ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ಕುಟುಂಬ ಮುಡಾದಲ್ಲಿ ಪಡೆದ 14 ನಿವೇಶನಗಳ ಸಂಬಂಧ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ-ರಿಪೋರ್ಟ್‌ನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಲ್ಲಿ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಕ್ಟೋಬರ್ 8ಕ್ಕೆ ಆದೇಶ ಕಾಯ್ದಿರಿಸಿದೆ.
ಸ್ನೇಹಮಯಿ ಕೃಷ್ಣ ತನಿಖಾಧಿಕಾರಿಯನ್ನು ಬದಲಾಯಿಸಲು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ಮಾಡುತ್ತಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸೆಪ್ಟೆಂಬರ್ 28ರಂದು ನಡೆದ ವಿಚಾರಣೆಯಲ್ಲಿ ಅವರು ಸ್ವತಃ ಖುದ್ದಾಗಿ ವಾದ ಮಂಡಿಸಿದರು. ಈ ಹಂತದಲ್ಲಿ ನ್ಯಾಯಾಲಯ ಅರ್ಜಿಯ ಮೇಲಿನ ಆದೇಶವನ್ನು ಮುಂದೂಡಿದ್ದು, ಅಕ್ಟೋಬರ್ 8ರಂದು ಘೋಷಿಸಲು ಕಾಯ್ದಿರಿಸಿದೆ.
ಇದಕ್ಕೂ ಮೊದಲು ಲೋಕಾಯುಕ್ತ ಸಲ್ಲಿಸಿದ್ದ ಬಿ-ರಿಪೋರ್ಟ್ ಪ್ರಶ್ನಿಸಿ ಇಡಿ ತಕರಾರು ಅರ್ಜಿ ದಾಖಲಿಸಿತ್ತು. ಈ ಪ್ರಕರಣದಲ್ಲಿ ಮಾಜಿ ಆಯುಕ್ತ ದಿನೇಶ್ ಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಬಂಧಿಸಿದ್ದರು.ಇದನ್ನು ಓದಿ – ಶಿರೀಶ್ ಚಂದ್ರ ಮುರ್ಮು RBI ಉಪಗವರ್ನರ್ ಆಗಿ ನೇಮಕ
ದಿನೇಶ್ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅವುಗಳ ಆಧಾರದ ಮೇಲೆ ಸೈಟ್‌ಗಳನ್ನು ಮರುಹಂಚಿಕೆ ಮಾಡಿ ಲಾಭ ಗಳಿಸಿದ್ದರು. ಹಣ ಪಡೆದು ಆಸ್ತಿಗಳಿಕೆ ಮಾಡಿರುವುದು ದಾಖಲೆಗಳ ಮೂಲಕ ಪತ್ತೆಯಾಗಿತ್ತು ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.








