ಬೆಂಗಳೂರು: ಈ ಬಾರಿ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ತಾಪಮಾನ ದಾಖಲಾಗುವ ಸಾಧ್ಯತೆ ಇದೆ ಎಂದು ಭಾರತದ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಚಳಿಗಾಲ ಮುಕ್ತಾಯವಾಗಿ ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆ ಈಗಾಗಲೇ ಹಲವು ಜಿಲ್ಲೆಗಳಲ್ಲಿ ತಾಪಮಾನ ಏರಿಕೆ ಕಂಡುಬಂದಿದೆ. ಕಲಬುರಗಿ, ಹಾವೇರಿ, ಬಾಗಲಕೋಟೆ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚು ತಾಪಮಾನ ದಾಖಲಾಗಿದೆ.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಉತ್ತರ ಒಳನಾಡಿನ ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ತಾಪಮಾನ 42 ರಿಂದ 45 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಸಹ ತಾಪಮಾನ 39 ಡಿಗ್ರಿವರೆಗೆ ತಲುಪಬಹುದು ಎಂದು ಇಲಾಖೆ ತಿಳಿಸಿದೆ.
ಈ ಕುರಿತು ಐಎಂಡಿ ಅಧಿಕಾರಿ ಸಿಎಸ್ ಪಾಟೀಲ್ ಮಾಹಿತಿ ನೀಡಿ, ಮಾ.1ರಿಂದ ಅಧಿಕೃತವಾಗಿ ಬೇಸಿಗೆ ಆರಂಭವಾದರೂ ಫೆಬ್ರವರಿಯಿಂದಲೇ ಬಿಸಿಲಿನ ತೀವ್ರತೆ ಹೆಚ್ಚಾಗಿದೆ. ಜಾಗತಿಕ ತಾಪಮಾನ ಏರಿಕೆ ಹಾಗೂ ತೇವಾಂಶ ಕೊರತೆಯೇ ಇದರ ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ.








