ಮೈಸೂರು: ಸಾಂಸ್ಕೃತಿಕ ನಗರಿಯ ಶಾಂತಿನಗರದಲ್ಲಿ ಯುವಕನ ಭೀಕರ ಹತ್ಯೆ ನಡೆದಿದೆ. ಬೆಳಗಿನ ಜಾವ ಟೀ ಕುಡಿಯಲು ಹೊರಟಿದ್ದ 19 ವರ್ಷದ ಸಯ್ಯದ್ ಸೂಫಿಯಾನ್ ಮೇಲೆ ಕೆಲ ಯುವಕರು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿದ್ದಾರೆ. ಈ ಘಟನೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವಾಗಿ ದಾಖಲಾಗಿದೆ.
ಬೆಳಿಗ್ಗೆ ಸುಮಾರು 5:40ಕ್ಕೆ ಸ್ನೇಹಿತನೊಂದಿಗೆ ಟೀ ಅಂಗಡಿಗೆ ತೆರಳಿದ್ದ ಸೂಫಿಯಾನ್ ಮೇಲೆ ಯುವಕರು ಏಕಾಏಕಿ ಹಲ್ಲೆ ನಡೆಸಿದ್ದಾರೆ. ರಸ್ತೆ ಮಧ್ಯೆಯೇ ಅಟ್ಟಾಡಿಸಿ ಹಿಂಸಾಚಾರ ನಡೆಸಿ ಚಾಕುವಿನಿಂದ ಎದೆ ಮತ್ತು ಬೆನ್ನಿನ ಮೇಲೆ ಅನೇಕ ಬಾರಿ ಇರಿದಿದ್ದಾರೆ. ಬದುಕಿಗಾಗಿ ನರಳುತ್ತಿದ್ದರೂ, ಹತ್ತಿರದಲ್ಲಿದ್ದವರು ಸಹಾಯಕ್ಕೆ ಮುಂದಾಗದ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದೆ.
ಘಟನೆ ಕುರಿತು ಮೃತನ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಗಾಂಜಾ ಮತ್ತು ನಶೆ ಪದಾರ್ಥಗಳಿಗೆ ಅಡಿಕ್ಟ್ ಆಗಿದ್ದ ಯುವಕರೇ ತಮ್ಮ ಮಗನನ್ನು ಹತ್ಯೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ. ಶಾಂತಿನಗರದಲ್ಲಿ ಡ್ರಗ್ಸ್ ಬಳಕೆ ಹೆಚ್ಚುತ್ತಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ. “ಸಣ್ಣ ಮಕ್ಕಳೂ ಗಾಂಜಾ, ಟ್ಯಾಬ್ಲೆಟ್, ಸೆಲ್ಯೂಷನ್ ಸೇವನೆ ಮಾಡುತ್ತಿದ್ದಾರೆ. ಪ್ರತಿದಿನ ಯುವಕರು ನಶೆಯಲ್ಲೇ ತಿರುಗಾಡುತ್ತಾರೆ,” ಎಂದು ಕುಟುಂಬಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.
ಬೆಳಗಿನ ನಮಾಜ್ ಮುಗಿಸಿ ಮನೆಗೆ ವಾಪಸಾಗುತ್ತಿದ್ದಾಗ ಟೀ ಕುಡಿಯಲು ನಿಂತ ಸೂಫಿಯಾನ್, ತಾನೇ ಪರಿಚಯದವರಿಂದಲೇ ದಾಳಿಗೆ ಗುರಿಯಾದರು ಎಂದು ತಾಯಿ ಶಾಯಿನ್ ತಾಜ್ ಕಣ್ಣೀರಿನಿಂದ ಹೇಳಿದ್ದಾರೆ. “ನನ್ನ ಮಗನ ಕೊಲೆಗೆ ನ್ಯಾಯ ಕೊಡಿಸಿ. ಇಲ್ಲವಾದರೆ ನಮ್ಮನ್ನೂ ಕೊಲ್ಲಿರಿ,” ಎಂದು ಅವರು ಆಕ್ರಂದಿಸಿದ್ದಾರೆ.
ಕಾವೇರಿ ಸಿಲ್ಕ್ ಸ್ಯಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸೂಫಿಯಾನ್ ಸಾವಿನಿಂದ ಕುಟುಂಬ ದುಃಖದಲ್ಲಿ ಮುಳುಗಿದೆ. ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದು, ಆರೋಪಿ ಯುವಕರ ಪತ್ತೆಗಾಗಿ ಶೋಧ ತೀವ್ರಗೊಂಡಿದೆ.








