ಮೈಸೂರು: ಕರ್ನಾಟಕದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಹುಣಸೂರಿನಲ್ಲಿ ಮಾತನಾಡಿದ ಅವರು, “ನನಗೆ ಈಗ 75 ವರ್ಷವಾಗಿದೆ. ಮುಂದಿನ ದಿನಗಳಲ್ಲಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಆದರೆ ಸಹಕಾರ ಕ್ಷೇತ್ರ ಹಾಗೂ ಸಕ್ರೀಯ ರಾಜಕೀಯದಲ್ಲಿ ನಾನು ಮುಂದುವರೆಯುತ್ತೇನೆ,” ಎಂದು ಸ್ಪಷ್ಟಪಡಿಸಿದರು.
ಅವರು ಸಹಕಾರ ಕ್ಷೇತ್ರದ ಸಮಸ್ಯೆಗಳ ಕುರಿತು ಮಾತನಾಡುತ್ತಾ, “ಪಟ್ಟಭದ್ರರ ಹಿಡಿತದಿಂದ ಸಹಕಾರ ಕ್ಷೇತ್ರವನ್ನು ಮುಕ್ತಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದ ಸಹಕಾರ ಕ್ಷೇತ್ರದ ಕಾಯ್ದೆಯಲ್ಲಿ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿಲ್ಲ. ಈ ತಿದ್ದುಪಡಿ ರಾಜ್ಯದ ವ್ಯಾಪ್ತಿಗೆ ಬರುವದರಿಂದ, ರಾಜ್ಯಪಾಲರ ಅನುಮೋದನೆ ಸಾಕು. ಆದರೂ ಕೇಂದ್ರಕ್ಕೆ ಕಳುಹಿಸಲು ಸೂಚನೆ ಬಂದಿದೆ. ಈ ಕುರಿತು ಸರ್ಕಾರ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದೆ,” ಎಂದರು.
ಕಳೆದ ಕೆಲ ಡೈರಿ ಚುನಾವಣೆಗಳು, ತಾಂತ್ರಿಕ ಕಾರಣಗಳಿಂದ ಮತ್ತು ಮತಪಟ್ಟಿ ತಯಾರಿ ಪ್ರಕ್ರಿಯೆಯಿಂದಾಗಿ ಮುಂದೂಡಲ್ಪಟ್ಟಿದ್ದು, ಇತರ ಯಾವುದೇ ಕಾರಣಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.ಇದನ್ನು ಓದಿ –ಕರ್ನಾಟಕದ 6 ಜಿಲ್ಲೆಗಳಿಗೆ ರೆಡ್ ಅಲರ್ಟ್: ಮೇ 26ರವರೆಗೆ ಭಾರೀ ಮಳೆ
“ಸಹಕಾರ ಸಂಘಗಳಲ್ಲಿ ಸದಸ್ಯತ್ವ ಕೇವಲ ಮತಹಾಕಲು ಮಾತ್ರವಲ್ಲ; ಎಲ್ಲ ಸದಸ್ಯರೂ ಸಕ್ರೀಯವಾಗಿ ಭಾಗವಹಿಸಬೇಕು ಎಂಬುದು ಸರ್ಕಾರದ ಉದ್ದೇಶ. ಮುಂದೆ ಎಲ್ಲಾ ಸಹಕಾರಿ ಸಂಸ್ಥೆ ಚುನಾವಣೆಗಳು ನಿಗದಿತ ವೇಳೆಗೆ ನಡೆಯಲಿವೆ,” ಎಂದು ಸಚಿವರು ತಿಳಿಸಿದ್ದಾರೆ.