ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಪಶಮೈಲಾರಾಮ್ ಕೈಗಾರಿಕಾ ಪ್ರದೇಶದಲ್ಲಿರುವ ಸಿಗಾಚಿ ಕೆಮಿಕಲ್ಸ್ ರಾಸಾಯನಿಕ ಕಾರ್ಖಾನೆಯಲ್ಲಿ ಗುರುವಾರ ಮಧ್ಯಾಹ್ನದ ವೇಳೆಗೆ ಸಂಭವಿಸಿದ ಭೀಕರ ಸ್ಫೋಟದಲ್ಲಿ 10 ಕಾರ್ಮಿಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಮತ್ತು ಹಲವು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ರಾಸಾಯನಿಕ ಘಟಕದಲ್ಲಿ ಸ್ಫೋಟವಾದ ಸಂದರ್ಭದಲ್ಲಿ ನೂರಾರು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಪ್ರಾಥಮಿಕ ವರದಿಗಳ ಪ್ರಕಾರ, ರಿಯಾಕ್ಟರ್ ಒಬ್ಬಧನಾಗಿಯೇ ಈ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.
ಸ್ಫೋಟದ ತೀವ್ರತೆ:
ಸ್ಫೋಟದ ಪರಿಣಾಮವಾಗಿ ಕಾರ್ಖಾನೆಯ ಆವರಣದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳದಲ್ಲಿದ್ದ ಕೆಲಸಗಾರರು ಮತ್ತು ಸುತ್ತಲಿನವರು ಭಯಭೀತರಾಗಿದ್ದಾರೆ. ಅಗ್ನಿಶಾಮಕ ದಳಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಿವೆ. ಬೆಂಕಿಯ ಉರಿವನ್ನು ನಿಯಂತ್ರಿಸಲು ಹಲವು ಘಟಕಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆ:
ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳು ತಕ್ಷಣ ಸ್ಥಳಕ್ಕಾಗಮಿಸಿ, ಅವಶೇಷಗಳಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಹೊರತೆಗೆದು ಆಸ್ಪತ್ರೆಗೆ ಕಳುಹಿಸುತ್ತಿವೆ. ಗಾಯಾಳುಗಳನ್ನು ಹತ್ತಿರದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಅತ್ಯಂತ ಗಂಭೀರವಾಗಿದೆ.
ಅಧಿಕಾರಿಗಳ ಪ್ರತಿಕ್ರಿಯೆ:
ಸ್ಥಳೀಯ ಪೊಲೀಸರು ಸ್ಥಳವನ್ನು ಸುತ್ತುವರೆದು ಸಾರ್ವಜನಿಕರನ್ನು ಅಂತರದಲ್ಲಿ ಇರಿಸಿದ್ದಾರೆ. ಅಪಘಾತದ ನಿಖರ ಕಾರಣ ಪತ್ತೆ ಹಚ್ಚಲು ಹಾಗೂ ಕಾರ್ಖಾನೆಯಲ್ಲಿ ಸುರಕ್ಷತಾ ಮಾನದಂಡಗಳನ್ನು ಪಾಲಿಸಲಾಗಿತ್ತೇ ಎಂಬುದರ ಕುರಿತು ವಿಸ್ತೃತ ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನು ಓದಿ –ಅಮರನಾಥ ಯಾತ್ರೆಗೆ ಭದ್ರತಾ ಬಲಗಳು ಸಜ್ಜು
ಶೋಕ ಮತ್ತು ಆತಂಕದ ವಾತಾವರಣ:
ಸ್ಫೋಟದಿಂದಾಗಿ ಕಾರ್ಮಿಕರ ಕುಟುಂಬಗಳಲ್ಲಿ ಶೋಕದ ಛಾಯೆ ನಿರ್ಮಾಣವಾಗಿದೆ. ಅಪಘಾತದ ನಂತರ ಸ್ಥಳೀಯ ಜನತೆ ಹಾಗೂ ಅಧಿಕಾರಿಗಳಲ್ಲಿ ಆತಂಕ ಮನೆಮಾಡಿದ್ದು, ಇಂತಹ ದುರ್ಘಟನೆ ಪುನಃ ಸಂಭವಿಸದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.