ಬೆಂಗಳೂರು: ಕನ್ನಡ ಭಾಷೆ ವಿಚಾರವಾಗಿ ಸರಣಿ ಘಟನೆಗಳು ನಡೆಯುತ್ತಿರುವ ನಡುವೆಯೇ, ಕನ್ನಡ ಮಾತನಾಡಿದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವಾರ್ಡನ್ ಧಮ್ಕಿ ಹಾಕಿದ ಘಟನೆ ಬೆಳಕಿಗೆ ಬಂದಿದೆ.
ಬನ್ನೇರುಘಟ್ಟ ರಸ್ತೆಯ ಕಲ್ಕೆರೆ ಸಮೀಪದ ಎಎಂಸಿ ಕಾಲೇಜಿನ ಹಾಸ್ಟೆಲ್‌ನಲ್ಲಿ ವಾರ್ಡನ್ ಸುರೇಶ್ ಕನ್ನಡಕ್ಕೆ ಅವಮಾನ ಮಾಡಿ, ವಿದ್ಯಾರ್ಥಿಗಳ ಮೇಲೆ ಅವಾಚ್ಯವಾಗಿ ವರ್ತಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಕನ್ನಡದಲ್ಲಿ ಮಾತನಾಡಿದ ವಿದ್ಯಾರ್ಥಿಗಳಿಗೆ, “ಇಲ್ಲಿ ಕನ್ನಡ ಬೇಡ, ಹಿಂದಿಯಲ್ಲಿ ಮಾತಾಡು. ಇದು ಸಂಸ್ಥೆ, ಮನೆ ಅಲ್ಲ. ಕನ್ನಡದಲ್ಲಿ ಮಾತನಾಡಬೇಕಾದರೆ ಮನೆಗೆ ಹೋಗಿ ಮಾತನಾಡು” ಎಂದು ಸುರೇಶ್ ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ. ವಿದ್ಯಾರ್ಥಿಗಳು ಸಂಸ್ಥೆಯಲ್ಲೂ ಕನ್ನಡ ಮಾತನಾಡಲು ಹಕ್ಕಿಲ್ಲವೇ ಎಂದು ಪ್ರಶ್ನಿಸಿದಾಗ, “ಇಲ್ಲಿ ಯಾವುದೂ ಕಡ್ಡಾಯ ಇಲ್ಲ. ನಾನು ಯಾವ ಭಾಷೆಯಲ್ಲಿ ಮಾತನಾಡಬೇಕು ಎಂದು ನಾನು ನಿರ್ಧರಿಸುತ್ತೇನೆ” ಎಂದು ಗದರಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ವರ್ತನೆಗೆ ಆಕ್ರೋಶಗೊಂಡ ಮಹೇಶ್ ಹತ್ತಿ ಎಂಬವರು ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಕೇರಳ ಮೂಲದ ಹಾಸ್ಟೆಲ್ ವಾರ್ಡನ್ ಸುರೇಶ್‌ನನ್ನು ಬಂಧಿಸಿದ್ದಾರೆ. ಈ ಸಂಬಂಧ ಪ್ರಕರಣವೂ ದಾಖಲಾಗಿದೆ.
ಇನ್ನು ಈ ಘಟನೆಯನ್ನು ಖಂಡಿಸಿ ಹೋರಾಟಗಾರ ರೂಪೇಶ್ ರಾಜಣ್ಣ ನೇತೃತ್ವದಲ್ಲಿ ಕಾಲೇಜಿನ ಮುಂದೆ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ಮತ್ತು ಕಾಲೇಜು ಆಡಳಿತ ಮಂಡಳಿಯ ನಡುವೆ ವಾಗ್ವಾದ ನಡೆಯಿತು. ಕೆಲವರು ಕಾಲೇಜಿನೊಳಗೆ ಪ್ರವೇಶಿಸಲು ಯತ್ನಿಸಿದಾಗ ಪೊಲೀಸರು ತಕ್ಷಣ ತಡೆದರು.ಇದನ್ನು ಓದಿ –ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ಹುಲಿ ಪ್ರತ್ಯಕ್ಷ
ಕನ್ನಡ ಭಾಷೆಗೆ ಅವಮಾನ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವು ಈ ಘಟನೆಯ ಬಳಿಕ ಮತ್ತಷ್ಟು ಬಲಗೊಂಡಿದೆ.








