ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಆರನೇ ರೈಲು ಶೀಘ್ರವೇ ಸಂಚಾರಕ್ಕೆ ಸೇರ್ಪಡೆಯಾಗಲಿದ್ದು, ಡಿಸೆಂಬರ್ 22ರಿಂದ ಈ ಮಾರ್ಗದಲ್ಲಿ ಪ್ರತಿ 12 ನಿಮಿಷಕ್ಕೊಂದು ರೈಲು ಸಂಚರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪಶ್ಚಿಮ ಬಂಗಾಳದ ಟಿಟಾಗಢ ರೈಲ್ ಸಿಸ್ಟಂ ಲಿಮಿಟೆಡ್ (TRSL) ಕಾರ್ಯಾಗಾರದಲ್ಲಿ ತಯಾರಾದ ಆರನೇ ರೈಲು ನವೆಂಬರ್ ಕೊನೆಯ ವಾರದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಗೆ ತಲುಪಿದೆ. ಪ್ರಯಾಣಿಕರಿಗೆ ಈ ರೈಲನ್ನು ಲಭ್ಯವಾಗಿಸುವ ಮೊದಲು ಸಿಗ್ನಲಿಂಗ್ ಇಂಟರ್ಫೇಸ್‌ನ ಅಂತಿಮ ಪರೀಕ್ಷೆಯನ್ನು ಪೂರ್ಣಗೊಳಿಸಬೇಕಿದೆ.
ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರ ಮಾಹಿತಿ ಪ್ರಕಾರ, ಎಲ್ಲಾ ತಾಂತ್ರಿಕ ಪರೀಕ್ಷೆಗಳು ಸರಿಯಾಗಿ ಪೂರ್ತಿಯಾದರೆ ಡಿಸೆಂಬರ್ 22ರಿಂದ ರೈಲನ್ನು ಸಂಚಾರಕ್ಕೆ ಬಿಡುವ ಯೋಜನೆ ನಡೆದಿದೆ.
ಆರ್.ವಿ.ರಸ್ತೆ–ಡೆಲ್ಟಾ ಎಲೆಕ್ಟ್ರಾನಿಕ್ಸ್–ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ವಾಣಿಜ್ಯ ಸಂಚಾರವನ್ನು ಆಗಸ್ಟ್ 11ರಂದು ಕೇವಲ ಮೂರು ಕೋಚ್‌ಗಳೊಂದಿಗೆ ಆರಂಭಿಸಲಾಗಿತ್ತು. ಆಗ ಪ್ರತೀ 25 ನಿಮಿಷಕ್ಕೊಂದು ರೈಲು ಸಂಚರಿಸುತ್ತಿತ್ತು. ನಂತರ ನಾಲ್ಕನೇ ರೈಲು ಸೇರಿದ್ದರಿಂದ ಟ್ರಿಪ್‌ಗಳ ನಡುವಿನ ಅಂತರ 19 ನಿಮಿಷಕ್ಕೆ ಇಳಿಯಿತು. ಪ್ರಸ್ತುತ ದಟ್ಟಣೆ ಸಮಯದಲ್ಲಿ 15 ನಿಮಿಷಕ್ಕೊಂದು ರೈಲು ಸಂಚಾರ ನಡೆಯುತ್ತಿದೆ.ಇದನ್ನು ಓದಿ –ಗೋವಾ ನೈಟ್‌ಕ್ಲಬ್ ದುರಂತ : ಲೂಥ್ರಾ ಸಹೋದರರ ಬಂಧನ
ಹೊಸ ರೈಲು ಸೇರಿದ ನಂತರ ಹಳದಿ ಮಾರ್ಗದ ಸಂಚಾರ ಸೌಲಭ್ಯ ಇನ್ನಷ್ಟು ಸುಗಮವಾಗುವ ನಿರೀಕ್ಷೆಯಿದೆ.








