ಚಾಮರಾಜನಗರ: ಹನೂರು ತಾಲ್ಲೂಕಿನ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯಲ್ಲಿ ತೆರಳುತ್ತಿದ್ದ ಭಕ್ತನೊಬ್ಬನ ಮೇಲೆ ಇಂದು ಬೆಳಗ್ಗೆ ಚಿರತೆ ದಾಳಿ ನಡೆಸಿರುವ ಘಟನೆ ವರದಿಯಾಗಿದೆ.
ಮೃತನನ್ನು ಮಂಡ್ಯ ಜಿಲ್ಲೆಯ ನಿವಾಸಿಯಾದ ಸುಮಾರು 30 ವರ್ಷದ ಪ್ರವೀಣ್ ಎಂದು ಗುರುತಿಸಲಾಗಿದೆ. ಆತ ತನ್ನ ಗ್ರಾಮದವರೊಂದಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಗಾಗಿ ಬಂದಿದ್ದನು.
ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದ ಕಡೆಗೆ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ವೇಳೆ ಅಚಾನಕ್ ಚಿರತೆಯೊಂದು ಪ್ರವೀಣ್ ಮೇಲೆ ದಾಳಿ ನಡೆಸಿದೆ. ದಾಳಿಯ ಸಂದರ್ಭದಲ್ಲಿ ಕುತ್ತಿಗೆ ಹಾಗೂ ದೇಹದ ಇತರ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವದಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಚಿರತೆ ದಾಳಿ ನಡೆಸಿದ ಕೂಡಲೇ ಪ್ರವೀಣ್ ಜೊತೆಯಲ್ಲಿದ್ದ ಇತರ ಭಕ್ತರು ಸ್ಥಳದಿಂದ ಓಡಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಲಾಗಿದೆ.ಇದನ್ನು ಓದಿ –ಗಗನಯಾನಿ ಸುನಿತಾ ವಿಲಿಯಮ್ಸ್ ನಿವೃತ್ತಿ: 27 ವರ್ಷಗಳ ಸೇವೆಗೆ ತೆರೆ
ಘಟನೆಯ ಸುದ್ದಿ ತಿಳಿದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಸಾಗಿಸಲಾಗಿದೆ. ಈ ಘಟನೆ ಪ್ರದೇಶದಲ್ಲಿ ಭಕ್ತರು ಹಾಗೂ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.








