳನ್ನು ಕಾರಿನಲ್ಲೇ ಕರೆದುಕೊಂಡು ಹೋಗಬೇಕು’ ಎಂದು ಆಕೆಯ ಮುಖವನ್ನು ನೋಡಿ ಮುಗುಳ್ನಗುತ್ತಾ ಹೇಳಿದರು. ಸುಮ್ಮನಿರಲಾರದೆ ನಾನು ’ಓ ಸಿರಿವಂತರ ಮಡದಿ’ ಎಂದು ತಿಳಿ ನಗುವಿನಲ್ಲಿ ಹೇಳಿದೆ. ಅದು ತೀರಾ ಸಾಮಾನ್ಯವೇ ಆಗಿತ್ತು; ಅದರಲ್ಲಿ ಅಪಹಸ್ಯವಾಗಲಲೀ, ವ್ಯಂಗ್ಯವಾಗಲೀ, ಕಟಕಿಯಾಗಲೀ ಇರಲಿಲ್ಲ. ಆಗ ಆತರು ’ಇಲ್ಲ ಅವಳ ಆರೋಗ್ಯ ಅದಕ್ಕೆ ಪರ್ಮಿಟ್ ಮಾಡುವುದಿಲ್ಲ. ಆದ್ದರಿಂದ ಕಾರು’ ಎಂದೂ ಹೇಳಿ ಹೊರಟರು.
ಆಕೆ ತುಸು ಕುಂಟುತ್ತಾ ನಡೆಯುವುದನ್ನು ಆಗ ಗಮನಿಸಿದೆ. ಯಾಕಾದರೂ ಆ ಮಾತನ್ನು ಹೇಳಿದೆನೋ ಎಂದು ನನ್ನ ಬಗ್ಗೆ ನನಗೆ ಆಸಹನೆ ಮೂಡಿತು. ಒಳಗೊಳಗೇ ತಪ್ಪಿತಸ್ಥ ಭಾವನೆ ಮೂಡತೊಡಗಿತ್ತು. ಬೇರೆ ಏನೇನು ಕೆಲಸವಿತ್ತು ಎಂದು ಕಾಣುತ್ತದೆ ಹಾಗಾಗಿ ನಾನು ಬೇಗನೆಯೇ ಕರೆ ಮಾಡಿದ್ದರೂ ಅವರು ಸಂಜೆ ಮುಂದು ಬಂದರು.
ಆಕೆ ಸಹಿ ಮಾಡುವಾಗ ’ಏನೋ ಬೆಳಗ್ಗೆ ಆರೋಗ್ಯದ ಸಮಸ್ಯೆ ಎಂದು ಹೇಳಿದ್ರಲ್ಲಾ ಏನದು’ ಎಂದು ಕೇಳಿದೆ. ನನ್ನ ತಪ್ಪಿತಸ್ಥ ಭಾವನೆಯನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾತ್ರವಲ್ಲದೆ ನಿಜವಾದ ಕಾಳಜಿಯೂ ಮೂಡಿತ್ತು.
ಆಕೆಯ ಗಂಡ ಹೇಳಿದರು ’ಸ್ಪೈನಲ್ ಕಾರ್ಡ್ ನಲ್ಲಿ ಏನೋ ತೊಂದರೆ ಇದೆ ಇದು ಸಾಮಾನ್ಯವಾಗಿ ಹತ್ತು ಸಾವಿರ ಜನರಲ್ಲಿ ಒಬ್ಬರಿಗೆ ಮಾತ್ರ ಬರುವಂತದ್ದು. ಇತ್ತೀಚಿಗೆ ಆಕೆಗೆ ಮೆದುಳಿನಲ್ಲಿಯೂ ಸಮಸ್ಯೆಯಾಗಿದೆ. ’ಸ್ಪೈನಲ್ ಕಾರ್ಡ್ ತೊಂದರೆಯೇ?’ ಎಂದು ಪ್ರಶ್ನಿಸಿದೆ. ಇದು ಕೇವಲ ಸ್ಪೈನಲ್ ಕಾರ್ಡ್ ತೊಂದರೆ ಅಲ್ಲ ಮೇಡಂ ಮಲ್ಟಿಪಲ್ ಪ್ರಾಬ್ಲಮ್’ ಎಂದು ಹೇಳಿದರು. ನನಗೆ ಏನೇನೂ ಅರ್ಥವಾಗಲಿಲ್ಲ. ಅವರೇ ಮುಂದುವರಿಸಿದರು. ’ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇರುತ್ತದೆ ಅಲ್ವಾ? ನೆಗಡಿಯೋ ಜ್ವರವೋ ಸಣ್ಣಪುಟ್ಟ ಕಾಯಿಲೆಯೋ ಬಂದಾಗ ಆ ರೋಗ ನಿರೋಧಕ ಶಕ್ತಿ ರೋಗದ ವಿರುದ್ಧ ಹೋರಾಟ ಮಾಡಿ ಅದನ್ನು ಓಡಿಸುತ್ತದೆ ತಾನೇ? ಆದರೆ ಆ ರೋಗ ನಿರೋಧಕ ಶಕ್ತಿಯೇ ಹೆಚ್ಚಾಗಿ ರೋಗದ ವಿರುದ್ಧ ತುಂಬಾ ಫೈಟ್ ಮಾಡಲು ತೊಡಗಿದರೆ ಕೇವಲ ರೋಗದ ವಿರುದ್ಧ ಮಾತ್ರವಲ್ಲದೆ ತಾನು ನಿಂತ ಸ್ಥಳವನ್ನು ನಾಶ ಮಾಡುತ್ತಾ ಹೋಗುತ್ತದೆ.’ ಎಂದು ಹೇಳಿದರು. ನನಗೆ ಸಖೇದಾಶ್ಚರ್ಯ.
’ನಮ್ಮ ರೋಗನಿರೋಧಕ ಶಕ್ತಿಯೇ ನಮ್ಮನ್ನು ಹಾಳು ಮಾಡುತ್ತದೆಯೇ’ ಎಂದು ಕೇಳಿದೆ. ಅದಕ್ಕೆ ಅತ ’ಮೇಡಂ ಹತ್ತು ಜನ ರೌಡಿಗಳು ಇದ್ದಾಗ ಇಪ್ಪತ್ತೋ ಮುವ್ವತ್ತೋ ಪೊಲೀಸರು ಬಂದು ನಿಂತು ಹೋರಾಟ ಮಾಡಿದರೆ ಸಮಸ್ಯೆ ಪರಿಹಾರ ಆಗುತ್ತದೆ. ಆದರೆ ಹತ್ತು ಜನ ರೋಡಿಗಳಿಗೆ ಸಾವಿರ ಜನ ಪೊಲೀಸರು ಬಂದು ನಿಂತು ಅಟ್ಯಾಕ್ ಮಾಡಿ ಅಲ್ಲೆಲ್ಲ ಜೋರಾಗಿ ಓಡಾಡಿ ತುಡಿದಾಡಿ ಘರ್ಷಣೆ ಮಾಡಿದರೆ, ಅವರವರಲ್ಲೇ ಕೆಲವೊಮ್ಮೆ ಗೊತ್ತಿಲ್ಲದೆಯೇ ಹೊಡೆದಾಟವಾಗಿ ಅಥವಾ ಕಾಲ್ ತುಳಿತವಾಗಿ ಆ ನೆಲವೆಲ್ಲ ಕದಡಿದಂತಾಗಿ ಗುಳಿ ಬಿದ್ದಂತಾಗುವುದಿಲ್ಲವೇ ಹಾಗೆ’ ಎಂದರು.
’ಹಾಗಿದ್ದರೆ ಕುರುಕ್ಷೇತ್ರ ನೆಲದಂತಾಗುತ್ತದೆ ಎನ್ನಿ’ ಎಂದೆ. ನನಗೆ ಅದೇಕೆ ಆ ಹೋಲಿಕೆ ಬಂದಿತು ಎಂದು ಇವತ್ತಿಗೂ ಅರ್ಥವಾಗಿಲ್ಲ. ಅವರು ’ಹೌದು ಮೇಡಂ ಕುರುಕ್ಷೇತ್ರ ನೆಲ ಇವತ್ತಿಗೂ ಕೆಂಪಾಗಿರುವ ಹಾಗೆಯೇ ಇಲ್ಲಿಯೂ ಆಗುತ್ತದೆ’ ಎಂದರು ’ಕೆಲವೊಮ್ಮೆ ಈಕೆಗೆ ನಡೆಯಲಾಗುವುದಿಲ್ಲ, ಕೆಲವೊಮ್ಮೆ ಕೈ ಎತ್ತಲಾಗುವುದಿಲ್ಲ, ಕೆಲವೊಮ್ಮೆ ತುಟಿ ಎಲ್ಲಿಯೋ ತಿರುತುತ್ತದೆ, ಕೆಲವೊಮ್ಮೆ ಕಣ್ಣು ಬೇರೆ ಕಡೆ ತಿರುಗುತ್ತದೆ. ಯಾವಾಗ ಏನಾಗುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ’ ಎಂದರು. ಆತ ಹೀಗೇನ್ನುವಾಗಲೂ ಆಕೆಯ ಮುಖದಲ್ಲಿ ತುಸುವೂ ನಗು ಮಾಸಿರಲಿಲ್ಲ. ಮನಸ್ಸಿನಲ್ಲಿ ಕ್ಲೇಷ ಅಥವಾ ಸಂಕಟ ಅಥವಾ ದುಃಖ ಉಂಟಾಗಿರಬಹುದು ಎಂಬ ನನ್ನ ನಿರೀಕ್ಷೆ ಸುಳ್ಳಾಯಿತು. ಆಕೆಗೆ ಕೈ ಎತ್ತಿ ಮುಗಿಯಬೇಕು ಎನಿಸಿತು. ಹೇಳಿದೆ – ’ಇಷ್ಟಾದರೂ ನೀವು ನಗುತ್ತಾ ಇದ್ದೀರಲ್ಲ; ನಿಜಕ್ಕೂ ಗ್ರೇಟ್’
’ಏನು ಮಾಡೋದಕ್ಕೆ ಆಗುತ್ತದೆ? ಬಂದಿದ್ದನ್ನು ಸ್ವೀಕರಿಸಬೇಕ’ಲ್ಲ ಎಂದು ಮುಗುಳ್ನಕ್ಕು ಹೇಳಿದರು. ’ಎಲ್ಲವನ್ನೂ ಸುಲಭ ಮಾಡಿಕೊಳ್ಳಬೇಕು. ಅನಿವಾರ್ಯ ಎಂದು ಗೊತ್ತಾದಾಗ ಒಪ್ಪಿಕೊಂಡು ನಡೆಯಬೇಕು. ಇಲ್ಲದಿದ್ದರೆ ಬದುಕು ಮತ್ತಷ್ಟು ದುರ್ಬರವಾಗುತ್ತದೆ’ ಎಂದರು. ’ಈಗ ಎಷ್ಟೋ ವಾಸಿ. ಈಗ ಕೊಡುತ್ತಿರುವ ಔಷಧಿಯಿಂದ ನಮ್ಮ ರೋಗ ನಿರೋಧಕ ಶಕ್ತಿ ಫೈಟಿಂಗ್ ಗೆ ಹೋಗುವುದನ್ನು ಕಡಿಮೆ ಮಾಡುತ್ತಿದೆ. ಈ ರೀತಿ ತಡೆಯಬಹುದೇ ವಿನಃ ಇದಕ್ಕೆ ಕಾರಣ ಏನು ಎಂಬುದು ಈವರೆಗೂ ಗೊತ್ತಾಗಿಲ್ಲ. ಅದನ್ನು ಇನ್ನೂ ಕಂಡು ಹಿಡಿದಿಲ್ಲ. ಮಗನೂ ಡಾಕ್ಟರ್’ ಎಂದರು. ’ನಿಮಗೆ ಅನಾರೋಗ್ಯವಾಗಿದ್ದಾಗ ಮನೆಯನ್ನು ಯಾರು ನಿರ್ವಹಿಸುತ್ತಿದ್ದರು? ಅಡುಗೆ ತಿಂಡಿ ಎಲ್ಲ ಹೇಗೆ? ಯಾರಾದರೂ ಜೊತೆಗಿದ್ದರಾ?’ ಎಂದು ಕೇಳಿದೆ. ನಮ್ಮ ಮನೆಯವರಿಗೆಲ್ಲಾ ನಾನೇ ಅಡುಗೆ ಮಾಡಿ ಹಾಕುವುದು ನನಗೆ ಇಷ್ಟ. ಅಡ್ಜಸ್ಟ್ ಮಾಡಿಕೊಂಡು ಮಾಡುತ್ತಿದ್ದೆ. ಒಂದು ವಾರವೋ, ಒಂದು ತಿಂಗ್ಳೋ ಆದರೆ ಯಾರಾದರೂ ಬರುತ್ತಾರೆ. ವರ್ಷಗಟ್ಟಲೆ ಎಂದರೆ ಯಾರು ಬರೋಕೆ ಸಾಧ್ಯ? ಎಲ್ಲರಿಗೂ ಅವರದ್ದೇ ಆದ ಸಂಸಾರ, ಸಮಸ್ಯೆ, ಕೆಲಸ ಇರುತ್ತದೆ ಅಲ್ಲ್ವಾ?’ ಎಂದರು. ಆಕೆಯ ಪತಿ ’ಇವಳಿಗೆ ಇಷ್ಟರಮಟ್ಟಿಗೆ ಬರಲು ಪ್ರತಿ ತಿಂಗಳು ಅರವತ್ತೆಂಟು ಸಾವಿರ ರೂಪಾಯಿಗಳ ಔಷಧಿ ಬೇಕಾಗುತ್ತಿತ್ತು. ನನಗೆ ಕೈಗೆ ಬರುವ ಸಂಬಳ ಅರವತ್ತು ಸಾವಿರ. ಪ್ರತಿ ತಿಂಗಳು ಹೀಗೆ ವರ್ಷಗಟ್ಟಲೆ ಹೇಗೆ ತರಲಿ ನಾನು? ಔಷಧಿ ಕೊಡಿಸೋದನ್ನು ನಿಲ್ಲಿಸಿಬಿಡೋದು ಎಂದು ಇಬ್ಬರೂ ಅಂದುಕೊಂಡಿದ್ದೆವು. ಆದರೆ ಕೆಲ ಸಂಘ ಸಂಸ್ಥೆಯವರು ಸಹಾಯ ಮಾಡಿದರು. ಈಗ ಇಷ್ಟರ ಮಟ್ಟಿಗೆ ಸುಧಾರಿಸಿಕೊಂಡಿದ್ದಾಳೆ. ಹೊರಗೆ ನೋಡಲು ಮಾತ್ರ ಇವಳು ತುಂಬಾ ಚೆಂದ’ ಒಳಗಡೆ ಎಷ್ಟೊಂದು ಕಷ್ಟಗಳಿವೆ’ ಎಂದರು.
’ಹೌದು ತುಂಬಾ ಚಂದ ಇವರು” ಎಂದು ನಾನೂ ಧ್ವನಿಗೂಡಿಸಿದೆ. ಮೇಲೆ ನೋಡಲು ಈಗೆ ತುಂಬಾ ಚಂದ ಎಂಬ ಮಾತನ್ನು ಆತ ಬಹುಶಃ ಅಲ್ಲಿರುವಷ್ಟರಲ್ಲಿ ಮೂರು ನಾಲ್ಕು ಬಾರಿಯಾದರೂ ಹೇಳಿದರು. ಇಷ್ಟು ನೋವಿದ್ದೂ, ಇಷ್ಟು ಕಷ್ಟವಿದ್ದೂ ಕಾಯಿಲೆ ಇದ್ದರೂ ಆಕೆಯ ನಗುವಿನಿಂದ ನಾನು ಒಂದಿಷ್ಟಾದರೂ ಕಲಿಯಬೇಕು ಎನಿಸಿದ್ದು ಸುಳ್ಳಲ್ಲ. ಎಲ್ಲ ಕೆಲಸ ಮುಗಿಸಿ ಆಕೆ ಹೋಗುವಾಗ ಗಮನಿಸಿದೆ – ಬಹುತೇಕ ಕುಂಟು ಹೆಜ್ಜೆಯನ್ನು ಹಾಕುತ್ತಾ ಹೋಗುತ್ತಿದ್ದರು. ಬೆನ್ನಹಿಂದೆಯಿಂದಲೂ ಆಕೆಯ ನಗು ನನಗೆ ಕಾಣುತ್ತಿತ್ತು. ಆ ನಗು ಮುಖವನ್ನು ನನಗೆ ಈಗಲೂ ಮರೆಯಲು ಆಗಿಲ್ಲ.
ಆರೋಗ್ಯ ಎನ್ನುವುದು ಮನುಷ್ಯನಿಗೆ ಎಷ್ಟು ಮುಖ್ಯ. ದೇವರು ನಮಗೆ ಕೊಟ್ಟಿರುವ ಕೈ, ಕಾಲು, ಹೃದಯ, ಕಣ್ಣು, ಮೂಗು, ಬಾಯಿ, ಕಿವಿ, ಶ್ವಾಸಕೋಶ, ಕಿಡ್ನಿ ಎಲ್ಲವನ್ನು ಅದೆಷ್ಟು ಚೆನ್ನಾಗಿ ಜೋಡಿಸಿದ್ದಾನೆ. ಒಂದೇ ಒಂದು ಚೂರು ವ್ಯತ್ಯಾಸವಾದರೂ ಲಕ್ಷಗಟ್ಟಲೆ ಸುರಿದರೂ ಮತ್ತೆ ಮೊದಲಿನಂತೆ ಮಾಡಲು ಸಾಧ್ಯವಾಗುವುದಿಲ್ಲ. ಬರಿದೇ ರಿಪ್ಪೇರಿ ಮಾಡಬಹುದು. ಅದು ಪರ್ಯಾಯವಾಗಿ ಕೆಲಸ ಮಾಡಬಹುದು ಆದರೆ ಮೂಲದಂತೆ ಆಗಲು ಸಾಧ್ಯವೇ ಇಲ್ಲ. ಕಿಲೋಮೀಟರ್ ನರಮಂಡಲ ಇದ್ದರೂ ಅದೆಷ್ಟು ಸೊಗಸಾಗಿ ಹೊಂದಿಸಿದ್ದಾನೆ ಆ ಕಾಣದ ಶಕ್ತಿ? ಇವೆಲ್ಲಾ ಗೊತ್ತಿದ್ದರೂ ನಾವು ಮೆರೆಯುತ್ತೇವೆ. ಎಲ್ಲಾ ಅಂಗಗಳನ್ನು ಸೃಷ್ಟಿಸಿ ಮತ್ತೊಂದು ಮನುಷ್ಯರನ್ನು ಮಾಡಲು ಸಾಧ್ಯವಿದೆಯೇ? ಸಾಧ್ಯವೇ ಇಲ್ಲ. ಆರೋಗ್ಯ ಚೆನ್ನಾಗಿರುವ ತನಕ ಅದರ ಬೆಲೆ ತಿಳಿಯುವುದೇ ಇ.ಲ್ಲ ಒಂದು ತಲೆನೋವು ಬಂದರೆ ಅರ್ಧ ದಿನ ವೇಸ್ಟ್, ಕಾಲು ನೋವು ಬಂದಾಗ ಅಯ್ಯೋ ಮುಂಚೆ ಎಷ್ಟು ಚೆನ್ನಾಗಿದ್ದೆ ಎನ್ನುವುದು, ಹೊಟ್ಟೆ ನೋವು ಬಂದಾಗ ಅದಿಲ್ಲದಿದ್ದಾಗ ಎಷ್ಟು ಸಂತೋಷವಾಗಿದ್ದೆವು ಎಂದುಕೊಳ್ಳುವುದು, ಒಂದು ನೋವಿದ್ದಾಗ ಮತ್ತೊಂದು ನೋವೇ ವಾಸಿ ಎಂದುಕೊಳ್ಳುವುದು. ಇದೇ ಮನುಷ್ಯನ ಚಾಳಿ.
ಪ್ರತಿ ಅಂಗಕ್ಕೂ ಅದರದ್ದೇ ಆದ ಒಂದು ವೈಶಿಷ್ಟ್ಯವಿದೆ. ಮತ್ತೊಬ್ಬರಿಗೆ ಕೆಡುಕನ್ನು ಬಯಸದೆ ಇದ್ದರೆ ನಮ್ಮ ದೇಹದ ಅವಯವಗಳು ಸಂತೃಪ್ತವಾಗಿ ಕೆಲಸ ಮಾಡುತ್ತಾ ಸಾಗುತ್ತವೆ.
ಆದರೂ ನಾವು ಸೇವಿಸುವ ಆಹಾರ, ನಮ್ಮ ಮನಸ್ಥಿತಿ, ಪರಿಸ್ಥಿತಿ ಇವೆಲ್ಲವೂ ಕಾರಣವಾಗಿ ಕೆಲವೊಮ್ಮೆ ಆರೋಗ್ಯ ಹದಗೆಡುವುದು ಉಂಟು.
ಆ ಹೆಂಗಸಿನ ಘಟನೆ ಮಾಸುವ ಮುನ್ನವೇ ಮರುದಿನವೇ ಮತ್ತೊಬ್ಬ ಗ್ರಾಹಕರು ಬಂದರು. ಆತನ ಹೆಸರು ರಾಮಣ್ಣ(ಹೆಸರು ಬದಲಿಸಲಾಗಿದೆ) ಆತನಿಗೆ 75 ವಯಸ್ಸು ದಾಟಿದೆ. ಮಗನ ಜೊತೆ ಚಿನ್ನದ ಸಾಲಕ್ಕೆ ಬಂದಿದ್ದರು. ’ನನಗೇನೂ ಹಣದ ಅವಶ್ಯಕತೆ ಇಲ್ಲ. ಇವನು ಚಿಲ್ಲರೆ ಅಂಗಡಿ ಇಟ್ಟುಕೊಂಡಿದ್ದಾನೆ. ಮಗನಿಗೆ ಜವಾಬ್ದಾರಿ ಬರಲಿ ಎಂದು ಸಾಲ ತೆಗೆದುಕೊಳ್ಳುತ್ತಿದ್ದೇನೆ. ನಾನೇ ತೀರಿಸಿದರೂ ತೀರಿಸಬಹುದು. ಆದರೂ ಅವನೂ ಸ್ವಲ್ಪ ಕಲಿಯಲಿ’ ಎಂದು ಮಗ ಇಲ್ಲದಾಗ ಹೇಳಿದರು.
ಅದೇನು ಖುಷಿ ಅವರ ಮುಖದಲ್ಲಿ.. ಅದೇನು ಲವಲವಿಕೆ.., ಚಟಪಟ ಓಡಾಡುತ್ತಾ ಬ್ಯಾಂಕಿನಲ್ಲಿ ತಮ್ಮೆಲ್ಲ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದರು. ಆತ ’ಏನ್ ಮೇಡಂ ನ್ಯೂಸ್ ಬಿಟ್ಬಿಟ್ರಾ? ನಾ ಆಗಿನಿಂದಾನೂ ನಿಮ್ಮನ್ನು ನೋಡ್ತಾ ಇದ್ದೆ’ ಎಂದು ಕೇಳಿದರು. ನಮ್ಮ ಬ್ಯಾಂಕಿಗೆ ಆತ ಹಳೆಯ ತಲೆ. ಆತ ಕೋರ್ಟಿನಲ್ಲಿ ಜವಾನನಾಗಿ ರಿಟೈರ್ ಆಗಿದ್ದು. ಆದರೂ ಸಹಿ ಮಾಡುವಾಗ ನೋಡಿದರೆ ಆತನ ಹಸ್ತಾಕ್ಷರ ಬಹಳ ಸೊಗಸಾಗಿತ್ತು. ’ಎಷ್ಟು ಚೆನ್ನಾಗಿ ಬರಿತೀರಲ್ರೀ ಒಳ್ಳೆ ಹ್ಯಾಂಡ್ ರೈಟಿಂಗ್ ಇದೆ’ ಎಂದೆ. ’ಮೇಡಂ ನಾನೂನೂ ಸ್ವಲ್ಪ ಓದಿದ್ದೇನೆ. ಆದರೆ ದೊಡ್ಡ ಕೆಲಸ ಸಿಗಲಿಲ್ಲ. ನನಗೂ ಮೂರು ಜನ ಗಂಡು ಮಕ್ಕಳು. ಸೊಸೆಯರು ಚೆನ್ನಾಗಿ ನೋಡ್ಕೊಳ್ತಾರೆ. ನನ್ ಹೆಂಡ್ತಿ ತೀರಿಕೊಂಡು ಎಷ್ಟೋ ವರ್ಷ ಆಯ್ತು. ಸೊಸೆಯರು ನೋಡ್ಕೊಳ್ತಾ ಇರೋದ್ರಿಂದ ಯಾವ ಯೋಚನೆಯೂ ಇಲ್ಲ . ಅಚ್ಕಟ್ಟಾಗ್ ಬೆಳಿಗ್ಗೆ ಮುದ್ದೆ ಉಪ್ಸಾರು ತಿಂದು ಹೊರಟ್ರೆ ಎಲ್ಲ ಕೆಲಸ ಮುಗಿಸಿ ಮಧ್ಯಾಹ್ನ ಮನೆಗೆ ಹೋಗ್ತೀನಿ. ಒಂದು ಬಿಪಿ ಇಲ್ಲ, ಒಂದು ಶುಗರ್ ಇಲ್ಲ. ಥೈರಾಯಿಡ್ ಇಲ್ಲ, ಕೊಲೆಸ್ಟೆರಾಲ್ ಇಲ್ಲ. ಯಾವ್ ಕಾಯಿಲೇನೂ ಇಲ್ಲ ಗಟ್ಟಿಮುಟ್ಟಾಗಿದೀನಿ ಮೇಡಂ’ ಅಂತ ಜೋರಾಗಿ ನಗ್ತಾ ಹೇಳಿದ್ರ. ನಮ್ಮ ಮನೇಲಿ ನಾನೇ ಕೊನೇ ಮಗ. ನಾನ್ ಹುಟ್ಟಿದ್ ದಿನಾನೇ ನಮ್ ತಾಯಿ ತೀರಿಕೊಂಡ್ಬಿಟ್ಟರಂತೆ, ನೋಡಿ ನಮ್ಮಮ್ಮ ಎಷ್ಟು ಚೆನ್ನಾಗಿದ್ಳು’ ಅಂತ ಪರ್ಸ್ ನಲ್ಲಿ ತಾಯಿಯ ಫೋಟೋವನ್ನು ತೆಗೆದು ತೋರಿಸಿದರು.
’ಇದೊಂದೇ ಕೊರಗು ಮೇಡಂ. ನಮ್ಮಮ್ಮನ ಜೊತೆ ಬಾಳಕ್ಕೆ ಆಗಲಿಲ್ಲ ಅನ್ನೋದು. ಕಣ್ಬಿಟ್ಟು ನಮ್ಮ ತಾಯಿಯ ಮುಖವನ್ನು ನೋಡಲಿಲ್ಲ. ಅವಳೂ ನನ್ನ ನೋಡಿದ್ಲೋ ಇಲ್ವೋ? ನಮ್ಮಪ್ಪ ಇನ್ನೊಂದು ಮದುವೆಯಾದರೂ ನಮ್ಮ ಚಿಕ್ಕಮ್ಮಾನೂ ತುಂಬಾ ಚೆನ್ನಾಗಿ ನೋಡ್ಕೊಂಡ್ರು. ನಮ್ಮನ್ನ ಸ್ವಂತ ಮಕ್ಕಳಂಗೆ ನೋಡಿಕೊಂಡ್ಳು. ಯಾವ ಕೊರತೆಯೂ ಇಲ್ಲ. ಹೆಂಡ್ತಿನು ಒಳ್ಳೆಯವ್ಳೇ. ಆದ್ರೆ ಆಗ್ಲೇ 15 ವರ್ಷ ಆಯ್ತು ಹೋಗಿ. ನಾನು ಕ್ಲಾಸ್ಮೇಟ್ಸ್ ಎಲ್ಲರೂ ಮುದುಕ್ರಂಗ ಆಗ್ಬುಟ್ಟು ಮೈತುಂಬ ಕಾಯಿಲೆ ತುಂಬಿಕೊಂಡಿದ್ದಾರೆ. ……ಅವ್ನೂ ನನ್ ಕ್ಲಾಸ್ ಮೇಟ್ …..ಅವ್ನೂ ನನ್ನ ಕ್ಲಾಸ್ಮೇಟು ….ಅವ್ನೂ ನನ್ನ ಕ್ಲಾಸ್ ಮೇಟ್ ಎಂದು ಕೆಲ ಶಾಸಕರು, ಕೆಲವು ಮಾಜಿ ಮಂತ್ರಿಗಳ ಹೆಸರನ್ನು ಹೇಳಿದರು. ಇವತ್ತಿಗೂ ಸಿಕ್ಕಿದಾಗ ನಾನು ಅಷ್ಟೇ ಖುಷಿಲೇ ಮಾತಾಡಿಸ್ತೀನಿ. ಅವರುನೂ ನಾನು ಜವಾನ ಆಗಿದ್ದೆ ಅವರು ದೊಡ್ಡ ಶಾಸಕರಾಗಿದ್ರು ಮಂತ್ರಿ ಆಗಿದ್ರು ಅಂತ ಯಾವತ್ತೂ ಕೀಳಾಗಿ ನೋಡಿಲ್ಲ. ನಾವೆಲ್ಲಾ ಒಂದೇ ಸ್ಕೂಲ್ನಲ್ಲಿ ಓದ್ದೋರು. ಯಾವ ಚಿಂತೇನೂ ಇಲ್ದೆ ಹೊಟ್ಟೆ ತುಂಬಾ ತಿಂತೀನಿ, ಕೈಲಾದಷ್ಟು ಕೆಲಸ ಮಾಡ್ತೀನಿ, ಕಣ್ತುಂಬಾ ನಿದ್ದೆ ಮಾಡ್ತೀನಿ, ಖುಷಿ ಖುಷಿಯಾಗಿರ್ತೀನಿ. ಖುಷಿಯಾಗಿರುವುದೇ ನನ್ನ ಆರೋಗ್ಯ ಮೇಡಂ. ಆರೋಗ್ಯ ಒಂದಿದ್ದರೆ ಬೇರೆ ಯಾವ ಆಸ್ತಿನೂ ಬೇಡ. ಅವರೆಲ್ಲ ಕೋಟಿಗಟ್ಟಲೆ ದುಡ್ಡು ಮಾಡಿದ್ದಾರೆ. ನನ್ನತ್ರ ಅಷ್ಟು ದುಡ್ಡಿಲ್ಲ ನಿಜಾ. ಆದರೆ ಅವರಿಗೆ ಇಲ್ಲದೆ ಇರುವ ಆರೋಗ್ಯ ಖುಷಿ ನನಗೆ ಇದೆ. ಈಗ ಹೇಳಿ ಮೇಡಂ ಯಾರು ಶ್ರೀಮಂತರು ಅಂತ?. ನಿಜವಾದ ಶ್ರೀಮಂತ ನಾನೇನೇ. ನಾನು ಮಿನಿಸ್ಟರ್ ಅಲ್ಲದೆ ಇರಬಹುದು, ಜವಾನ ಇರಬಹುದು ಆದರೆ ಒಂದು ಮಂಡಿ ನೋವಿಲ್ಲ, ಒಂದ್ ಬೆನ್ನೋವ್ ಇಲ್ಲ, ಒಂದು ತಲೆ ನೋವಿಲ್ಲ. ಇಡೀ 75 ವರ್ಷದಲ್ಲಿ ಒಂದೇ ಒಂದು ಮಾತ್ರೆಯನ್ನು ಕೂಡ ನಾನು ತೆಗೆದುಕೊಂಡಿಲ್ಲ. ನನಗೂ ಔಷಧಿಗೂ ಡಾಕ್ಟರ್ಗೂ ತುಂಬಾ ದೂರ. ಹೇಳಿ ಮೇಡಂ ಈ ಪ್ರಪಂಚದಲ್ಲಿ ನಾನೇ ದೊಡ್ಡ ಶ್ರೀಮಂತ ಅಲ್ವಾ?’
ಹೀಗೆಂದು ಕೇಳಿ ನಗುನಗುತ್ತಾ ಪಟಪಟನೆ ನಡೆದು ಹೋಗುತ್ತಿದ್ದ ಅವರನ್ನು ನೋಡಿ ನಿಜಕ್ಕೂ ಬಡತನ-ಸಿರಿತನವನ್ನು ಅಳೆಯುವ ಮಾನದಂಡ ಈ ಪ್ರಪಂಚಕ್ಕೆ ಗೊತ್ತಿದೆಯೋ ಇಲ್ಲವೋ ಎಂಬ ಅನುಮಾನವೂ ಮೂಡಿತು. ಸಿರಿತನಕ್ಕೆ ಹೊಸ ಭಾಷ್ಯ ಬರೆಯುವ ಕಾಲ ಬಂದಿದೆ ಎನಿಸಿತು.

-ಡಾ.ಶುಭಶ್ರೀಪ್ರಸಾದ್, ಮಂಡ್ಯ
೯೮೪೪೪೯೮೪೩೨