ಬೆಂಗಳೂರು, ಆ.9 – ರಾಜ್ಯ ವಿಧಾನಮಂಡಲದ ಮಳೆಗಾಲ ಅಧಿವೇಶನ ಸೋಮವಾರ (ಆ.11) ಆರಂಭವಾಗುತ್ತಿದ್ದು, ಕಾಲ್ತುಳಿತ, ಒಳ ಮೀಸಲಾತಿ, ರಸಗೊಬ್ಬರದ ಕೊರತೆ, ಅತಿವೃಷ್ಟಿ–ಅನಾವೃಷ್ಟಿ, ಪ್ರವಾಹ, ಮತಗಳ್ಳತನದ ಆರೋಪ ಸೇರಿದಂತೆ ಹಲವಾರು ಪ್ರಮುಖ ವಿಷಯಗಳು ಉಭಯ ಸದನಗಳಲ್ಲಿ ಪ್ರತಿಧ್ವನಿಸುವ ನಿರೀಕ್ಷೆಯಿದೆ.
ಆ.11ರಿಂದ 22ರವರೆಗೆ ಒಟ್ಟು 9 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸದನ ಸೇರುವುದರೊಂದಿಗೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಸಲ್ಲಿಸಲಾಗುವುದು. ಬಜೆಟ್ ಅಧಿವೇಶನದಲ್ಲಿ ಅಮಾನತುಗೊಂಡಿದ್ದ ಬಿಜೆಪಿಯ 18 ಶಾಸಕರ ಮೇಲಿನ ತೀರ್ಮಾನವನ್ನು ಹಿಂಪಡೆಯುವ ಪ್ರಸ್ತಾವವೂ ಮೊದಲ ದಿನವೇ ಮಂಡನೆಯಾಗಲಿದೆ.
ಅಧಿವೇಶನದಲ್ಲಿ ಪ್ರಶ್ನೋತ್ತರ, ಗಮನಸೆಳೆಯುವ ಸೂಚನೆಗಳು, ಕಾಗದ ಪತ್ರ ಮಂಡನೆ ಹಾಗೂ 18ಕ್ಕೂ ಹೆಚ್ಚು ಪ್ರಮುಖ ವಿಧೇಯಕಗಳ ಪ್ರಸ್ತಾಪ ನಡೆಯಲಿದೆ. ಇದರಲ್ಲಿ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ತಿದ್ದುಪಡಿ ವಿಧೇಯಕ, ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ, ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ತಿದ್ದುಪಡಿ ವಿಧೇಯಕ ಪ್ರಮುಖವಾಗಿವೆ.
ರಾಜ್ಯದ ಹಲವೆಡೆ ಮುಂಗಾರು ಮಳೆಯಿಂದ ಅತಿವೃಷ್ಟಿ ಉಂಟಾಗಿ ಪ್ರವಾಹದ ಹಾನಿ ಸಂಭವಿಸಿದ್ದು, ಬೆಳೆಹಾನಿಗೂ ಪರಿಹಾರ ಸಿಗದಿರುವ ಬಗ್ಗೆ ವಿರೋಧ ಪಕ್ಷಗಳು ಪ್ರಶ್ನೆ ಎತ್ತಲಿವೆ. ಕೆಲವಡೆ ಮಳೆಯ ಕೊರತೆಯಿಂದ ಅನಾವೃಷ್ಟಿ ಉಂಟಾಗಿ ಬಿತ್ತನೆಗೆ ಅಡಚಣೆ ಉಂಟಾಗಿದೆ. ರೈತರಿಗೆ ರಸಗೊಬ್ಬರದ ಕೊರತೆಯ ವಿಷಯವೂ ಸದನದಲ್ಲಿ ಬಿಸಿ ಚರ್ಚೆಗೆ ಕಾರಣವಾಗಲಿದೆ.
ಐಪಿಎಲ್ ಪಂದ್ಯ ವಿಜೇತ ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಸಾವನ್ನಪ್ಪಿದ ಘಟನೆ, ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯ ಒಳ ಮೀಸಲಾತಿ ವರದಿ, ಕಾಂಗ್ರೆಸ್ ಆರೋಪಿಸಿರುವ ಮತಗಳ್ಳತನ ಪ್ರಕರಣ, ಹಾಗೂ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆರೋಪಗಳು ಕೂಡ ಪ್ರಮುಖವಾಗಿ ಚರ್ಚೆಗೆ ಬರಲಿವೆ.
ಗೃಹಲಕ್ಷ್ಮಿ ಸೇರಿದಂತೆ ಸರ್ಕಾರದ ಗ್ಯಾರಂಟಿ ಯೋಜನೆಗಳ ಹಣ ಬಿಡುಗಡೆ ವಿಳಂಬ, ಬೆಲೆ ಏರಿಕೆ, ಮತ್ತು ಇತರ ಜನಜೀವನದ ಸಮಸ್ಯೆಗಳ ಕುರಿತು ಬಿಜೆಪಿ–ಜೆಡಿಎಸ್ ಸರ್ಕಾರವನ್ನು ಪ್ರಶ್ನಿಸಲು ಸಜ್ಜಾಗಿದ್ದರೆ, ಕಾಂಗ್ರೆಸ್ ಸರ್ಕಾರ ತನ್ನ ಆಡಳಿತವನ್ನು ಸಮರ್ಥಿಸಿಕೊಳ್ಳಲು ಸಿದ್ಧವಾಗಿದೆ.