ಅನೂಹ್ಯ ಸ್ವಾದ, ಆಕರ್ಷಕ ಬಣ್ಣ, ಅಪ್ರತಿಮ ಸುವಾಸನೆಯಿಂದ ಆಬಾಲವೃದ್ಧರನ್ನೂ ತನ್ನೆಡೆಗೆ ಸೆಳೆಯುವ ಹಣ್ಣು ಹಲಸು. ದೂರದ ಮರದಲ್ಲಿ ಬಿಟ್ಟ ಹಲಸಿನ ಹಣ್ಣು ಅದರ ಪರಿಮಳದಿಂದಲೇ ತನ್ನತ್ತ ಕೈಬೀಸಿ ಕರೆಯುತ್ತದೆ.
ಅನಾದಿಕಾಲದಿಂದಲೂ ಹಲಸು ಬಳಕೆಯಲ್ಲಿರುವ ಹಲಸನ್ನು ಹಣ್ಣುಗಳ ಸಾಮ್ರಾಟನೆಂದರೆ ತಪ್ಪಾಗಲಾರದು. ಆದರೆ ಹಣ್ಣುಗಳ ಸಾಮ್ರಾಟನಾಗಿಯೂ ವಿದೇಶಿ ಹಣ್ಣುಗಳ ನಡುವೆ ನಮ್ಮ ಹಳ್ಳಿ ಹಲಸು ನಮ್ಮ ಊರಲ್ಲಿ, ದೇಶದಲ್ಲಿ ಅವಜ್ಞೆಗೊಳಗಾಗಿದೆ. ಅದರ ಬೃಹದಾಕಾರವೇ ಅದಕ್ಕೆ ಮುಳುವಾಗಿದೆ ಎಂದರೆ ತಪ್ಪಲ್ಲ.ವಿಪರ್ಯಾಸವೆಂದರೆ ಭಾರತದ ಮೂಲದ ಈ ಹಣ್ಣು ಇತ್ತೀಚಿನ ದಿನಗಳಲ್ಲಿ ವಿದೇಶಗಳಲ್ಲಿ ಜನಪ್ರಿಯತೆ ಗಳಿಸುತ್ತಿದೆ.
ಹಸಿವು ನೀಗಿಸಲು, ಜೇಬು ತುಂಬಿಸಲು ಹಲಸು ಇಂದು ಸಹಕಾರಿಯಾಗಿದೆ. ಎಷ್ಟೋ ಜನರು ಮರೆತಿದ್ದ ಬಹುಪಯೋಗಿ ಹಲಸನ್ನು ಮತ್ತೆ ಬೆಳೆಯಲು ಆರಂಭಿಸಿದ್ದಾರೆ.ವಾಣಿಜ್ಯಿಕವಾಗಿ ಬೆಳೆದು ಕೈತುಂಬಾ ಲಾಭ ಗಳಿಸುತ್ತಿದ್ದಾರೆ. ಹಳ್ಳಿ ಹಲಸು ದೇಶ, ವಿದೇಶಗಳಲ್ಲಿ ತನ್ನ ಪರಿಮಳ ಬೀರುತ್ತಿದೆ.
ಹಿತ್ತಲ ಹಲಸೇ ಮದ್ದು
ಒಂದು ಹಲಸು ಅದರ ಪ್ರಯೋಜನ ಮಾತ್ರ ನೂರಾರು. ಹಲಸಿನ ಎಲೆ, ಎಳೆಹಲಸಿನ ಕಾಯಿ (ಗುಜ್ಜೆ), ಹಣ್ಣು, ಬೀಜ ಹೀಗೆ ಪ್ರತಿಯೊಂದರಲ್ಲೂ ಒಂದಲ್ಲ ಒಂದು ಔಷಧೀಯ ಗುಣವಿದೆ. ಇತ್ತೀಚಿನ ಸಂಶೋಧನೆ ಪ್ರಕಾರ ಹಲಸಿನಲ್ಲಿ ಹಲವು ಔಷಧೀಯ ಗುಣಗಳಿವೆ ಎಂಬುದು ಸಾಬೀತಾಗಿದೆ. ಹೃದ್ರೋಗ, ಮಧುಮೇಹ, ಕ್ಯಾನ್ಸರ್ ಮೊದಲಾದ ರೋಗಗಳನ್ನೂ ತಡೆಗಟ್ಟುವ ಔಷಧೀಯ ಗುಣ ಹಲಸಲ್ಲಿದೆ ಎಂದು ತಿಳಿದು ಬಂದಿದ್ದು, ಇನ್ನಷ್ಟು ಸಂಶೋಧನೆಗಳು ನಡೆಯುತ್ತಿದೆ.
ಹಲಸು ಒಂದಲ್ಲ ಒಂದು ರೀತಿಯಲ್ಲಿ ಬಳಕೆಯಲ್ಲಿದೆ. ತರಕಾರಿಯೂ ಹೌದು, ಹಣ್ಣು ಹೌದು. ಮಾಂಸದ ರೂಪದಲ್ಲಿ ಅಂದರೆ ಪರ್ಯಾಯ ಮಾಂಸ ರೂಪದಲ್ಲಿ (substitute meet) ಉತ್ತರ ಭಾರತದ ಹೊಟೇಲ್ ಗಳಲ್ಲಿ ಬಳಕೆ ಯಲ್ಲಿದೆ. ಎಳೆ ಹಲಸು ಉಪ್ಪಿನಕಾಯಿ, ಫ್ರೈ, ತರಕಾರಿಯಾಗಿ ಪದಾರ್ಥಕ್ಕೆ ಬಳಕೆಯಾಗುತ್ತೆ. ಬಳಿಕ ಬೆಳೆದ ಹಲಸನ್ನು ಮತ್ತೆ ಚಿಪ್ಸ್, ಹಪ್ಪಳ, ದೋಸೆ, ಪೋಡಿ ಮಾಡಿ ಚಪ್ಪರಿಸಬಹುದು!. ಇದರಿಂದಾಗಿ ಹಲಸು ಬಹುಪಯೋಗಿ. ಹಣ್ಣಾದ ಬಳಿಕವೂ ಬಹುರೂಪಿ. ಜ್ಯೂಸ್, ಪಾಯಸ, ಇಡ್ಲಿ, ದೋಸೆ, ಗಟ್ಟಿ, ಪತ್ತೋಳಿ, ಮಾಂಬಳ, ಮುಳಕ (ಸಟ್ಟೇವು), ಗೆಣಸಲೆ, ಬನ್ಸ್, ಶಿರಾ, ಹೋಳಿಗೆ ಹೀಗೆ ಹತ್ತು ಹಲವು ಬಗೆಯ ಖಾದ್ಯಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಹಲಸಿನ ಬೀಜವನ್ನು ಬೀಸಾಡುವಂತಿಲ್ಲ. ಅದನ್ನೂ ವಿವಿಧ ಪದಾರ್ಥ ಹಾಗೂ ಖಾದ್ಯ ತಯಾರಿಸಲು ಸಾಧ್ಯ. ಬೀಜವನ್ನು ಬಳಸಿ ಚಾಕೊಲೇಟ್ ತಯಾರಿಸಬಹುದು ಎಂದು ಸಂಶೋಧಿಸಿದ್ದಾರೆ. ಹೀಗೆ ಬಹುಪಯೋಗಿ ಹಲಸು ಕಲಿಯುಗದ ಕಲ್ಪವೃಕ್ಷವೇ ಹೌದು.
ನ್ಯೂಟ್ರಿಯೆಂಟ್ ಗಳ ಆಗರ :

ಹಲಸಿನಲ್ಲಿ ದೇಹಕ್ಕೆ ಬೇಕಾದ ಅನೇಕ ರೀತಿಯ ಜೀವಸತ್ವಗಳಿವೆ. ಕ್ಯಾಲೋರಿ, ಫಾಟ್, ಡಯೆಟರಿ ಫೈಬರ್, ಪೊಟ್ಯಾಷಿಯಂ, ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್, ಪ್ರೋಟೀನ್ ಸೇರಿ ಅನೇಕ ಆರೋಗ್ಯಯುತ ಖನಿಜಗಳನ್ನು ಹಲಸು ತನ್ನೊಳಗೆ ಇರಿಸಿಕೊಂಡಿದೆ.
ಹಲಸಿನ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಯಾವೆಲ್ಲಾ ಲಾಭಗಳಿವೆ?
1) ಮಲಬದ್ಧತೆಯ ವಿರುದ್ಧ ಹೋರಾಡುವುದು
2) ಅಕಾಲಿಕ ವಯಸ್ಸಾಗುವಿಕೆಯನ್ನು ತಡೆಗಟ್ಟುವುದು
3) ಮಧುಮೇಹವನ್ನು ತಡೆಗಟ್ಟುವುದು.
4) ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು.
5) ರಕ್ತಹೀನತೆಯನ್ನು ತಡೆಗಟ್ಟುವುದು.
6)ಅಧಿಕ ವಿಟಮಿನ್ ಎ ಇರುವುದರಿಂದ ಕಣ್ಣಿನ ತೊಂದರೆಗಳಿಗೆ ಮುಖ್ಯವಾಗಿ ಇರುಳುಗಣ್ಣು ತೊಂದರೆಗಳಿಗೆ ಉತ್ತಮ.
7) ಹಲಸಿನ ಹಣ್ಣಿನಲ್ಲಿ ಹೆಚ್ಚಿನ ಪೋಷಕಾಂಶಗಳಿರುವ ಕಾರಣ ಥೈರಾಯ್ಡ್ ಸಮಸ್ಯೆಗಳಿಗೆ ಪರಿಹಾರವಾಗಿ ಕಾರ್ಯ ನಿರ್ವಹಿಸುತ್ತದೆ.
8) ಚರ್ಮದ ಆರೋಗ್ಯ ಸುಧಾರಣೆಯಾಗುತ್ತದೆ.
9) ಜ್ವರ ಮತ್ತು ಭೇದಿ ಉಂಟಾದಾಗ ಹಲಸಿನ ಬೇರಿನ ಕಷಾಯವನ್ನು ಸೇವಿಸಿದರೆ ಗುಣಕಾರಿ.
10) ಹಲಸಿನ ಹಣ್ಣು ತಿಂದರೆ ನಿದ್ರಾಹೀನತೆ ದೂರವಾಗುತ್ತದೆ.
ಹಲಸಿನ ಬೀಜವೂ ಆರೋಗ್ಯಕಾರಿ

ಕೇವಲ ಹಲಸಿನ ಕಾಯಿ, ಹಣ್ಣು ಮಾತ್ರವಲ್ಲ, ಹಲಸಿನ ಬೀಜ ಕೂಡ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ಬೀಜಗಳನ್ನು ಸಾಂಬಾರಿನ ಜೊತೆ ಬಳಕೆ ಮಾಡುವುದರಿಂದ ಅತ್ಯುತ್ತಮ ಪೋಷಕಾಂಶಗಳು ದೊರಕುತ್ತವೆ.ಅಷ್ಟೇ ಅಲ್ಲ ಈ ಬೀಜಗಳನ್ನು ಒಣಗಿಸಿ ಪುಡಿ ಮಾಡಿ ಕೂಡ ಸೇವನೆ ಮಾಡಬಹುದು.
1) ಹಲಸಿನ ಬೀಜಗಳನ್ನು ಮಧುಮೇಹಿಗಳು ಸೇವಿಸಬಹುದು. ಬ್ಲಡ್‌ಶುಗರ್‌ಬಹುಬೇಗನೆ ನಿಯಂತ್ರಣಕ್ಕೆ ಬರುತ್ತದೆ.
2) ಹಲಸಿನ ಬೀಜಗಳ ಸೇವನೆಯಿಂದ ಮೂಳೆಗಳು ದುರ್ಬಲವಾಗುವುದನ್ನು ತಡೆಯಬಹುದು.
3) ಹಲಸಿನ ಬೀಜದಲ್ಲಿರುವ ಮ್ಯಾಂಗನೀಸ್ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ. ಆದ್ದರಿಂದ ಮಧುಮೇಹಿಗಳು ಯಾವುದೇ ಆತಂಕವಿಲ್ಲದೆ ಇದನ್ನು ಸೇವಿಸಬಹುದು.
4) ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಮತ್ತು ಒಣಗಿದ ನಂತರ ನೀರಿನಿಂದ ತೊಳೆಯಿರಿ. ಮುಖಕ್ಕೆ ನೈಸರ್ಗಿಕ ಕಾಂತಿ ದೊರೆಯುತ್ತದೆ.
5) ಹಲಸಿನ ಬೀಜಗಳು ಹೃದ್ರೋಗಿಗಳಿಗೆ ಉತ್ತಮವಾದ ಆಹಾರವಾಗಿದೆ. ಏಕೆಂದರೆ ಈ ಬೀಜಗಳಲ್ಲಿ ಕೊಲೆಸ್ಟ್ರಾಲ್ ಇಲ್ಲವೇ ಇಲ್ಲ. ಅಲ್ಲದೇ ಇವುಗಳ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಹಾಗೂ ಈ ಮೂಲಕ ಎದುರಾಗುವ ಹೃದಯ ಸ್ತಂಭನ ಹಾಗೂ ಇತರ ಹಲವಾರು ಹೃದ್ರೋಗಗಳಿಂದ ರಕ್ಷಣೆ ಒದಗಿಸುತ್ತದೆ.
ಈ ವಿಷಯಗಳ ಬಗ್ಗೆ ಗಮನವಿರಲಿ
ಹಲಸಿನ ಹಣ್ಣಿನ ಸೇವನೆಯಿಂದ ಕೆಲವರಿಗೆ ಸರಿಯಾಗಿ ಜೀರ್ಣವಾಗದೆ ಅಜೀರ್ಣವಾಗಬಹುದು. ಹೀಗಾಗಿ ಆದಷ್ಟು ರುಚಿಗೆ ಮಾತ್ರ ಸೇವನೆ ಮಾಡಿ.ಇನ್ನು ಕೆಲವರಿಗೆ ಅಲರ್ಜಿಯನ್ನು ಉಂಟು ಮಾಡಿ, ತುರಿಕೆಯಾಗಬಹುದು ಹೀಗಾಗಿ ಎಚ್ಚರಿಕೆ ಅಗತ್ಯ.ಹೊಟ್ಟೆ ತುಂಬ ಹಲಸಿನ ಹಣ್ಣನ್ನೇ ತಿನ್ನಬೇಡಿ. ನಿಮ್ಮ ದೇಹ ಪ್ರಕೃತಿಯ ಅನುಗುಣವಾಗಿ ಸೇವನೆ ಮಾಡಿ ಎಂದು ಸಲಹೆ ನೀಡುತ್ತಾರೆ ಡಾ. ಶರದ್. “ಉಂಡು ಮಾವಿನ ಹಣ್ಣು ತಿನ್ನು, ಹಸಿದು ಹಲಸಿನ ಹಣ್ಣು ತಿನ್ನು” ಎನ್ನುವ ಮಾತು ಕೂಡ ಇದೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

ಸೌಮ್ಯ ಸನತ್ ✍️