ಬೆಂಗಳೂರು: ಉದ್ಯೋಗಸ್ಥ ಮಹಿಳೆಯರಿಗೆ ಋತುಚಕ್ರ ರಜೆ ನೀಡುವ ಕುರಿತು ಸರ್ಕಾರ ಹೊರಡಿಸಿರುವ ಆದೇಶದ ಹಿನ್ನೆಲೆಯಲ್ಲಿ, ಶಾಲಾ ಶಿಕ್ಷಣ ಇಲಾಖೆ ತನ್ನ ಅಧೀನದಲ್ಲಿರುವ ಕಚೇರಿ ಹಾಗೂ ಸಂಸ್ಥೆಗಳಲ್ಲಿ ಮಹಿಳಾ ನೌಕರರಿಗೆ ಕಡ್ಡಾಯವಾಗಿ ಋತುಚಕ್ರ ರಜೆ ನೀಡುವಂತೆ ಆದೇಶ ಹೊರಡಿಸಿದೆ.
ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದ್ದು, ಋತುಚಕ್ರ ರಜೆಯನ್ನು ನೀಡುವಲ್ಲಿ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಪ್ರತಿ ತಿಂಗಳು ಒಂದು ದಿನದ ಋತುಚಕ್ರ ರಜೆಯನ್ನು ಮಹಿಳಾ ನೌಕರರು ಬಳಸಿಕೊಳ್ಳಬಹುದಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಋತುಚಕ್ರ ರಜೆಗೆ ವಿಧಿಸಿರುವ ಪ್ರಮುಖ ಷರತ್ತುಗಳು ಇಂತಿವೆ:
• ಮಹಿಳಾ ನೌಕರರು ಆಯಾ ತಿಂಗಳ ಋತುಚಕ್ರ ರಜೆಯನ್ನು ಅದೇ ತಿಂಗಳಲ್ಲಿ ಮಾತ್ರ ಬಳಸಿಕೊಳ್ಳಬೇಕು. ಹಿಂದಿನ ತಿಂಗಳ ರಜೆಯನ್ನು ಮುಂದಿನ ತಿಂಗಳಿಗೆ ವರ್ಗಾಯಿಸಲು ಅವಕಾಶ ಇರುವುದಿಲ್ಲ.
• ಪ್ರತಿ ತಿಂಗಳು ಒಂದು ದಿನದ ಋತುಚಕ್ರ ರಜೆ ಪಡೆಯಲು ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸುವ ಅವಶ್ಯಕತೆ ಇಲ್ಲ.
• 18 ರಿಂದ 52 ವರ್ಷದೊಳಗಿನ, ಋತುಚಕ್ರ ಹೊಂದಿರುವ ಎಲ್ಲಾ ಮಹಿಳಾ ಸರ್ಕಾರಿ ನೌಕರರು ಈ ರಜೆಗೆ ಅರ್ಹರಾಗಿರುತ್ತಾರೆ.
• ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವ ಅಧಿಕಾರ ಹೊಂದಿರುವ ಪ್ರಾಧಿಕಾರವೇ ಋತುಚಕ್ರ ರಜೆಯನ್ನು ಮಂಜೂರು ಮಾಡಬಹುದು.
• ಈ ರಜೆಯನ್ನು ರಜೆ ಅಥವಾ ಹಾಜರಾತಿ ಪುಸ್ತಕದಲ್ಲಿ ಪ್ರತ್ಯೇಕವಾಗಿ ದಾಖಲಿಸಬೇಕು.
• ಋತುಚಕ್ರ ರಜೆಯನ್ನು ಬೇರೆ ಯಾವುದೇ ರಜೆಯೊಂದಿಗೆ ಸಂಯೋಜಿಸಲು ಅವಕಾಶ ಇರುವುದಿಲ್ಲ.
ಇದನ್ನು ಓದಿ –ಸರ್ಕಾರಿ ನೌಕರರಿಗೆ ಖಾದಿ ಬಟ್ಟೆ ಧರಣೆ ಕಡ್ಡಾಯ
ಈ ಆದೇಶದಿಂದ ಶಿಕ್ಷಣ ಇಲಾಖೆಯ ಮಹಿಳಾ ನೌಕರರಿಗೆ ಕೆಲಸದ ಒತ್ತಡದ ನಡುವೆ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಸಹಕಾರಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.








