- BCCI ತೀರ್ಮಾನಕ್ಕೆ ಪಾಕಿಸ್ತಾನದ ಹಗೆತನ ಕಾರಣ
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ರಾಜಕೀಯ ಹಾಗೂ ಕ್ರೀಡಾತ್ಮಕ ಹಗೆತನದ ನಡುವಿನಲ್ಲಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ನಿಲುವು ಕಟ್ಟಿಕೊಳ್ಳುತ್ತಾ, ಎಲ್ಲಾ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಕಾರ್ಯಕ್ರಮಗಳಿಂದ ಸದ್ಯಕ್ಕೆ ಹಿಂದೆ ಸರಿಯಲು ನಿರ್ಧರಿಸಿದೆ.
ಈ ನಿರ್ಧಾರದಂತೆ, ಮುಂದಿನ ತಿಂಗಳು ಶ್ರೀಲಂಕಾದಲ್ಲಿ ನಡೆಯಲಿರುವ ಮಹಿಳಾ ಉದಯೋನ್ಮುಖ ತಂಡಗಳ ಏಷ್ಯಾ ಕಪ್ ಹಾಗೂ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ದ್ವೈವಾರ್ಷಿಕ ಪುರುಷರ ಏಷ್ಯಾ ಕಪ್‌ಗಳಿಂದ ಭಾರತ ಹಿಂದೆ ಸರಿಯಲಿದೆ ಎಂಬ ಮಾಹಿತಿಯನ್ನು ಬಿಸಿಸಿಐ ಎಸಿಸಿಗೆ ನೀಡಿದೆ ಎಂದು ವರದಿಯಾಗಿದೆ.
ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಪ್ರಸ್ತುತ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷರಾಗಿದ್ದೇ ಅಲ್ಲದೆ, ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಮುಖ್ಯಸ್ಥರೂ ಆಗಿದ್ದಾರೆ. ಬಿಸಿಸಿಐ ಈ ನಿರ್ಧಾರವನ್ನು ಪಾಕಿಸ್ತಾನದ ಕ್ರೀಡಾ ನಾಯಕತ್ವದಿಂದ ಅಂತರ ಕಾಯ್ದುಕೊಳ್ಳುವ ಕ್ರಮವಾಗಿ ನೋಡಿ, ಇದು ಭಾರತ ಸರ್ಕಾರದ ಭಾವನೆಗಳಿಗೆ ತಕ್ಕ ಪ್ರತಿಕ್ರಿಯೆ ಎಂದೂ ಮೂಲಗಳು ವಿವರಿಸಿವೆ.
“ಪಾಕಿಸ್ತಾನ ಸಚಿವರು ನೇತೃತ್ವ ವಹಿಸುತ್ತಿರುವ ಟೂರ್ನಿಯಲ್ಲಿ ಭಾರತ ಪಾಲ್ಗೊಳ್ಳುವುದು ರಾಷ್ಟ್ರದ ಭಾವನೆಗೆ ವಿರುದ್ಧ. ನಾವು ಈ ಸಂಬಂಧ ಎಸಿಸಿಗೆ ಈಗಾಗಲೇ ಮೌಖಿಕವಾಗಿ ಮಾಹಿತಿ ನೀಡಿದ್ದೇವೆ. ಭವಿಷ್ಯದಲ್ಲಿಯೂ ಎಸಿಸಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಬಗ್ಗೆ ಯಾವುದೇ ನಿರ್ಧಾರವಿಲ್ಲ. ನಾವು ನಿರಂತರವಾಗಿ ಭಾರತ ಸರ್ಕಾರದ ಸಂಪರ್ಕದಲ್ಲಿದ್ದೇವೆ,” ಎಂದು ಬಿಸಿಸಿಐ ಮೂಲಗಳು ಸ್ಪಷ್ಟಪಡಿಸಿವೆ.ಇದನ್ನು ಓದಿ –ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆ
ಈ ಬೆಳವಣಿಗೆ, ಸೆಪ್ಟೆಂಬರ್‌ನಲ್ಲಿ ಭಾರತ ಆತಿಥ್ಯ ನೀಡಬೇಕಾಗಿದ್ದ ಪುರುಷರ ಏಷ್ಯಾ ಕಪ್ ನ ಟೂರ್ನಿ ಭವಿಷ್ಯಕ್ಕೆ ಧಕ್ಕೆಯಾದಂತೆ ಅನಿಸುತ್ತಿದೆ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಬೇಕಿತ್ತು.