ಬೆಂಗಳೂರು: ಮುಡಾ ಸೈಟು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಅವರಿಗೆ ಕರ್ನಾಟಕ ಹೈಕೋರ್ಟ್ ತುರ್ತು ನೋಟಿಸ್ ಜಾರಿಗೊಳಿಸಿದೆ.
ಮುಡಾ ಹಗರಣ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಸಲ್ಲಿಸಿದ್ದ ‘ಬಿ ರಿಪೋರ್ಟ್’ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಒಪ್ಪಿಕೊಂಡು ಅಂಗೀಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿಯನ್ನು ಪರಿಗಣಿಸಿದ ಹೈಕೋರ್ಟ್ ಪ್ರತಿವಾದಿಗಳಿಗೆ ತುರ್ತು ನೋಟಿಸ್ ನೀಡಿದೆ.
ಈ ಪ್ರಕರಣದಲ್ಲಿ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಲೋಕಾಯುಕ್ತ ಪೊಲೀಸರು, ಜಾರಿ ನಿರ್ದೇಶನಾಲಯ ಸೇರಿದಂತೆ ಇತರ ಆರೋಪಿಗಳಾದ ಮಲ್ಲಿಕಾರ್ಜುನ ಸ್ವಾಮಿ ಮತ್ತು ದೇವರಾಜು ಅವರಿಗೆ ಕೂಡ ನೋಟಿಸ್ ಜಾರಿಗೊಳಿಸಲಾಗಿದೆ.ಇದನ್ನು ಓದಿ –ರಾಜ್ಯದಲ್ಲಿ ಏ.1ರವರೆಗೆ ಆಲಿಕಲ್ಲು ಮಳೆ: ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
ಇದಕ್ಕೂ ಮುನ್ನ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಲೋಕಾಯುಕ್ತ ಸಲ್ಲಿಸಿದ್ದ ‘ಬಿ ರಿಪೋರ್ಟ್’ ಅನ್ನು ಒಪ್ಪಿಕೊಂಡು ಸಿದ್ದರಾಮಯ್ಯ (A1), ಪಾರ್ವತಿ (A2), ಮಲ್ಲಿಕಾರ್ಜುನ ಸ್ವಾಮಿ (A3) ಹಾಗೂ ದೇವರಾಜು (A4) ಅವರನ್ನು ದೋಷಮುಕ್ತಗೊಳಿಸಿತ್ತು. ಆದರೆ ಉಳಿದ ಆರೋಪಿಗಳ ವಿರುದ್ಧ ತನಿಖೆಯನ್ನು ಮುಂದುವರಿಸಲು ನ್ಯಾಯಾಲಯ ಸೂಚನೆ ನೀಡಿತ್ತು.








