ಮಧ್ಯಪ್ರದೇಶದ ಇಂದೋರ್ ನಗರವನ್ನು ಭಾರತದ ಮೊದಲ ಭಿಕ್ಷುಕ ಮುಕ್ತ ನಗರ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಶೀಷ್ ಸಿಂಗ್ ಈ ಮಾಹಿತಿಯನ್ನು ಹಂಚಿಕೊಂಡರು.
ಸುಮಾರು 5,000 ಭಿಕ್ಷುಕರು ಇಂದೋರ್ ನಗರದ ಬೀದಿಗಳಲ್ಲಿ ಇರುತ್ತಿದ್ದ ಒಂದು ವರ್ಷದ ಹಿಂದಿನ ಸ್ಥಿತಿಯಿಂದ ಆರಂಭಗೊಂಡ ಈ ಅಭಿಯಾನವು ಇಂದು ಯಶಸ್ವಿಯಾಗಿ ಭಿಕ್ಷಾಟನೆಯನ್ನು ನಿರ್ಮೂಲನೆಗೊಳಿಸಿದೆ. “ಇಂದೋರ್ ಇದೀಗ ದೇಶದ ಮೊದಲ ಭಿಕ್ಷುಕ ಮುಕ್ತ ನಗರವಾಗಿದೆ” ಎಂದು ಅವರು ಘೋಷಿಸಿದರು.
ಅಭಿಯಾನದ ಭಾಗವಾಗಿ, ಭಿಕ್ಷುಕರಿಗೆ ಉದ್ಯೋಗ ಕಲ್ಪಿಸಿ ಪುನರ್ವಸತಿ ಮಾಡಲಾಗಿದೆ. ಜೊತೆಗೆ, ಭಿಕ್ಷೆ ಬೇಡುತ್ತಿದ್ದ ಮಕ್ಕಳನ್ನು ಶಾಲೆಗಳಲ್ಲಿ ಸೇರಿಸಲಾಗಿದ್ದು, ಶಿಕ್ಷಣದ ಅವಕಾಶ ಒದಗಿಸಲಾಗಿದೆ ಎಂದು ಅವರು ತಿಳಿಸಿದರು.
ಭಿಕ್ಷಾಟನೆ ನಿರ್ಮೂಲನೆಗಾಗಿ ನಾವು ಪ್ರಾರಂಭಿಸಿದ ಈ ಅಭಿಯಾನ, ಇತರ ನಗರಗಳಿಗೆ ಮಾದರಿಯಾಗಲಿದೆ. ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಹಾಗೂ ವಿಶ್ವ ಬ್ಯಾಂಕ್ ತಂಡ ಈ ಯೋಜನೆಯ ಯಶಸ್ಸನ್ನು ಗುರುತಿಸಿದೆ ಎಂದು ಸಿಂಗ್ ವಿವರಿಸಿದರು.
ಇಂದೋರ್, ಕೇಂದ್ರ ಸರ್ಕಾರದ ಪ್ರಯೋಗಾತ್ಮಕ ಯೋಜನೆಗೆ ಆಯ್ಕೆಯಾದ 10 ನಗರಗಳಲ್ಲಿ ಒಂದಾಗಿತ್ತು. ಈ ಯೋಜನೆಯಡಿ ನಗರದ ಭಿಕ್ಷುಕರನ್ನು ಗುರುತಿಸಿ, ಮೊದಲ ಹಂತದಲ್ಲಿ ಜಾಗೃತಿ ಅಭಿಯಾನ ನಡೆಯಿತು. ಬಳಿಕ ಅವರಿಗೆ ಪುನರ್ವಸತಿ ಹಾಗೂ ನೆರವು ಕಲ್ಪಿಸಲಾಯಿತು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ರಾಮನಿವಾಸ್ ಬುಧೋಲಿಯಾ ಅವರು ಮಾತನಾಡಿ, 2024ರ ಫೆಬ್ರವರಿಯಲ್ಲಿ ಈ ಅಭಿಯಾನ ಪ್ರಾರಂಭವಾಯಿತು. 500 ಮಕ್ಕಳನ್ನು ಒಳಗೊಂಡಂತೆ ಒಟ್ಟು 5,000 ಭಿಕ್ಷುಕರನ್ನು ಗುರುತಿಸಲಾಗಿತ್ತು ಎಂದು ತಿಳಿಸಿದ್ದಾರೆ.ಇದನ್ನು ಓದಿ –‘ಕಾಮಿಡಿ ಕಿಲಾಡಿ-3’ ವಿಜೇತ ರಾಕೇಶ್ ಪೂಜಾರಿ ನಿಧನ
ಈ ಮೂಲಕ ಇಂದೋರ್ ನಗರ ಸಮಾಜಮುಖಿ ಕ್ರಮಗಳ ಮೂಲಕ ಭಿಕ್ಷಾಟನೆ ವಿರುದ್ಧದ ಹೋರಾಟದಲ್ಲಿ ಮುಂಚೂಣಿಗೆ ಬಂದಿದೆ.