ಮೈಸೂರು: ಮೈಸೂರಿನೊಳಗೆ ಎರಡು ಫ್ಲೈಓವರ್‌ಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಕೈಗೊಂಡಿರುವ ಯೋಜನೆಗೆ ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, “ಜೆಎಲ್‌ಬಿ ಮತ್ತು ವಿನೋಬಾ ರಸ್ತೆಗಳು ಮೈಸೂರಿನ ಪಾರಂಪರಿಕತೆ ಮತ್ತು ಇತಿಹಾಸವನ್ನು ಪ್ರತಿನಿಧಿಸುತ್ತವೆ. ಇಂತಹ ಪಾರಂಪರಿಕ ಮಾರ್ಗಗಳಲ್ಲಿ ಫ್ಲೈಓವರ್ ನಿರ್ಮಾಣ ಮಾಡುವುದು ನಗರ ಸೌಂದರ್ಯ ಹಾಳುಮಾಡುತ್ತದೆ,” ಎಂದು ಹೇಳಿದ್ದಾರೆ.
“ಜನಾಭಿಪ್ರಾಯ ಪಡೆಯದೆ ಈ ಯೋಜನೆಯನ್ನು ಮುಂದುವರಿಸುತ್ತಿದ್ದಾರೆ. ಈಗಾಗಲೇ ಡಿಪಿಆರ್ ತಯಾರಿಯಲ್ಲಿದೆ. ಇದಕ್ಕೆ ನಾವು ತೀವ್ರವಾಗಿ ವಿರೋಧಿಸುತ್ತೇವೆ. ವಿನೋಬಾ ರಸ್ತೆಯಲ್ಲಿ ಫ್ಲೈಓವರ್ ನಿರ್ಮಿಸಿದರೆ ಅನೇಕ ಮರಗಳ ಕಡಿತವಾಗಲಿದೆ. ಅಭಿವೃದ್ಧಿ ಹೆಸರಿನಲ್ಲಿ ಮೈಸೂರಿನ ಹಸಿರು ಸೌಂದರ್ಯವನ್ನು ನಾಶಮಾಡಬಾರದು,” ಎಂದಿದ್ದಾರೆ.
ಸಂಸದ ಯದುವೀರ ಒಡೆಯರ್ ಸಿಎಂ ಅವರ ಸಲಹೆಯನ್ನು ಉಲ್ಲೇಖಿಸಿ, “ಮುಖ್ಯಮಂತ್ರಿಯವರು ಗ್ರೇಟರ್ ಮೈಸೂರು ಸಭೆಯಲ್ಲಿ ಪಾರಂಪರಿಕ ನಗರಿಯ ಸ್ವರೂಪ ಉಳಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಅದೇ ಮಾರ್ಗದಲ್ಲಿ ಅಧಿಕಾರಿಗಳು ನಡೆದುಕೊಳ್ಳಬೇಕು,” ಎಂದು ಮನವಿ ಮಾಡಿದ್ದಾರೆ.
“ಫ್ಲೈಓವರ್ ನಿರ್ಮಾಣವೇ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ. ನಮಗೆ ಮೆಟ್ರೋ ನಿರ್ಮಾಣದ ವಿರುದ್ಧವಿಲ್ಲ, ಆದರೆ ಅದು ಮುಂಬೈ ಮಾದರಿಯ ಅಂಡರ್‌ಗ್ರೌಂಡ್ ಆಗಿರಬೇಕು. ಮೈಸೂರಿನ ಜನಸಂಖ್ಯೆ ಮತ್ತು ಮೂಲಸೌಕರ್ಯಕ್ಕೆ ಅನುಗುಣವಾಗಿ ಕಾಮಗಾರಿ ಕೈಗೊಳ್ಳಬೇಕು,” ಎಂದು ಹೇಳಿದರು.
“ಜನರ ವಿರೋಧವನ್ನು ನಿರ್ಲಕ್ಷಿಸಿ ಸರ್ಕಾರ ಈ ಯೋಜನೆಯನ್ನು ಮುಂದುವರೆಸಿದರೆ, ನಾವು ಕಾನೂನಾತ್ಮಕ ಹೋರಾಟ ಕೈಗೊಳ್ಳುತ್ತೇವೆ ಮತ್ತು ಜನರ ಬೆಂಬಲದೊಂದಿಗೆ ಹೋರಾಟ ನಡೆಸುತ್ತೇವೆ,” ಎಂದಿದ್ದಾರೆ.
ಅವರು ಕೊನೆಯಲ್ಲಿ “ಗ್ರೇಟರ್ ಮೈಸೂರಿನ ಯೋಜನೆ ಒಳಿತು ತರಬಲ್ಲದು, ಆದರೆ ಅದಕ್ಕೆ ಸೂಕ್ತ ಪೂರ್ವ ತಯಾರಿ ಅಗತ್ಯ. ಬೆಂಗಳೂರು ಮಾದರಿಯಲ್ಲಿ ಅವೈಜ್ಞಾನಿಕ ಕಾಮಗಾರಿ ಮಾಡಬಾರದು. ಮೈಸೂರಿನ ವೈಶಿಷ್ಟ್ಯವನ್ನು ಕಾಪಾಡುವ ರೀತಿಯಲ್ಲಿ ಅಭಿವೃದ್ಧಿ ಆಗಲಿ,” ಎಂದು ಒತ್ತಾಯಿಸಿದರು.








