– 89ನೇ ವಯಸ್ಸಿನಲ್ಲಿ ಚನ್ನೇಗೌಡರ ನಿಧನ
ಮಂಡ್ಯ, ನವೆಂಬರ್ 12: ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ‘ತಿಥಿ’ ಚಿತ್ರದ ಮೂಲಕ ದೇಶ-ವಿದೇಶಗಳಲ್ಲಿ ಹೆಸರುವಾಸಿಯಾದ ಹಿರಿಯ ನಟ ಗಡ್ಡಪ್ಪ (ಚನ್ನೇಗೌಡ) ಅವರು ಇಂದು (ನ.12) 89ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಮೂಲತಃ ಮಂಡ್ಯ ತಾಲೂಕಿನ ನೊದೆಕೊಪ್ಪಲು ಗ್ರಾಮದ ನಿವಾಸಿಯಾಗಿದ್ದ ಗಡ್ಡಪ್ಪ, ತಮ್ಮ ಸರಳತೆ, ಹಾಸ್ಯಪ್ರಜ್ಞೆ ಮತ್ತು ಸಹಜ ಅಭಿನಯದಿಂದ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದರು. ಕಳೆದ ಒಂದು ತಿಂಗಳ ಹಿಂದೆ ಬಿದ್ದು ಸೊಂಟಕ್ಕೆ ಪೆಟ್ಟಾಗಿದ್ದ ಕಾರಣ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು. ಜೊತೆಗೆ ಅಸ್ತಮಾ ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದರು.
ಇಂದು ಬೆಳಿಗ್ಗೆ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಸಂಜೆ ವೇಳೆಗೆ ಅವರ ಸ್ವಗ್ರಾಮ ನೊದೆಕೊಪ್ಪಲಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಪುತ್ರಿ ಶೋಭಾ ತಿಳಿಸಿದ್ದಾರೆ.
ಚಿತ್ರರಂಗದ ಪಯಣ:
ಗಡ್ಡಪ್ಪ ಅವರು ನಿರ್ದೇಶಕ ರಾಮ್ ರೆಡ್ಡಿ ಅವರ ‘ತಿಥಿ’ ಚಿತ್ರದ ಮೂಲಕ ಅತ್ಯಂತ ಜನಪ್ರಿಯರಾದರು. ಅವರ ಸಹಜ ಅಭಿನಯವು ಪ್ರೇಕ್ಷಕರ ಮನ ಗೆದ್ದು, ಚಿತ್ರಕ್ಕೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ತಂದಿತು. ನಂತರ ಅವರು ‘ತರ್ಲೆ ವಿಲೇಜ್’, ‘ಜಾನಿ ಮೇರಾ ನಾಮ್’, ‘ಹಳ್ಳಿ ಪಂಚಾಯಿತಿ’ ಸೇರಿದಂತೆ ಸುಮಾರು ಎಂಟು ಸಿನಿಮಾಗಳಲ್ಲಿ ಅಭಿನಯಿಸಿದರು.
ಅವರ ಅಭಿನಯ ಶೈಲಿ ಕೃತಕತೆಯಿಲ್ಲದೆ ನೈಸರ್ಗಿಕವಾಗಿದ್ದರಿಂದಲೇ ಜನರ ಹೃದಯದಲ್ಲಿ ಗಡ್ಡಪ್ಪ ಎಂಬ ಹೆಸರು ಸದಾ ಜೀವಂತವಾಗಿದೆ.
ಗಡ್ಡಪ್ಪ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಕನ್ನಡ ಚಿತ್ರರಂಗದ ಗಣ್ಯರು, ಸಹನಟರು ಮತ್ತು ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಸಂತಾಪ ಸೂಚಿಸಿದ್ದಾರೆ.
ಅಭಿಮಾನಿಗಳು “ಗ್ರಾಮೀಣ ಜೀವನದ ನಿಜವಾದ ಪ್ರತಿಬಿಂಬ ನೀಡಿದ ಸರಳ ನಟನಿಗೆ ನಮ್ಮ ನಮನಗಳು” ಎಂದು ಕಣ್ಣೀರಿನ ನಮನ ಸಲ್ಲಿಸಿದ್ದಾರೆ.








