ಮೈಸೂರು: ಬನ್ನಿಮಂಟಪದ ಮಣಿಪಾಲ್ ಆಸ್ಪತ್ರೆ ರಿಂಗ್‌ರೋಡ್ ಜಂಕ್ಷನ್ ಬಳಿ ಗಾಂಜಾ ಸಾಗಿಸುತ್ತಿದ್ದ ಪ್ರಕರಣದಲ್ಲಿ ಎನ್.ಆರ್. ಠಾಣೆ ಪೊಲೀಸರು ಖ್ಯಾತ ಅಪರಾಧಿ ಶ್ರೀನಿವಾಸ್ ಅಲಿಯಾಸ್ ಗಾಂಜಾ ಶೀನಾ (54) ಅವರನ್ನು ಬಂಧಿಸಿದ್ದಾರೆ. ಈ ವೇಳೆ 14 ಕೆ.ಜಿ 150 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಭಾನುವಾರ ಮುಂಜಾನೆ 3.45ಕ್ಕೆ ಖಚಿತ ಮಾಹಿತಿ ಆಧರಿಸಿ, ಬೆಂಗಳೂರಿನಿಂದ ಮೈಸೂರಿಗೆ ಖಾಸಗಿ ವಾಹನದಲ್ಲಿ ಸಾಗಣೆ ಮಾಡುತ್ತಿದ್ದಾಗ ಆರೋಪಿಯನ್ನು ಹಿಡಿಯಲಾಯಿತು. ವಶವಾದ ಗಾಂಜಾದ ಮಾರುಕಟ್ಟೆ ಬೆಲೆ ಸುಮಾರು ₹4.5 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪುಷ್ಪಪುರ ಗ್ರಾಮದವನು. 2011ರಿಂದ ಇಲ್ಲಿಯವರೆಗೆ ಬೆಂಗಳೂರಿನಲ್ಲಿ 4, ಮೈಸೂರಿನಲ್ಲಿ 6, ಚಾಮರಾಜನಗರದ ಬೇಗೂರು ಹಾಗೂ ಆಂಧ್ರಪ್ರದೇಶದ ವಿಶಾಖಪಟ್ಟಣದ ಮದಗಲ್ಲು ಪೊಲೀಸ್ ಠಾಣೆಯಲ್ಲಿ ತಲಾ 1 ಸೇರಿದಂತೆ ಒಟ್ಟು 12 ಪ್ರಕರಣ ದಾಖಲಾಗಿವೆ. ಇದಲ್ಲದೆ, 8 ಪ್ರಕರಣಗಳಲ್ಲಿ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿತ್ತು.
ಒಡಿಶಾದಲ್ಲಿ ಅಡಗಿ ಬದುಕುತ್ತಿದ್ದ ಈತನ ವಿರುದ್ಧ ಹಲವು ಬಾರಿ ಶೋಧ ಕಾರ್ಯಾಚರಣೆ ನಡೆದಿತ್ತು. ಆರೋಪಿಯ ಪುತ್ರರಾದ ಸುರೇಶ್ ಮತ್ತು ನಂದೀಶ ವಿರುದ್ಧವೂ 4 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀನಿವಾಸ್ ಪತ್ತೆಗೆ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು. ಕಳೆದ 45 ದಿನಗಳಿಂದ ಒಡಿಶಾ, ಆಂಧ್ರಪ್ರದೇಶ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಕೊನೆಗೂ ಬಂಧನ ಮಾಡಲಾಗಿದೆ.
ಕಾರ್ಯಾಚರಣೆಯಲ್ಲಿ ಸಿಸಿಬಿ ಎಸಿಪಿ ಮೊಹಮ್ಮದ್ ಷರೀಫ್ ರಾವುತರ್ ಅವರ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಶಬ್ಬೀರ್ ಹುಸೇನ್, ಪಿಎಸ್‌ಐ ಲೇಪಾಕ್ಷ ಹಾಗೂ ಸಿಬ್ಬಂದಿ ರಾಮಸ್ವಾಮಿ, ಮಧುಕುಮಾರ್, ಪ್ರಕಾಶ್ ರಾಥೋಡ್ ಪಾಲ್ಗೊಂಡಿದ್ದರು.ಇದನ್ನು ಓದಿ –9 ವರ್ಷದ ಬಾಲಕಿ ಮೇಲೆ ಲೈಂಗಿಕ ಕಿರುಕುಳ: ವೃದ್ಧ ಅರೆಸ್ಟ್
“ಮಾದಕ ವಸ್ತು ಪತ್ತೆ ಕಾರ್ಯಾಚರಣೆ ಮುಂದುವರಿಯಲಿದೆ. ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸ್ಪಷ್ಟಪಡಿಸಿದ್ದಾರೆ.