ಮೈಸೂರು:ಕುಡಿತಕ್ಕೆ ಹಣ ನೀಡದ ಪತ್ನಿಯನ್ನು ಪತಿ ಕ್ರೂರಿಯಾಗಿ ಹತ್ಯೆ ಮಾಡಿದ ಘಟನೆ ಮೈಸೂರಿನ ಮಹದೇಶ್ವರ ಬಡಾವಣೆಯಲ್ಲಿ ಬೆಳಕಿಗೆ ಬಂದಿದೆ.
ಹತ್ಯೆಗೆ ಬಲಿಯಾದವರು ಗಾಯತ್ರಿ. ಆರೋಪಿ ಪತಿ ಪಾಪಣ್ಣ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದವನಾಗಿದ್ದು, ಅಪಾರ ಸಾಲದ ಒತ್ತಡ ಹಾಗೂ ಕುಡಿತದ ದುಷ್ಚಟದಿಂದ ಬಳಲುತ್ತಿದ್ದ. ಪಾಪಣ್ಣನು ಪತ್ನಿ ಮತ್ತು ಮಕ್ಕಳಿಗೆ ಹಣಕ್ಕಾಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಜಮೀನು ಮಾರಾಟ ಮಾಡಿ ಹಣ ನೀಡುವಂತೆ ಪತ್ನಿಯ ಮೇಲೆ ಒತ್ತಡ ಹೇರಿದ್ದನು.
ಮನೆಯಲ್ಲಿದ್ದವರು ಹೊರಗೆ ಹೋದ ಸಂದರ್ಭದಲ್ಲಿ, ಪಾಪಣ್ಣ ಮಚ್ಚಿನಿಂದ ಪತ್ನಿ ಗಾಯತ್ರಿಯ ಮೇಲೆ ದಾಳಿ ನಡೆಸಿ ಕೊಲೆಮಾಡಿ ಪರಾರಿಯಾಗಲು ಪ್ರಯತ್ನಿಸಿದ.
ಆದರೆ, ಈ ಘಟನೆಯ ವೇಳೆ ಮಗನ ಕೈಗೆ ಸಿಕ್ಕಿಬಿದ್ದಿದ್ದಾನೆ. ನಂತರ ಮಗ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿ ಪಾಪಣ್ಣನನ್ನು ಬಂಧಿಸಿದ್ದಾರೆ.