ನಮ್ಮಲ್ಲಿ ಬಹಳಷ್ಟು ಜನರ ಒಂದು ಕಾಮನ್ ಕಂಪ್ಲೇಂಟುಗಳಲ್ಲಿ ” ನನ್ನನ್ನು ಯಾರೂ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ” ಅಥವಾ ನಾನೆಷ್ಟೇ ಪ್ರಯತ್ನಿಸಿದರೂ ನಾನು ಯಾರಿಗೂ ಸರಿಯಾಗಿ ಅರ್ಥ ಆಗಿಲ್ಲ, ನನ್ನನ್ನೇಕೆ ಎಲ್ಲರೂ ಮಿಸ್ಟೇಕ್ ಮಾಡಿಕೊಳ್ಳುತ್ತಾರೆ ” ಎಂಬುದೂ ಒಂದು.!
ಹೀಗೆ ಅವಲತ್ತುಕೊಳ್ಳುವ ಮನುಷ್ಯನ ಈ ಮನಃಸ್ಥಿತಿಯನ್ನು ಕುಟುಂಬದಲ್ಲಿ, ಸ್ನೇಹಿತರಲ್ಲಿ, ಸಹೋದ್ಯೋಗಿಗಳಲ್ಲಿ ಅಥವಾ ತೀರ ಪರಿಚಿತರಲ್ಲೂ ಸಹಜವಾಗಿ ಕಂಡಿದ್ದೇವೆ ಅಲ್ಲವೇ..?
ನನಗೆ ಇಂದಿಗೂ ಕೌತುಕವೆನಿಸುವುದು, ನಮ್ಮ ಸನಿಹಕ್ಕೆ ಬರುವ ಒಬ್ಬ ವ್ಯಕ್ತಿಯನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಲಿಕ್ಕೆ ಅಂದಾಜು ಎಷ್ಟು ಸಮಯ ಬೇಕಾಗಬಹುದು ? ಎಂಬ ಪ್ರಶ್ನೆ. ಇದು ಒಬ್ಬರಿಂದ ಮತ್ತೊಬ್ಬರಿಗೆ ಅವರವರ ಸ್ವಭಾವಕ್ಕನುಗುಣವಾಗಿ ಭಿನ್ನವಾಗಿರಬಹುದಾದರೂ ಒಂದು ಆವರೇಜ್ ಸಮಯ ಇಷ್ಟೇ ಅಂತ ನಿರ್ದಿಷ್ಟವಾಗಿ ಹೇಳುವುದು ಸ್ವಲ್ಪ ಕಷ್ಟವೇ ! ಮನುಷ್ಯರಲ್ಲಿನ ಗುಣ ಸ್ವಭಾವಗಳು ಎಷ್ಟು ಕಾಂಪ್ಲಿಕೇಟೇಡ್ ಅಂದ್ರೆ ಒಂದಷ್ಟು ಜನರನ್ನು ಅರ್ಥ ಮಾಡಿಕೊಳ್ಳಲು ಕೆಲವೇ ನಿಮಿಷಗಳು ಸಾಕಾದರೆ ಮತ್ತೇ ಹಲವರನ್ನು ಅರ್ಥ ಮಾಡಿಕೊಳ್ಳಲಿಕ್ಕೆ ಈ ಜನ್ಮ ಪೂರ್ತಿ ಸಾಕಾಗೋಲ್ಲ. ಈಗಿದ್ದ ಜನ ಸ್ವಲ್ಪ ಕಾಲದ ನಂತರ ಹಾಗೆಯೇ ಇರೋಲ್ಲ. ಬೆಂಗಳೂರಿನ ಹವಾಮಾನದಂತೆ ಅವರ ಮನಸ್ಥಿತಿಗಳೂ ಸಹ ಅನಿರೀಕ್ಷಿತವಾಗಿ ಬದಲಾಗುತ್ತಲೇ ಇರುತ್ತವೆ ಹೀಗಾಗಿ ನಿಮ್ಮ ಆಲೋಚನೆಗೆ ತಕ್ಕನಾದ ಅರ್ಥಕ್ಕೆ ಮತ್ತೊಬ್ಬರು ಫ಼ಿಟ್ ಆಗುವುದು ಅಷ್ಟು ಸಲೀಸಾದ ಕೆಲಸವಲ್ಲ.
ಓಕೆ, ಊರೆಲ್ಲಾ ಉಸಾಬರಿ ಬೇಡ. ಜೀವನಪೂರ್ತಿ ಜೊತೆಯಾಗಿರುವ ಸಂಗಾತಿಗಳಲ್ಲಿ ಎಷ್ಟು ಜೋಡಿಗಳು ಸರಿಯಾಗಿ ಪರಸ್ಪರ ಅರ್ಥವಾಗಿರಬಲ್ಲರು ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಅಲ್ಲಿಯೂ ಅಲ್ಲಲ್ಲಿ ಗೊಂದಲಗಳೇ ಕಾಣುತ್ತವೆ.
ಅಷ್ಟೇಕೆ..! ಇಂದು ಬಂಗಾರದ ಬೆಲೆಯಂತೆ ಹಿಡಿತಕ್ಕೆ ಸಿಗದೆ, ಮನಬಂದಂತೆ ಏರುತ್ತಿರುವ ಗಂಡ ಹೆಂಡಿರ ನಡುವಿನ ಡೈವೋರ್ಸ್ ಕೇಸುಗಳಲ್ಲೂ ಒಬ್ಬರನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದು ಅಥವಾ ಅಪಾರ್ಥ ಮಾಡಿಕೊಂಡಿರುವುದು ಸಹಾ ಒಂದು ಪ್ರಮುಖವಾದ ಕಾರಣವೇ.!
ನನ್ನ ಅಡ್ವೋಕೇಟ್ ಮಿತ್ರನೊಬ್ಬ ಹೇಳಿದಂತೆ ಅವನಲ್ಲಿಗೆ ಬರುವ ಬಹಳಷ್ಟು ಡೈವೋರ್ಸ್ ಕೇಸುಗಳಲ್ಲಿ ಗಂಡ-ಹೆಂಡತಿಯರು ಪರಸ್ಪರ ಅಪಾರ್ಥಗಳಿಂದಾಗಿ ಅಥವಾ ಸ್ವಪ್ರತಿಷ್ಠೆ ( ಇಗೋ) ಯಿಂದಾಗಿ ರೂಢಿಸಿಕೊಂಡ ಅಭಿಪ್ರಾಯಗಳೇ ಕಾರಣವಂತೆ !
ಆಲ್ ರೈಟ್….,ಮದುವೆಯಾಗಿ ಕೆಲವೇ ತಿಂಗಳಲ್ಲಿ ಅಥವಾ ಒಂದೆರಡು ವರ್ಷಗಳಲ್ಲಿ ವಿಚ್ಛೇದನಗೊಳ್ಳುವ ಜೋಡಿಗಳು ಒಬ್ಬರಿಗೊಬ್ಬರು ಸರಿಯಾಗಿ ಅರ್ಥವಾಗಿಲ್ಲವೆಂದರೆ ಅದರಲ್ಲಿ ಸ್ವಲ್ಪ ಮಟ್ಟಿಗೆ ಹುರುಳಾದರೂ ಇರುತ್ತದೆ. ಏಕೆಂದರೆ ಅವರಿಗೆ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಬೇಕಾದ ಸಾಕಷ್ಟು ಸಮಯ ಸಿಕ್ಕಿಲ್ಲವೆಂದೇ ಇಟ್ಟುಕೊಳ್ಳೋಣ. ಆದರೆ ಮದುವೆಯಾಗಿ ಹದಿನೈದು- ಇಪ್ಪತ್ತು ವರ್ಷಗಳಾದರೂ , ಸಿಲ್ವರ್ ಜೂಬಿಲಿ ಅಥವಾ ಗೋಲ್ಡನ್ ಜೂಬಿಲಿ ಆಚರಿಸಿಕೊಂಡ ಕೆಲವು ಜೋಡಿಗಳಲ್ಲೂ ಈ “ಅರ್ಥ ಮಾಡಿಕೊಳ್ಳಲಿಲ್ಲ” ಎಂಬ ಕೊರಗು ಯಾವುದೋ ಒಂದು ಸಂಧರ್ಭದಲ್ಲಿ ಬಂದು ಹೋಗುವುದೂ ಸಹಾ ಅಚ್ಚರಿಯನ್ನುಂಟು ಮಾಡುತ್ತದೆಯಲ್ಲವೇ… ?
ಬಿಡಿ….ಅದೂ ಬಿಟ್ಟಾಕಿ !
ಒಂಭತ್ತು ತಿಂಗಳು ಹೊತ್ತು ಹೆತ್ತು ಸಾಕಿ ಸಲಹಿದ ಭೂಮಿ ಮೇಲಿನ ಏಕೈಕ ನಿಸ್ವಾರ್ಥಜೀವಿ ” ಅಮ್ಮ ” ಎಂಬ ಮಮತಾಮಯಿಯನ್ನೇ ಹಾಗೂ ಆಕೆಯ ಮನಸನ್ನೇ ನೆಟ್ಟಗೆ ಅರ್ಥಮಾಡಿಕೊಳ್ಳದ ಅದೆಷ್ಟು ಮಕ್ಕಳು ನಮ್ಮ ನಡುವೆ ಇಲ್ಲ ಹೇಳಿ. ? ತಾಯಿಯಂಥ ತಾಯಿ ಮನಸನ್ನೇ ಅರ್ಥಮಾಡಿಕೊಳ್ಳಲಾಗದ ಸಂವೇದನಾರಹಿತ ಅಯೋಗ್ಯರೇ ಇರುವ ಈ ಸಮಾಜದಲ್ಲಿ ಇನ್ನು ಇತರರು ಸರಿಯಾಗಿ ಅರ್ಥವಾಗಲಿಲ್ಲವೆಂದರೆ ಅಚ್ಚರಿಯೇನಿಲ್ಲ ಅಲ್ಲವೇ..?
ಅಲ್ಲಿಗೆ ಒಬ್ಬರ ಮನಸನ್ನು, ಅವರ ಇಡೀ ವ್ಯಕ್ತಿತ್ವವನ್ನು ಸರಿಯಾಗಿ ಅರ್ಥೈಸಿಕೊಳ್ಳಲು ನೀವೆಷ್ಟು ಕಾಲ ಅವರ ಜೊತೆಯಲ್ಲಿದ್ದಿರಿ , ಅವರೊಟ್ಟಿಗೆ ಬದುಕಿದಿರಿ ಎಂಬುದು ಮ್ಯಾಟರ್ ಆಗೋಲ್ಲ. ಹಾಗಿದ್ದಲ್ಲಿ ಜನ್ಮ ಕೊಟ್ಟವರ ಮನಸ್ಸನ್ನು, ಕೈಹಿಡಿದವರ ಹೃದಯವನ್ನು , ಒಂದೇ ರಕ್ತ ಹಂಚಿಕೊಂಡು ಜನಿಸಿದವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳದ ಮುಠಾಳರು ಭೂಮಿ ಮೇಲೆ ಇರೋದಕ್ಕೆ ಸಾಧ್ಯವೇ ಇರುತ್ತಿರಲಿಲ್ಲ. ಹೈ ನಾ….?
ನೀವು ಒಬ್ಬರಿಗೆ ಅರ್ಥವಾಗಲಿಲ್ಲ ಎಂದರೆ ಅರ್ಥ, ಅದು ನಿಮ್ಮ ತಪ್ಪಲ್ಲದೆಯೂ ಇರಬಹುದು ಅಥವಾ ನಿಮ್ಮ ಮಾತು, ಕತೆ, ಮೌನ, ಸಂವಹನ, ಸ್ವಭಾವ , ಸಂಧರ್ಭ, ಸಮಯ, ಬಾಡಿ ಲಾಂಗ್ವೇಜು ಅಥವಾ ನಿಮ್ಮ ಅದೃಷ್ಟ ದುರಾದೃಷ್ಟಗಳೂ ಕಾರಣವಿದ್ದಿರಬಹುದು. ಎಷ್ಟೋ ಬಾರಿ ನಿಮ್ಮಲ್ಲಿಲ್ಲದ ಉದ್ದೇಶಕ್ಕೆ , ನಿಮ್ಮದಲ್ಲದ ತಪ್ಪಿಗೆ ನೀವು ಅಪಾರ್ಥಕೊಳಗಾಗಿ ಮಾನಸಿಕವಾಗಿ ಶಿಕ್ಷೆ ಅನುಭವಿಸುವ ಸನ್ನಿವೇಶಗಳೂ ಸೃಷ್ಟಿಯಾಗಬಹುದಲ್ಲವೇ ?
ಹೀಗಾಗಿ ಎಲ್ಲರೂ ಒಂದಲ್ಲಾ ಒಂದು ಬಾರಿ ಅಥವಾ ಹಲವು ಬಾರಿ ” ನನ್ನನ್ನು ಇವರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ” ಎಂದು ಬೇರೆಯವರಿಗೆ ಹೇಳಿರುವ ಸಂಧರ್ಭ ಮತ್ತು ಇತರರು ನಿಮಗೆ ಅದೇ ಮಾತನ್ನು ಹೇಳಿರುವ ಸನ್ನಿವೇಶ ಎದುರಿಸಿಯೇ ಇರುತ್ತೀರಿ.
ಈ ಎಲ್ಲಾ ಗೊಂದಲಗಳೇನೇ ಇದ್ದರೂ ನಿಮ್ಮ ಹತ್ತಿರಕ್ಕೆ ಬಂದವರಲ್ಲಿ ನೀವು ಎಷ್ಟರಮಟ್ಟಿಗೆ ಪ್ರಾಮಾಣಿಕ ಪ್ರೀತಿ, ನಂಬಿಕೆ, ವಿಶ್ಚಾಸ , ಕಾಳಜಿ ಹಾಗೂ ಅದಮ್ಯ ಭರವಸೆಗಳನ್ನು ಹಂಚಿಕೊಂಡಿದ್ದೀರಿ ಎಂಬುದು ಲೆಕ್ಕಕ್ಕೆ ಸಿಕ್ಕರೆ, ಹಾಗೂ ಇತರರಿಗೆ ನೀವೆಂದೂ ಕೇಡನ್ನು ಬಯಸಿಲ್ಲ ಎಂಬ ಆತ್ಮವಿಶ್ವಾಸ ನಿಮ್ಮಲ್ಲಿದ್ದರೆ ನೀವೆಂದಿಗೂ ಈ ಅರ್ಥ ಅಪಾರ್ಥಗಳ ಸುಳಿಗೆ ಸಿಲುಕದಂತಿರಬಹುದು, ಒಂದೊಮ್ಮೆ ಸಿಕ್ಕರೂ, ಅಂತಹ ಸಂಧರ್ಭವನ್ನು ಆತ್ಮಸ್ಥೈರ್ಯದಿಂದ ಎದುರಿಸಲೂ ಬಹುದು.
ಯಾರನ್ನೂ ಅನಗತ್ಯವಾಗಿ ವಿವೇಚಿಸದೇ ಅಪಾರ್ಥ ಮಾಡಿಕೊಳ್ಳಬೇಡಿ ಹಾಗೆಯೇ ಯಾರಿಂದಲೂ ವಿನಾಕಾರಣ ಅಪಾರ್ಥಕ್ಕೆ ಒಳಗಾಗುವ ಸನ್ನಿವೇಶಗಳನ್ನು ಸೃಷ್ಟಿಸಿಕೊಳ್ಳಬೇಡಿ….!
ಮರೆಯುವ ಮುನ್ನ
ಇತ್ತೀಚಿಗೆ ನೋಡಿದ ಯಾವುದೋ ಒಂದು ಮಲೆಯಾಳಂ ಸಿನಿಮಾದ ಸನ್ನಿವೇಶವೊಂದರಲ್ಲಿ ಮದುವೆಯಾಗಿ ಇಪ್ಪತ್ತೈದು ವರ್ಷ ತುಂಬಿದ ದಂಪತಿಗಳಲ್ಲಿ ಕ್ಷುಲ್ಲಕ ಕಾರಣಕ್ಕೆ ವಾದ ವಿವಾದ ಶುರುವಾಗಿ, ಕೊನೆಗೆ ಗಂಡ ತನ್ನ ಹೆಂಡತಿಗೆ ತನ್ನ ತಪ್ಪೇನೂ ಇಲ್ಲವೆಂದು ಪರಿಪರಿಯಾಗಿ ಸಮರ್ಥಿಸಿಕೊಳ್ಳುವಾಗ ” ಇಷ್ಟು ವರ್ಷವಾದರೂ ನನ್ನನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ನೀನು ” ಎಂದು ಕೂಗಾಡುತ್ತಾನೆ. ಅದಕ್ಕೆ ಗಂಡನ ಮಾತನ್ನು ನಂಬದ ಅವಳು ” ನಿಜ, ನಿಮ್ಮನ್ನು ಇಷ್ಟು ವರ್ಷ ತಪ್ಪಾಗಿ ಅರ್ಥಮಾಡಿಕೊಂಡಿದ್ದೆ. ಆದರೆ ಈಗ ನಿಮ್ಮ ನಿಜವಾದ ಬಣ್ಣ ಏನೆಂದು ಅರ್ಥವಾಗಿದೆ ” ಎಂದು ಪ್ರತ್ಯುತ್ತರ ಕೊಡುತ್ತಲೇ ಹೋಗುತ್ತಾಳೆ.
ಅದನ್ನು ನೋಡಿ ” ದಂಪತಿಗಳು ಒಬ್ಬರನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಳ್ಳಲು ಕಾಲು ಶತಮಾನ ಸಾಕಾಗಲಿಲ್ಲವೇ..? ಈ ತರಹದ ಕೇಸುಗಳೂ ಇರುತ್ತವೆಯಾ..? ಎಂಬ ಚಿಕ್ಕ ಥಾಟ್ ನನ್ನಲ್ಲಿ ಬಂದು ಕೊನೆಗೆ ” ಇದು ಸಿನಿಮಾ ತಾನೇ ” ಎಂದು ಸುಮ್ಮನಾದೆ.
ಆದರೆ, ಎಲ್ಲಿ ಒಬ್ಬರ ಮೇಲೆ ಮತ್ತೊಬ್ಬರಿಗೆ ಪರಸ್ಪರ ಪ್ರಾಮಾಣಿಕ ನಂಬಿಕೆ ಇರುವುದಿಲ್ಲವೋ ಅಲ್ಲಿ ಒಬ್ಬರನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಳ್ಳಲು ಕೇವಲ ಕಾಲಲ್ಲ…ಪೂರ್ತಿ ಶತಮಾನ ಕಳೆದರೂ ಸಾಧ್ಯವಿಲ್ಲ “
ನಿಜಾನಾ….?

ಹಿರಿಯೂರು ಪ್ರಕಾಶ್.