” ನಿನಗೆ ಬದುಕೋ ಕಲೆ ಗೊತ್ತಿಲ್ಲ ಕಣಯ್ಯ ,ಸುಮ್ಮನೆ ಎಮೋಷನಲ್ ಆಗಿಬಿಡ್ತೀಯಾ….! ಯಾವನು ಏನಾದ್ರೂ ಅಂದುಕೊಳ್ಳಲಿ ಅಥವಾ ನಮ್ಮನ್ನೇ ಬೈದುಕೊಳ್ಳಲಿ , ಸುಮ್ನೇ ಸೈಲೆಂಟಾಗಿ ಇದ್ದು ಬಿಡಬೇಕು. ಬೇರೆಯವರ ಅನ್ಯಾಯದ ಬಗೆಗೆ ಎಂತಹಾ ಕೋಪ ಇದ್ರೂ , ಅದು ನಮ್ಮೊಳಗಿರಬೇಕೇ ವಿನಃ ಮುಖದ ಮೇಲೆ ಅದನ್ನು ತೋರಿಸದೇ, ನಗುತ್ತಲೇ ಮಾತನಾಡಿಸುತ್ತಾ ಬದುಕೋದನ್ನು ಕಲೀಬೇಕು . ಮುಖ್ಯವಾಗಿ ಇಂದಿನ ಪ್ರಪಂಚದಲ್ಲಿ ” ಅಂದರಿಕಿ ಮಂಚಿವಾಡು ” ಆಗಿ ಬಾಳೋದನ್ನು ಕಲಿಬೇಕು. ಅದನ್ನು ಬಿಟ್ಟು ನೇರವಾಗಿ ಇನ್ನೊಬ್ಬರ ತಪ್ಪನ್ನು ಅವರ ಮುಖದ ಮೇಲೆ ಹೊಡೆದಂಗೆ ಹೇಳಲೇ ಬಾರದು. ಅವರ ಹಿಂದೆ ಬೇಕಾದ್ರೆ ಎಷ್ಟು ಬೇಕಾದ್ರೂ ಬೈದುಕೊಂಡ್ರೂ ಏನೂ ಆಗಲ್ಲ. ಇನ್ಮೇಲಾದ್ರೂ ಬದುಕೋದನ್ನ ಕಲಿಯಪ್ಪಾ….!
ಹೀಗೆ ಕೆಲ ವರ್ಷಗಳ ಹಿಂದೆ ನನ್ನ ಸಂಸ್ಥೆಯ ಸಹೋದ್ಯೋಗಿ ಹಾಗೂ ಆತ್ಮೀಯನಾಗಿದ್ದ ಒಬ್ಬ ಗೆಳೆಯ ಕಾಫ಼ೀ ಟೀಗೆ ಅಂತ ಬ್ರೇಕ್ ಇದ್ದ ಬಿಡುವಿನ ಸಮಯದಲ್ಲೆಲ್ಲಾ ನನಗೆ ಬದುಕುವ ಕಲೆಯ ಉಪದೇಶಾಮೃತ ನೀಡುತ್ತಲೇ ಇದ್ದ. ಆತನ ಸ್ವಭಾವ ಹೇಗಿತ್ತೆಂದರೆ ಆತ ಇಡೀ ಸಂಸ್ಥೆಯಲ್ಲಿ ಎಂತಹಾ ಶತ್ರುಗಳನ್ನಾದರೂ ಒಲಿಸಿಕೊಂಡು ಮಾತನಾಡುವ ಕಲೆ ಇತ್ತು. ಅವನಿಗೆ ಇತರರ ಬಗ್ಗೆ ಎಷ್ಟೇ ಕೋಪವಿದ್ರೂ, ಅವರ ತಪ್ಪೇ ಇದ್ರೂ ಅದನ್ನು ಎಂದೂ ಅವರೆದುರು ಬಹಿರಂಗವಾಗಿ ಮಾತನಾಡುತ್ತಿರಲಿಲ್ಲ. ಅದನ್ನು ಒಳಗೆ ನುಂಗಿಕೊಂಡೇ ಮೇಲೆ ನಗುವಿನ ಮುಖವಾಡ ಧರಿಸಿ ಎಲ್ಲರೊಂದಿಗೂ ಬೆರೆಯುತ್ತಿದ್ದ .ಹೀಗಾಗಿ ಅವನೆಂದರೆ ಎಲ್ಲರಿಗೂ ಡಾರ್ಲಿಂಗು ! ಆ ರೀತಿಯ ಗುಣವೇ ಅವನ ಸ್ಟ್ರೆಂಥ್ ಆಗಿದ್ದರೆ, ಇದ್ದದ್ದನ್ನು ಇದ್ದಂತೆ ಯಾವ ಆಲೋಚನೆಯೂ ಮಾಡದಂತೆ ಆ ಸಮಯದಲ್ಲಿ ಅನಿಸಿದ್ದನ್ನು ನೇರವಾಗಿ ಮಾತನಾಡುವ ನನ್ನಂತಹಾ ಗಿರಾಕಿಗಳಿಗೆ ಅದು ಪಕ್ಕಾ ವೀಕ್ ನೆಸ್ಸು, ಬದುಕೋ ಕಲೆ ಗೊತ್ತಿಲ್ಲದ ಬಕ್ರಾಗಳ ಲಕ್ಷಣ ಎನ್ನುವಂತಹ ವಾತಾವರಣ ಅದಾಗಿತ್ತು.!
ಈ ಸೃಷ್ಟಿಯ ವೈಚಿತ್ರ್ಯವೆಂದರೆ ಎಲ್ಲರ ಸ್ವಭಾವವೂ ಒಂದೇ ಥರ ಇರೋಕೆ ಸಾಧ್ಯವಿಲ್ಲವಲ್ಲವೇ..? ಜೊತೆಗೆ ಮೈಗಂಟಿಕೊಂಡೇ ಬಂದ ಕೆಲವು ರೂಢಿಗಳು ಅಭ್ಯಾಸಗಳು ನಮ್ಮ ವ್ಯಕ್ತಿತ್ವದ ಭಾಗವೇ ಆಗಿಹೋಗಿ ನಮ್ಮೊಟ್ಟಿಗೇ ಬೆಳೆದುಬಂದಿರುತ್ತವೆ. ಅವನ್ನು ಮಧ್ಯದಲ್ಲಿ ಬದಲಾಯಿಸೋದು ಕಷ್ಟ.
ಅದಿರಲಿ. ಆಗಾಗ್ಗೆ ಈ ವಿಚಾರದ ಬಗೆಗೆ ನೀಡುತ್ತಲೇ ಇದ್ದ ಅವನ ಈ ಸಲಹೆಗಳು ನಾವುಗಳು ಕೆಲಸ ಮಾಡುವ ಜಾಗದಲ್ಲಿ ತುಂಬಾ ಪ್ರಯೋಜನಕಾರಿಯಾಗಿರಬಲ್ಲವು ಎಂಬ ಸಣ್ಣಮಟ್ಟದ ಕಾಮನ್ ಸೆನ್ಸ್ ನನಗೂ ಇತ್ತು. ಏಕೆಂದರೆ ಸತ್ಯದ ಕಹಿಬೇವಿಗಿಂತ ಸುಳ್ಳು ಲೇಪಿತ ಚಾಕೊಲೇಟ್ ಅನ್ನೇ ಚಪ್ಪರಿಸುತ್ತಾ ಅದಕ್ಕೇ ಹೆಚ್ಚು ಬೆಲೆ ಕೊಡುವ ಸಮಾಜದಲ್ಲಿಯೇ , ಮುಖವಾಡವಿಲ್ಲದೇ ಬದುಕಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿಯಲ್ಲಿಯೇ ನಾವೆಲ್ಲರೂ ಜೀವಿಸುತ್ತಿರುವುದು.
ಆದರೂ……
ಅವನಂತೆ ಆ ರೀತಿ ಸಂದರ್ಭೋಚಿತವಾಗಿ ಮಾತನಾಡಲಾಗಲೀ ಅಥವಾ ಎಲ್ಲರೆದುರು ನನ್ನದಲ್ಲದ ಕೃತಕ ಮುಖವಾಡ ಹಾಕಿಕೊಂಡು ಬದುಕುವ ಕಲೆಯೆಂಬುದು ನಾನೇನೇ ತಿಪ್ಪರಲಾಗ ಹಾಕಿದರೂ ನನಗೆ ಒಲಿಯಲೇ ಇಲ್ಲ , ಅಥವಾ ಅದನ್ನು ಒಲಿಸಿಕೊಳ್ಳುವ ಒಂದು ಚಿಕ್ಕ ಪ್ರಯತ್ನದ ಕಡೆಗಾಗಲೀ , ಅರ್ಹತೆಯ ಕಡೆಗಾಗಲೀ ನಾನೆಂದೂ ಅಂದಿನಿಂದ ಇಂದಿನವರೆಗೂ ಮುಖ ಮಾಡಲೇ ಇಲ್ಲ. ಅದೇನೋ ಅಂತಾರಲ್ಲ ! ಹುಟ್ಟುಗುಣ ಸುಟ್ಟರೂ ಹೋಗಲ್ಲ ಅಂತ…ಹಾಗೆ ! ಹಾಗಂತ ಸಾಮಾನ್ಯ ವಿವೇಚನೆ, ವಿವೇಕ, ವಿನಯಗಳ ಎಲ್ಲೆ ಮೀರಿ ಎಂದೂ ಹೋಗಿಲ್ಲ.! ಇಲ್ಲಿ ” ನಾನು” ಎಂದಿರುವುದು ಕೇವಲ ಸಾಂಕೇತಿಕ ಅಷ್ಟೇ ! ಈ ತರಹದ ಸ್ವಭಾವದ ಎಲ್ಲರನ್ನು ಪ್ರತಿನಿಧಿಸಿ ಹಾಗೆ ಹೇಳಿದ್ದೇನೆಯೇ ವಿನಃ ಬಿಲ್ಡಪ್ ಗಾಗಿ ಅಲ್ಲ. ಆ ಮಾತು ಬೇರೆ. !
ಹಿಂದೆಲ್ಲಾ ನೇರವಾಗಿ ಮಾತನಾಡುವವರ ಸ್ವಭಾವವನ್ನು ಅವರ ” ವೀಕ್ ನೆಸ್ಸು ” ಅಂತಾನೇ ಪರಿಗಣಿಸಲಾಗುತ್ತಿತ್ತು ಹಾಗೂ ಅವರ ಮನಸಿನ ಒಳಗೊಳಗೆ ಏನೇ ಇದ್ದರೂ, ಬೆನ್ನ ಹಿಂದೆ ಸಾವಿರ ಸಾವಿರ ಕೆಟ್ಟದಾಗಿ ಮಾತನಾಡಿ ಮಸಲತ್ತು ಮಾಡಿದರೂ , ಜಗತ್ತಿನ ಮುಂದೆ ಮಾತ್ರ ನಗುವಿನ ಮುಖವಾಡ ಧರಿಸಿದವರ ವ್ಯಕ್ತಿತ್ವದವರದ್ದು ” ಬದುಕುವ ಕಲೆಯಲ್ಲಿನ ಪಾಸಿಟೀವ್ ಶಕ್ತಿ ” ಎಂದೂ ಬಣ್ಣಿಸಲಾಗುತ್ತಿತ್ತು….! ಅಂತಹವರಿಗೆ ಎಲ್ಲಿ ಬಿಟ್ಟರೂ ಬದುಕುತ್ತಾರೆ ಎಂಬ ಪ್ರಶಂಸೆಯೂ ಇತ್ತು ! ಈಗಲೂ ಈ ಪರಿಸ್ಥಿತಿ ಹೆಚ್ಚುಕಡಿಮೆ ಹಾಗೆಯೇ ಇರಬಹುದೇನೋ.!
ಇಂದಿನ ಸೈಬರ್ ಯುಗದಲ್ಲಿ, ಡಿಜಿಟಲ್ ಜ಼ಮಾನದಲ್ಲಿ, ಅಂತರ್ಜಾಲದ ಅನ್ವೇಷಣೆಯ ಕಾಲಘಟ್ಟದಲ್ಲಿ ಈ ತಂತ್ರಜ್ಞಾನವೆಲ್ಲವೂ ಮನುಷ್ಯನ ಗುಣ ಸ್ವಭಾವಗಳ ಮೇಲೂ ಸಕತ್ತು ಪರಿಣಾಮಕಾರಿಯಾಗಿಯೇ ಪ್ರಭಾವ ಬೀರುತ್ತಿದೆ. ಈ ಪ್ರಕ್ರಿಯೆಯಲ್ಲಿ ವ್ಯಕ್ತಿಯೊಬ್ಬನಲ್ಲಿ ಅಂದು ಪಾಸಿಟಿವ್ ಆಗಿ ಇದ್ದಂತಹ ಗುಣ ಇಂದು ನೆಗೆಟೀವ್ ಆಗಿಯೂ ಕಂಗೊಳಿಸಬಹುದು ಅಥವಾ ಅಂದು ವೀಕ್‌ನೆಸ್ ಆಗಿದ್ದ ಅದೇ ಗುಣವೇ ಇಂದು ಅವನ ಸ್ಟ್ರೆಂಥ್ ಆಗಿಯೂ ಕಾಣಬಹುದು. Got it…?
ಇದನ್ನು ಇನ್ನಷ್ಟು ಸರಳವಾಗಿ ಅರ್ಥೈಸುವುದಾದರೆ…
ಹಾಗೆ ಸುಮ್ಮನೆ ಗಮನಿಸಿ. ಇಂದು ಆಡಳಿತಾತ್ಮಕವಾಗಿ ಅಥವಾ ವೈಯಕ್ತಿಕವಾಗಿ ಯಾರ ಬಳಿಯಲ್ಲಾದರೂ ಸೂಕ್ಷ್ಮವಾದ ವಿಚಾರದ ಬಗೆಗೆ ಖಾಸಗಿಯಾಗಿ ಮಾತನಾಡಬೇಕಾದರೆ ಮೈಯೆಲ್ಲಾ ಕಣ್ಣಾಗಿ ಅತೀ ಎಚ್ಚರಿಕೆ ವಹಿಸಬೇಕಾಗುತ್ತದೆ. ಬದುಕಿನ ಪ್ರತೀ ಹಂತದಲ್ಲೂ ಎಲ್ಲರೊಂದಿಗೆ ಅಷ್ಟೇಕೇ , ನಮ್ಮವರೊಡನೆ ವ್ಯವಹರಿಸುವಾಗಲೂ ಎಚ್ಚರಿಕೆ ಕಾಪಿಟ್ಟುಕೊಳ್ಳಲೇ ಬೇಕಾದ ಅನಿವಾರ್ಯತೆಯ ಕಾಲಘಟ್ಟಕ್ಕೆ ನಾವಿಂದು ಮುಖಾಮುಖಿಯಾಗಿ ನಿಂತಿದ್ದೇವೆ. ಹಾಗೆಲ್ಲಾ ಹಿಂದೊಂದು ಮುಂದೊಂದು ಮಾತನಾಡುವ ಜಾಣತನ ಎಲ್ಲಾ ಕಾಲಕ್ಕೂ ಉಪಯೋಗಕ್ಕೆ ಬರೋಲ್ಲ. ಏಕೆಂದರೆ ಇದು ನಿಮ್ಮೆಲ್ಲಾ ಮಾತುಗಳನ್ನು, ಕೃತ್ಯಗಳನ್ನು, ವರ್ತನೆಗಳನ್ನು ವಾಯ್ಸ್ ರೆಕಾರ್ಡ್ ಅಥವಾ ವಿಡಿಯೋ ರೆಕಾರ್ಡ್ ಮಾಡಿ ಸೆರೆ ಹಿಡಿದು ಆಟವಾಡಿಸುವ ಕಾಲ. ! ಮುಂದೆ ಬೆಣ್ಣೆಯಂತೆ ಮಾತನಾಡಿ ಬೆನ್ನಹಿಂದೆ ಇರಿಯುವವನ ಬಣ್ಣಬಯಲು ಮಾಡಲೆಂದೇ ಬೆನ್ನ ಹಿಂದೆ ಮಾತನಾಡುವ ಮಾತುಗಳನ್ನು ವಿಡಿಯೋ ಅಥವಾ ವಾಯ್ಸ್ ರೆಕಾರ್ಡ್ ಮಾಡಿಬಿಟ್ಟರೆ ಅಂಥವರ ಎರಡುಮುಖ ಅನಾವರಣವಾಗಿಯೇ ಬಿಡುತ್ತದೆ. ಅಂದರೆ ಒಂದು ಕಾಲಕ್ಕೆ ಯಾವ ಸ್ವಭಾವ ಅವನ ಟ್ರಂಪ್ ಕಾರ್ಡ್ ಆಗಿತ್ತೋ ಅದೇ Strength ಇಂದು Weakness ಆಗಿ ಕಾಡಿಬಿಡುವ ಎಲ್ಲಾ ಅಪಾಯಗಳೂ ಇವೆ.. !
ಇದಕ್ಕೆ ವಿರುದ್ಧವಾಗಿ, ಯಾವನಾದ್ರೂ ರೆಕಾರ್ಡ್ ಮಾಡಲೀ ಬಿಡಲೀ…, ಎದುರಿಗೆ ಯಾರಾದ್ರೂ ಇರಲಿ, ಇಲ್ಲದಿರಲಿ, ನಿಮ್ಮ ಮನದಲ್ಲಿರುವುದನ್ನು ನೇರವಾಗಿ ತೆರೆದ ಪುಸ್ತಕದಂತೆ ಬಿಚ್ಚಿಟ್ರೆ ಈ ರೀತಿಯ ಆತಂಕ , ಭಯ, ದಿಗಿಲು ಯಾವುದೂ ಇರಲಿಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ ನಿಮ್ಮ ಮನಸ್ಸಿನ ಅನಿಸಿಕೆಗಳನ್ನೇ ಯಥಾವತ್ ಯಾರೆದುರು ಬೇಕಾದರೂ ಹೇಳುವ ಗಟ್ಟಿ ದಿಲ್ ನಿಮ್ಮದಾಗಿರುತ್ತದೆ. ಅದಕ್ಕೆ ಜಾಗ ಸಮಯ ಸಂದರ್ಭ ಅನ್ನೋ ಭಯ ಇರೋಲ್ಲ.
ಅಂದರೆ ಯಾವೊಂದು ಗುಣ ಅಂದು ನಿಮ್ಮ ದೌರ್ಬಲ್ಯವೆಂದು ಪರಿಗಣಿಸಲಾಗಿತ್ತೋ.. ಅದೇ ಗುಣವೇ ಇಂದು ತಕ್ಕಮಟ್ಟಿಗೆ ಒಬ್ಬನ ಶಕ್ತಿಯಾಗಿ ಪರಿವರ್ತನೆಗೊಂಡಿರುವುದನ್ನು ಸೂಕ್ಷ್ಮವಾಗಿ ಗಮನಿಸಿ.
ನಾವು ನಾವಾಗಿಯೇ ಸಹಜವಾಗಿ ಪ್ರಾಮಾಣಿಕವಾಗಿ ನೇರವಾಗಿ ಇದ್ದಲ್ಲಿ ಒಂದಷ್ಟು ಜನ ಬೆನ್ನಹಿಂದೆ ಆಡಿಕೊಂಡು ಬೈದುಕೊಳ್ಳಬಹುದು, ಅಪಪ್ರಚಾರ ಮಾಡಬಹುದು. ಆದರೆ ಈ ರೆಕಾರ್ಡಿಂಗ್ ತಂತ್ರಜ್ಞಾನದ ಬಲೆಗೆ ಬೀಳುತ್ತೇವೆಂಬ ಅಂಜಿಕೆಯಿರಲ್ಲ. ಅದು ಸರಿಯೋ ತಪ್ಪೋ ಕ್ಯಾಮೆರಾ ಹಿಂದೆ ಏನು ಮಾತನಾಡಿರುತ್ತೇವೋ… ಕ್ಯಾಮೆರಾ ಮುಂದೆಯೂ ಅರಿವಿದ್ದೋ ಇಲ್ಲದೆಯೋ ಸಾಮಾನ್ಯವಾಗಿ ಅದನ್ನೇ ಮಾತನಾಡಿರುತ್ತೇವೆ. ಒಟ್ಟಿನಲ್ಲಿ ಮಾತಲ್ಲಿ ಪ್ರಾಮಾಣಿಕತೆ ಇದ್ದು , ಮನದಲ್ಲಿ ದುರಾಲೋಚನೆಯಿಲ್ಲದಿದ್ದಲ್ಲಿ ಯಾರು ಏನು ಬೇಕಾದ್ರೂ ರೆಕಾರ್ಡ್ ಮಾಡಿಕೊಳ್ಳಲಿ ಅಲ್ವೇ…!
ಮಾತುಗಳಲ್ಲಿ ನೇರವಾಗಿರುವವರ ಈ ಭಂಢ ಧೈರ್ಯ, ಆತ್ಮಸ್ಥೈರ್ಯ , ಹುಂಬತನವೆಂಬುವು ಸದಾ ಮುಖವಾಡದ ಮುಸುಕಿನಲ್ಲೇ ತೋರಿಕೆಯ ಬದುಕು ಸವೆಸುತ್ತಿರುವ ಕುತಂತ್ರಿಗಳಲ್ಲಿರಲು ಸಾಧ್ಯವೇ…?
ನೆವರ್….!
ಯೆಸ್….ಹೃದಯಕ್ಕೂ ಬಾಯಿಗೂ ಮಧ್ಯೆ ಫ಼ಿಲ್ಟರ್ ಇಲ್ಲದೇ ನೇರವಾಗಿ ಮಾತನಾಡಿ, ನಿಷ್ಠುರವಾಗಿ ಕೃತಕತೆಯಿಲ್ಲದೆ ಬದುಕುವವರು ನೀವಾಗಿದ್ದಲ್ಲಿ ಸಹಜವಾಗಿ ಸಮಾಜದಲ್ಲಿ ನಿಮ್ಮನ್ನು ಇಷ್ಟಪಡುವವರ ಸಂಖ್ಯೆ ಕಡಿಮೆಯಾಗಬಹುದು, ಕಿರಿಕ್ಕುಗಳು ಎದುರಾಗಬಹುದು, ನಿಮ್ಮನ್ನು ವಿಲನ್ ಅಂತಾ ಕೂಡಾ ಚಿತ್ರಿಸಬಹುದು, ಮುಖ್ಯವಾಗಿ ನೀವು ಎಲ್ಲರ ಪಾಲಿನ ಡಾರ್ಲಿಂಗ್ ಆಗಲು ಸಾಧ್ಯವಿಲ್ಲ.
ಕನ್ ಫ಼್ಯೂಷನ್ಸ್ ಬೇಡ. ನೇರ, ನಿಷ್ಠುರ, ದಿಟ್ಟತನ ಅಂದರೆ ಮಿಲಿಟರಿ ಶಿಸ್ತಿನಿಂದ ಸದಾ ಮುಖವನ್ನು ಗಂಟುಹಾಕಿಕೊಂಡು ಯಾರೊಂದಿಗೂ ಬೆರೆಯದೇ ನಾನು ನೇರವಾದಿ ಎಂದು ಪೋಸು ಕೊಡುವುದಲ್ಲ ಅಥವಾ ಕನಿಷ್ಠ ಸಂವೇದನೆಯನ್ನೂ ಮರೆತು ಮತ್ತೊಬ್ಬರ ಮುಖಕ್ಕೆ ಹೊಡೆದಂತೆ ಒರಟಾಗಿ ಮಾತನಾಡುವುದೂ ಅಲ್ಲ ಅಥವಾ ಪ್ರತಿಷ್ಠೆ ಅಹಂಕಾರ ತುಂಬಿದ ವರ್ತನೆಯೂ ಅಲ್ಲ. ಅದು ಸ್ವಾರ್ಥ ಅಥವಾ ಫ಼ೇಕ್ ಮುಖವಾಡವಿಲ್ಲದೆಯೇ ನೀವು ನೀವಾಗಿಯೇ ನಿಮ್ಮ ವ್ಯಕ್ತಿತ್ವವನ್ನು ಸರಳವಾಗಿ ಪಾರದರ್ಶಕವಾಗಿ ಕಾಪಾಡಿಕೊಂಡು ಸಮಾಜದಲ್ಲಿ ಎಲ್ಲರೊಂದಿಗೆ ಹಿತವಾಗಿ ಬದುಕುವ ಲಕ್ಷಣ.
ಅದರಿಂದ ನಿಮ್ಮ ಹೃದಯ ತಿಳಿನೀರಿನ ಸರೋವರದಂತೆ ಸದಾ ನಿರ್ಮಲವಾಗಿದ್ದು, ಅಂತಃಕರಣ ತನ್ನ ಸೂಕ್ಷ್ಮ ಸಂವೇದನೆಯನ್ನು ಯಾವತ್ತಿಗೂ ಕಾಪಾಡಿಕೊಂಡೇ ಬರುತ್ತದೆ. ಅಲ್ಲಿ ಕಸ, ಕಡ್ಡಿ ,ಕೊಳೆ ಕೊಚ್ಚೆ ಇತ್ಯಾದಿಗಳಿಗೆ ಅವಕಾಶವಿರುವುದಿಲ್ಲ. ಕೆಟ್ಟ ಯೋಚನೆ ಇರದ ಮನಸು ಆಗ ತಾನೆ ಕರೆದ ನೊರೆ ಹಾಲಿನಂತೆ ಬಿಳುಪು ಹಾಗೂ ಪರಿಶುದ್ಧ. ಹೀಗಾಗಿಯೇ ಅಂತರಂಗದ ಒಳಗೊಂದು ಹೊರಗೊಂದು ಸ್ವಭಾವದವರ ಭ್ರಮಾತ್ಮಕ ಸ್ಟ್ರೆಂಥ್ ಒಮ್ಮೊಮ್ಮೆ ವೀಕ್ ನೆಸ್ಸ್ ಆಗಿ ಅವರ ಯೋಜನೆಗಳನ್ನೇ ಉಲ್ಟಾ ಮಾಡಬಹುದು. ಆದರೆ ಒಳಗೂ ಹೊರಗೂ ಹೆಚ್ಚು ಕಡಿಮೆ ಒಂದೇ ತರಹ ಇರುವವರ ತಾತ್ಕಾಲಿಕ ದೌರ್ಬಲ್ಯವೆಂಬುದು ಕೊನೆಗೆ ಶಾಶ್ವತ ಶಕ್ತಿಯಾಗಿಯೂ ಪರಿಣಮಿಸಲೂ ಬಹುದು.
ಅದೇನೇ ಇರಲಿ, ಎಲ್ಲಿಯವರೆಗೆ ನಮ್ಮೊಳಗೆ ಯಾವ ದುರುದ್ದೇಶವೂ ಇಲ್ಲದೇ ಯಾರಿಗೂ ತೊಂದರೆ ಕೊಡದೇ ನಾವೂ ಬದುಕಿ ಇತರರನ್ನೂ ಬದುಕಲು ಬಿಡುತ್ತಾ ಮನಸಿನ ಒಳಗೂ .ಹೊರಗೂ ನಾವು ನಾವಾಗಿಯೇ ಇರುತ್ತೇವೆಯೋ ಹಾಗೂ ನಮ್ಮನ್ನು ನಮ್ಮಂತೆಯೇ ಅಕ್ಸೆಪ್ಟ್ ಮಾಡಿಕೊಳ್ಳುವ ಮಂದಿ ಇರುತ್ತಾರೋ ಅಲ್ಲಿಯವರೆಗೂ ಈ ಬದುಕಿನ ಅಷ್ಟೂ ಸಂತಸ- ನೆಮ್ಮದಿಯ ಪ್ರತೀ ಗುಕ್ಕನ್ನೂ ಅನುಭವಿಸುವ ಯೋಗ ನಮ್ಮದಾಗಬಹುದು.

ಹಿರಿಯೂರು ಪ್ರಕಾಶ್.








