- – 18ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ
ಬೆಂಗಳೂರು: ಸೈಕ್ಲೋನ್ ಪ್ರಭಾವದಿಂದಾಗಿ ಕರ್ನಾಟಕದಲ್ಲಿ ಮತ್ತೆ ಒಂದು ವಾರವೂ ಧಾರಾಕಾರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವೆಡೆ ಅಲ್ಪಮಟ್ಟದ ಮಳೆಯಾದರೂ, ಬಿಸಿಲ ಝಳ ಹೆಚ್ಚಾಗಿ ಜನತೆ ಬಳಲುತ್ತಿದ್ದರು. ಆದರೆ ಈಗ ವಾಯುಭಾರ ಕುಸಿತ ಹಾಗೂ ಸೈಕ್ಲೋನ್ ಪರಿಣಾಮದಿಂದಾಗಿ ಭಾರಿ ಮಳೆ ಸಾಧ್ಯತೆ ಹೆಚ್ಚಾಗಿದೆ.
ಹವಾಮಾನ ಇಲಾಖೆಯ ಪ್ರಕಾರ, ಮೇ 13ರವರೆಗೆ ರಾಜ್ಯದ ಹಲವೆಡೆ ನಿರಂತರವಾಗಿ ಮಳೆ ಸುರಿಯುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ 18ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಮೇ 8 ಹಾಗೂ 9ರಂದು ಭಾರಿ ಮಳೆ:
- ಮೇ 8: ಇಂದು ಚಿಕ್ಕಮಗಳೂರು, ಕೊಡಗು, ಮೈಸೂರು, ಚಾಮರಾಜನಗರ, ಹಾಸನ, ಶಿವಮೊಗ್ಗ, ಮಂಡ್ಯ, ಬೆಂಗಳೂರು ನಗರ ಹಾಗೂ ಗ್ರಾಮಾಂತರ, ರಾಮನಗರ, ಬಳ್ಳಾರಿ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ.
- ಗಾಳಿಯ ವೇಗ 30 ರಿಂದ 40 ಕಿ.ಮೀ. ತಲುಪುವ ಸಾಧ್ಯತೆ ಇದೆ.
- ಉತ್ತರ ಒಳನಾಡು ಭಾಗದ ಬೆಳಗಾವಿ, ಧಾರವಾಡ, ಬಾಗಲಕೋಟೆ, ಗದಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಕೂಡ ಧಾರಾಕಾರ ಮಳೆಯಾಗಲಿದೆ.
- ಬಿಸಿಲು ಮಾತ್ರ ಬೀದರ, ಕಲಬುರಗಿ, ವಿಜಯಪುರ, ರಾಯಚೂರು, ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಮುಂದುವರಿಯಲಿದೆ.
ಕರಾವಳಿ ಭಾಗ:
ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಿಂಚು-ಗುಡುಗು ಸಹಿತ ಭಾರಿ ಮಳೆಯಾಗಲಿದೆ. ಕರಾವಳಿಯಲ್ಲಿ ಕೂಡ ಮುಂಗಾರುಪೂರ್ವ ಮಳೆ ತೀವ್ರತೆ ಪಡೆದುಕೊಂಡಿದೆ.
ಮೇ 9 ರಿಂದ 13ರ ವರೆಗೆ:
ಈ ಅವಧಿಯವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಸೈಕ್ಲೋನ್ ಪ್ರಭಾವದಿಂದಾಗಿ ಈ ಕಾಲಾವಧಿಯಲ್ಲಿ ಗಾಳಿಯ ವೇಗ ಹೆಚ್ಚಾಗುವ ಸಾಧ್ಯತೆ ಕೂಡವಿದೆ.ಇದನ್ನು ಓದಿ –ಖಾಸಗಿ ಹೆಲಿಕಾಪ್ಟರ್ ಪತನ: ಐವರು ದುರ್ಮರಣ, ಇಬ್ಬರು ಗಾಯಾಳು
ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸಲು ಹವಾಮಾನ ಇಲಾಖೆ ಸಾರ್ವಜನಿಕರಿಗೆ ಸೂಚನೆ ನೀಡಿದ್ದು, ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಆಡಳಿತದವರು ಅಗತ್ಯ ಕ್ರಮ ಕೈಗೊಂಡಿದ್ದಾರೆ.