ಅಮ್ಮ,ಅವ್ವ,ತಾಯಿ,ಮಾತೆ,ಜನನಿ,ಆಯಿ ಎಂಬ ಬಹಳ ಆಪ್ತವಾದ ಮಧುರ ಶಬ್ದಗಳ ಕರೆಗೆ ಓ..ಎಂದು
ಓಡಿಬರುವ ಮಾತೃದೇವತೆ ದೈವಸ್ವರೂಪಳು.ಜೀವ,ಜೀವದುಸಿರು,ಜೀವನವನ್ನು ಹಸಿರಾಗಿಸಿ ನಳ ನಳಿಸುವಂತೆ ಮಾಡುವ ಮಾತೆಗೆ ಸರಿಸಮಾನರುಂಟೆಜಗದಲಿ.ಕಣ್ಣಿಗೆ ಕಾಣುವ ದೇವರೆಂದರೆ ಈ ಅವನಿಯಲ್ಲಿ ಅಮ್ಮನಲ್ಲವೆ ?
ಗರ್ಭದಲಿ ಚಿಗುರಿದ ಕುಡಿಯ ಸಲಹಲು ಅದೆಷ್ಟು ಅಕರಾಸ್ತೆ ವಹಿಸುವಳು.
ತನಗಾಗುವ ಸುಸ್ತು ಸಂಕಟ, ವಾಕರಿಕೆ,ತಲೆಸುತ್ತು ಎಲ್ಲವನ್ನೂ ತನಗೆ ದೇವರು ಕೊಟ್ಟ ವರವೆಂದು ಸಂತಸದಿಂದ,ಸಂಭ್ರಮದಿಂದ ಅನುಭವಿಸಿ, ತಾಯ್ತನದ ಚಂದದ ಪಟ್ಟಕ್ಕಾಗಿ ನವಮಾಸ ಕಾತರಿಸಿ, ನವಜೀವವೊಂದು ತನ್ನದುರದಲಿ ಒದೆಯುತ್ತಿರಲು ಹಿತವಾಗಿ ಒಡಲ ಸವರಿ,ತನ್ನ ಪ್ರತಿರೂಪ ಹೊರಜಗವ ನೋಡಲು ಬರುವ ಘಳಿಗೆಗಾಗಿ ಪರಿತಪಿಸಿ ಏನೆಲ್ಲಾಸಿದ್ಧತೆ ಮಾಡಿಕೊಳ್ಳುವಳು.ಹಲವು ಕನಸು ಕಟ್ಟುವಳು.ಒಡಲೊಡೆದು ಜೀವಹೋಗುವುದೋ ಎಂಬಾಕ್ಷಣದ ನೋವ ಸಹಿಸಿಬಿಡುವಳು,ಕಂದನ ಮೊಗವ ಕಂಡಾಕ್ಷಣಕೆ ಜಗವ ಗೆದ್ದಂತೆ ಸಡಗರಪಡುವಳು. ಹುಟ್ಟಿದ ಮಗು ಹೆಣ್ಣಾಗಲಿ ,ಗಂಡಾಗಲಿ, ಕುರೂಪಿಯಾಗಲಿ,ಕಪ್ಪಿರಲಿ,ಬೆಳ್ಳಗಿರಲಿ,ಅಂಗ ವೈಕಲ್ಯವಿರಲಿ ಹಡೆದ ತಾಯಿಯ ಮಮತೆಗೆ ಕೊರತೆಯಿಲ್ಲ.ತನ್ನ ರಕ್ತ ಹಂಚಿಕೊಂಡು ಭೂಮಿಗೆ ಬಂದ ಜೀವ ಸುಖವಾಗಿರಬೇಕೆಂಬುದಷ್ಟೇ ಅವಳ ಬಯಕೆ.
ಬಡತನದ ಬೇಗೆಯಲಿ ಬೇಯುತ್ತಾ,ಹೊಟ್ಟೆ ಪಾಡಿಗಾಗಿ ಕಲ್ಲು ಕುಟ್ಟುವ,ಮಣ್ಣು ಹೊರುವ,ಕೂಲಿನಾಲಿ ಮಾಡುವ,ಮನೆ ಮನೆ ಮುಸುರೆ ಕೆಲಸ ಮಾಡುವ ತಾಯಂದಿರನ್ನು ನೋಡುತ್ತೇವೆ.ಕಂಕುಳಲ್ಲಿ ಮಗುವ ಹೊತ್ತು,ಅದರ ಲಾಲನೆ ಪಾಲನೆ ಮಾಡುತ್ತಾ,ತಾವು ದುಡಿಯುವ ಸ್ಥಳದಲ್ಲೇ ಅದಕ್ಕೊಂದು ಜೋಲಿ ಕಟ್ಟಿಯಾದರೂ ಮಗುವನ್ನು ಕಾಪಿಡುತ್ತಾರೆ.ಕಂದನ ಹೊಟ್ಟೆ ತುಂಬಿಸಲೋಸುಗ ದುಡಿದು,ಅಮೃತಧಾರೆ ಎರೆಯುತ್ತಾರೆ.
ಎಲ್ಲಾ ತಾಯಂದಿರಿಗೂ ಬದುಕಿನ ಹಾದಿ ಸುಗಮವಲ್ಲ . ಹಣ,ಆಸ್ತಿ, ಸಂಗಾತಿ,ಬಂಧುಗಳು ಯಾವುದೂ ಇಲ್ಲವಾಗಿ ಏಕಾಂಗಿಯಾಗಿ ಜೀವನ ಎದುರಿಸುವ ಸಂದರ್ಭದಲ್ಲೂ ತಾಯಿಯಾದವಳು ತನ್ನ ಕರುಳ
ಬಳ್ಳಿಯನ್ನು ಮಾತ್ರ ಬಿಡಲಾರಳು.ಜಗತ್ತು ಏನೇ ಅನ್ನಲಿ,ಹೀನಾಯವಾಗಿ ನೋಡಲಿ,ಭಿಕ್ಷೆ ಬೇಡಿಯಾದರೂ ಮಕ್ಕಳ ಹೊಟ್ಟೆ ತುಂಬಿಸುತ್ತಾಳೆ.
ತಾಯಿ ಜೀವಕ್ಕೆ ಮಕ್ಕಳ ಹೊಟ್ಟೆ ಬಟ್ಟೆಯದಷ್ಟೇ ಚಿಂಯೆಯಲ್ಲ, ಆಕೆ ತನ್ನ ಮಕ್ಕಳ ಸುಸಂಸ್ಕೃತ
ನಡವಳಿಕೆ,ಸನ್ನಡತೆ, ಉತ್ತಮ ನಡೆನುಡಿಯನ್ನೇ ಬಯಸುವವಳು.ಗಿಡವಾಗಿ ಬಗ್ಗದ್ದು ಮರವಾದಾಗ ಬಗ್ಗೀತೆ ಎಂಬ ಮಾತನ್ನು ಅರಿತ ತಾಯಿ,ಚಿಕ್ಕಂದಿನಲ್ಲೇ ಮಕ್ಕಳಿಗೆ ಸತ್ಯ,ಧರ್ಮದ ನ್ಯಾಯ ನಿಷ್ಠೆಯ ಕುರಿತಾಗಿ
ಬೋಧಿಸುವಳು.ಉತ್ತಮ ಉದಾಹರಣೆ ಕಥೆಗಳನ್ನು ಹೇಳುವಳು.ಹಿರಿಯರ ಬಗ್ಗೆ , ಗುರುಗಳ ಬಗ್ಗೆ ಗೌರವದ ನಡೆನುಡಿ ತಿಳಿಸಿಕೊಡುವಳು.ದೈವದ ಬಗ್ಗೆ ಭಕ್ತಿಭಾವ ಮೂಡುವಂತೆ ,ಪೂಜೆ ಪುನಸ್ಕಾರ ಕಲಿಸುವಳು.ಊಟ,ಉಡುಗೆ,ಸಭ್ಯತೆ
ಎಲ್ಲವನ್ನೂ ಕಲಿಸುವವಳು ತಾಯಿಯೇ.ಮಕ್ಕಳು ಆಕೆಯ ನಡೆ,ನುಡಿಗಳನ್ನು ಅನುಸರಿಸುವವರು.
ತಾಯಿಯ ಅನನ್ಯ ಆಪ್ತತೆಯ ಅರಿತ ಮಕ್ಕಳು ತಮ್ಮ ಕಷ್ಟ, ಮಾನಸಿಕ ಒತ್ತಡ,ಆಂತರ್ಯದ ಹಲವು
ಒಳಗುಟ್ಟುಗಳನ್ನು ತಾಯಿಯ ಹತ್ತಿರವೇ ಬಿಚ್ಚಿಡುವರು. ಏಕೆಂದರೆ ಅವರ ಹಲವು ಸಮಸ್ಯೆಗಳನ್ನು ಸುಲಭವಾಗಿ
ಪರಿಹರಿಸುವ ಪರಣಿತಳು ಅಮ್ಮ ಎಂದು ಅವರು ಬಲ್ಲರು. ಭವಿಷ್ಯದ ಸಲುವಾಗಿ ಜೀವವನ್ನೇ ಪಣಕಿಟ್ಟು
ದುಡಿದು ಮಕ್ಕಳನ್ನು ಸಲಹುವ ತಾಯಿ,ಮಕ್ಕಳಿಗೆ ರೀತಿ ನೀತಿ ,ಸಂಸ್ಕಾರ,ವಿನಯ,ವಿಧೇಯತೆ,ಕಷ್ಟ
ಸಹಿಷ್ಣುತೆ, ತಾಳ್ಮೆ,ಕಷ್ಟ ಕಾಲದಲ್ಲಿ ಧೈರ್ಯ, ಹಲವು ಕ್ಲಿಷ್ಟ ಪರಿಸ್ಥಿತಿಯಲ್ಲಿ ಜಾಣತನ,ಚಾಣಾಕ್ಷತನದಿಂದ
ನಿಭಾಯಿಸುವ ಕಲೆ ಕಲಿಸುವ ಮೊದಲ ಶಿಕ್ಷಕಿಯೇ ತಾಯಿ.
ತಾನು ವಿದ್ಯೆ ಕಲಿಯದಿದ್ದರೂ ಮಕ್ಕಳು ತನ್ನಂತಾಗಬಾರದೆಂದು,ಶತಾಯ ಗತಾಯ ಪರಿಶ್ರಮ ಪಟ್ಟು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವಳು ತಾಯಿ. ಮಕ್ಕಳು ರೋಗಿಷ್ಟರಾಗಿ,ಅಂಗವಿಕಲರಾಗಿ,ಹಾಸಿಗೆ ಹಿಡಿದಾಗ ತಾಯಿಜೀವ ತನ್ನ ಜೀವದ ಹಂಗುತೊರೆದು ಮಕ್ಕಳನ್ನು ಉಳಿಸಿಕೊಳ್ಳುವ ಸಲುವಾಗಿ, ಆರೋಗ್ಯಕ್ಕಾಗಿ ಎಲ್ಲಾ ಪ್ರಯತ್ನ ಮಾಡುವಳು.ತಾನು ಅರೆ ಹೊಟ್ಟೆ,ಉಪವಾಸವಿದ್ದರೂ ಮಕ್ಕಳನ್ನು ಪೋಷಿಸುವ ಸಲುವಾಗಿ ಹೆಣಗುವಳು.
ಮಾತೃ ಹೃದಯದ ವೈಶಾಲ್ಯತೆ ಎಷ್ಟೆಂದು ಹೇಳುವುದು. ಮಕ್ಕಳು ತನ್ನನ್ನು ತೊರೆದು ದೂರಾದರೂ,ಅವರು ಎಲ್ಲಿದ್ದರೂ ಸುಖವಾಗಿರಲಿ,ತನ್ನಿಂದ ಅವರಿಗೆ ಯಾವ ಕಷ್ಟವೂ ಬಾರದಿರಲಿ ಎಂದೇ ಹಾರೈಸುವಳು. ಶೈಶವಾವಸ್ಥೆಯಿಂದ ಮಕ್ಕಳನ್ನು ಕಣ್ಗಾಲಿವಲಿನಲ್ಲಿ ಕಾಯ್ದು,ಪ್ರಬುದ್ಧರಾದ ಅವರಿಗೆ ಸನ್ಮಾರ್ಗದಲ್ಲಿ ನಡೆಯುವಂತೆ ಮಾರ್ಗದರ್ಶನ ನೀಡುವ ತಾಯಿ, ಮಕ್ಕಳು ತಮ್ಮ ಕಾಲಮೇಲೆ ನಿಂತು ಜೀವನ ಸಾಗಿಸುವಂತಾದರೂ ಅವರ ಆಯುರಾರೋಗ್ಯಕ್ಕೆ ಕ್ಷೇಮಕ್ಕೆ ದೇವರ ಮೊರೆ ಹೋಗುವಳು. ಇಂತಹ ತಾಯಿಯನ್ನು ವೃದ್ಧಾಪ್ಯದ ಕಾಲದಲ್ಲಿ ಮಕ್ಕಳು
ಚೆನ್ನಾಗಿ ನೋಡಿಕೊಳ್ಳಬೇಕಾದುದು ಅವರ ಕರ್ತವ್ಯ. ತಾಯಿದೇವರ ಸೇವೆ ಎಲ್ಲದಕ್ಕಿಂತ ಹೆಚ್ಚಿನದು.ಆಕೆಯ ತ್ಯಾಗ,ವಾತ್ಸಲ್ಯದಿಂದಲೇ ಮಕ್ಕಳ ಜೀವನ ಯಶಸ್ಸು ಕಾಣುವುದು.ಇದನ್ನರಿತು ಮಾತೆಯ ಮನಸಿಗೆ
ಘಾಸಿಯಾಗದಂತೆ ನಡೆದುಕೊಂಡಾಗ ಆತ್ಮತೃಪ್ತಿ ದೊರೆಯುವುದು.ತಾಯಿಯ ಋಣವನ್ನು ಎಷ್ಟು
ಜನ್ಮವೆತ್ತಿದರೂ ತೀರಿಸಲಾಗದು.ನಮ್ಮ ಕಣ್ಣೆದುರು ಅಮ್ಮ ಎಂಬ ಅಮೂಲ್ಯ ಜೀವವಿರುವರೆಗೂ
ಆಕೆಯ ಮನಸ್ಸು ನೋಯದಿರುವಂತೆ ನೋಡಿಕೊಂಡರೆ ಅಷ್ಟೇ ಧನ್ಯತಾಭಾವಮೂಡಿ ಮನಸಿಗೆ ನೆಮ್ಮದಿ ನೀಡುವುದು. “ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಎಂಬ ಸಂಸ್ಕೃತ ಉಕ್ತಿ ಇದೆ.ಅಂದರೆ ತಾಯಿ ಮತ್ತು
ಮಾತೃಭೂಮಿಯು ಸ್ವರ್ಗಕ್ಕಿಂತಲೂ ಶ್ರೇಷ್ಠ ವಾದುದು ಎಂದು.ತಾಯಿ ಜೀವದ ಔನತ್ಯ,ಹಿರಿಮೆ ಈ ಸುಂದರ ವಾಕ್ಯದಲ್ಲೇ ಅಡಕವಾಗಿದೆ ಅಲ್ಲವೇ..

ಅಪರ್ಣಾದೇವಿ