ಶ್ರಾವಣ ಮಾಸ ಎಂದರೆ ಹಬ್ಬಗಳ ಸಾಲು ಸಾಲು. ಇದರಲ್ಲಿ ಮೊದಲು ಬರುವುದು ಪಂಚಮಿ. ನಾಗರ ಅಮಾವಾಸ್ಯೆಯ ನಂತರ ಬರುವ ನಾಲ್ಕನೇ ದಿನವನ್ನು ನಾಗರ ಚೌತಿ ಎಂದೂ, ಐದನೆಯ ದಿನವನ್ನು ನಾಗರ ಪಂಚಮಿ ಎಂದು ಕರೆಸಿಕೊಳ್ಳುವ ಈ ಹಬ್ಬವನ್ನು ಜನಪದರು ಜೋಕಾಲಿ ಹಬ್ಬ ಎಂದು ಕೂಡ ಕರೆಯುತ್ತಾರೆ.
ನಮ್ಮ ಜನಪದರ ಬದುಕಿನಲ್ಲಿ ಹೊಲ ಗದ್ದೆ ಪೈರುಗಳು ಪಶು ಪಕ್ಷಿ ಪ್ರಾಣಿಗಳು ಎಲ್ಲವೂ ಪ್ರಕೃತಿಯ ಕೊಡುಗೆಯೇ. ಹೊಲ ಗದ್ದೆಯಲ್ಲಿ ತಾನು ಸಾಕಿದ ಪಶು ಪಕ್ಷಿಗಳೊಂದಿಗೆ ದುಡಿಯುತ್ತಾ ಅವುಗಳಿಗೆ ಮತ್ತು ತನಗೆ ಬೇಕಾದ ಆಹಾರವನ್ನು ಸಂಪಾದಿಸುವ ರೈತನ ಒಡನಾಡಿಗಳೇ ಎತ್ತುಗಳು. ತನ್ನ ರೈತಾಪಿ ಬದುಕಿನ ಎಲ್ಲಾ ಹೊಲದ ಕೆಲಸಗಳಿಗೆ ಆತನಿಗೆ ಎತ್ತುಗಳು ಬೇಕೇ ಬೇಕು.
,ಹಸುಗಳು, ಕೋಳಿ ಕುರಿ ನಾಯಿ ಮತ್ತು ಬೆಕ್ಕುಗಳನ್ನು ಕೂಡ ಆತ ಸಾಕುತ್ತಾನೆ. ತನ್ನ ಮನೆಯ ಹಾಲು ಮೊಸರಿಗಾಗಿ ಆತ ಹಸುಗಳನ್ನು ಅವಲಂಬಿಸಿದರೆ, ನಾಯಿ ಆತನ ಜೊತೆ ಹೊಲ ಮತ್ತು ಮನೆಯನ್ನು ಕಾಯಲು ಬೇಕೇ ಬೇಕು. ಕೋಳಿ ಕುರಿಗಳು ಕೂಡ ಆತನ ಹೊಲದ ಆದಾಯದ ಜೊತೆ ಜೊತೆಗೆ ಹೆಚ್ಚುವರಿ ಆದಾಯವನ್ನು ಕಲ್ಪಿಸಿ ಕೊಡುತ್ತವೆ. ಇದರ ಜೊತೆಗೆ ದನ ಕರು, ಹಸುಗಳ ಸಗಣಿ,ಕೋಳಿ, ಕುರಿಗಳು ಹಾಕುವ ಹಿಕ್ಕೆಗಳಿಂದ ಉತ್ಕೃಷ್ಟವಾದ ಗೊಬ್ಬರ ತಯಾರಾಗುತ್ತದೆ. ಈ ಗೊಬ್ಬರವನ್ನು ತನ್ನ ಪೈರುಗಳಿಗೆ ಹಾಕುವ ಮೂಲಕ ಒಳ್ಳೆಯ ಇಳುವರಿಯನ್ನು ರೈತ ಪಡೆಯುತ್ತಾನೆ.
ಇಂತಹ ರೈತನ ಹೊಲದಲ್ಲಿರುವ ಸಣ್ಣಪುಟ್ಟ ಕ್ರಿಮಿ ಕೀಟಗಳನ್ನು ತಿನ್ನಲು ಬರುವ ನವಿಲು ಮತ್ತಿತರ ಪಶು ಪಕ್ಷಿಗಳನ್ನು ತಿನ್ನುವ ಹಾವುಗಳು ಆತನ ಹೊಲವನ್ನು ಅಗೋಚರವಾಗಿ ರಕ್ಷಿಸುತ್ತವೆ ಎಂದರೆ ತಪ್ಪಿಲ್ಲ. ಹಾವುಗಳು ಇರುವ ಜಾಗದಲ್ಲಿ ಯಾರೂ ಹಾಯಲಾರರು ಎಂಬ ನಂಬಿಕೆ ಇಂದಿಗೂ ನಮ್ಮ ಗ್ರಾಮೀಣರಲ್ಲಿ ಇದೆ. ತನ್ನ ಹೊಲವನ್ನು ಅಗೋಚರವಾಗಿ ಕಾಯುವ ಹಾವಿಗೆ ಕೃತಜ್ಞತೆಯ ರೂಪದಲ್ಲಿ ನಾಗರ ಹಾವಿನ ಕಲ್ಲನ್ನು ತನ್ನ ಹೊಲದಲ್ಲಿರುವ ಬನ್ನಿಯ ಗಿಡದ ಕೆಳಗೆ ಸ್ಥಾಪಿಸುವ ರೈತ ಪ್ರತಿ ವರ್ಷ ನಾಗರ ಅಮಾವಾಸ್ಯೆಯ ನಾಲ್ಕನೆಯ ದಿನ ಚೌತಿಯಂದು ಪೂಜಿಸುವ ಮೂಲಕ ಕೃತಜ್ಞತೆಯನ್ನು ಅರ್ಪಿಸುತ್ತಾನೆ.
ಜೋಡಿ ನಾಗರಹಾವುಗಳನ್ನು ಕೆತ್ತಲ್ಪಟ್ಟಿರುವ ನಾಗರಕಲ್ಲನ್ನು ಚೆನ್ನಾಗಿ ತೊಳೆದು ಅದಕ್ಕೆ ಗಂಧ ವಿಭೂತಿ ಹಚ್ಚಿ ಹೂವು ಕೇದಿಗೆ, ಮತ್ತು ಗೋಧಿಯ ಸಸಿ ಗಳನ್ನು ಏರಿಸಿ, ನೂಲಿನಿಂದ ತಯಾರಿಸಿದ ಐದೆಳೆಯ ಹಂಗನೂಲನ್ನು ಹಾಕಿ ಊದಿನ ಕಡ್ಡಿ ಬೆಳಗ್ಗೆ ಗಂಟೆಯನ್ನು ಬಾರಿಸಿ ಪೂಜಿಸುತ್ತಾರೆ. ನಂತರ ಒಣ ಕೊಬ್ಬರಿ ಬಟ್ಟಲಿನಲ್ಲಿ ಒಂದಷ್ಟು ಬೆಲ್ಲವನ್ನು ಅಂಟಿಸಿ ಅದರಲ್ಲಿ ಆಗ ತಾನೇ ನೈವೇದ್ಯಕ್ಕೆ ಒಡೆದ ತೆಂಗಿನ ಕಾಯಿಯ ನೀರನ್ನು ಹಾಕಿ ನಾಗಪ್ಪನ ಮೂರ್ತಿಯ ತಲೆಯ ಮೇಲೆ ಅಮ್ಮನ ಪಾಲು ಅಪ್ಪನ ಪಾಲು ಅಜ್ಜನ ಪಾಲು ಅಜ್ಜಿಯ ಪಾಲು ಅಣ್ಣ ತಮ್ಮಂದಿರ ಅಕ್ಕ-ತಂಗಿಯರ ಪಾಲು ಎಂದು ನಾಗಪ್ಪನಿಗೆ ತನಿ ಎರೆಯುತ್ತಾರೆ. ನಂತರ ಅದೇ ಬಟ್ಟಲಿಗೆ ತುಸು ನೀರನ್ನು ಬೆರೆಸಿದ ಹಾಲನ್ನು ಹಾಗೆ ಮತ್ತೊಮ್ಮೆ ಎಲ್ಲರ ಪಾಲಿನ ಹಾಲನ್ನು ನಾಗಪ್ಪನಿಗೆ ಎರೆಯುತ್ತಾರೆ.
ಮುಂಜಾನೆ ಮಡಿಯಲ್ಲಿ ತಯಾರಿಸಿದ ನಾಗನಿಗೆ ಇಷ್ಟವಾದ ಅರಳಿಟ್ಟು, ಕಡಲೆಕಾಳು, ಜೋಳದ ಅರಳು, ವಿವಿಧ ಬಗೆಯ ಚಿಗಳಿ ( ಹುರಿದ ಎಳ್ಳು, ಹುರಿದ ನೆಲಕಡಲೆ ಮತ್ತು ಕೊಬ್ಬರಿ ತುರಿಗಳಿಗೆ ಪ್ರತ್ಯೇಕವಾಗಿ ಬೆಲ್ಲವನ್ನು ತಲುಪಿ ನುಣ್ಣಗೆ ಕುಟ್ಟಿ ಪುಡಿ ಮಾಡಿ ಅದಕ್ಕೆ ಏಲಕ್ಕಿ ಮತ್ತು ಲವಂಗದ ಪುಡಿಯನ್ನು ಹಾಕಿ ಕಲಸಿ ಉಂಡೆ ಕಟ್ಟಿದ ಚಿಗಳಿ) ಗಳನ್ನು, ಅದಕ್ಕೆ ಅವಲಕ್ಕಿ ಇಲ್ಲವೇ ಮಂಡಾಳಿನ ಒಗ್ಗರಣೆ ಹೀಗೆ ಹತ್ತು ಹಲವು ವಿಧದ ನೈವೇದ್ಯಗಳನ್ನು ಮಾಡಿ ತಂದಿರುತ್ತಾರೆ. ಅವುಗಳನ್ನೆಲ್ಲ ನೈವೇದ್ಯ ಮಾಡಿ ಭಕ್ತಿಯಿಂದ ಪೂಜಿಸಿ ನಮಿಸುತ್ತಾರೆ.
ನಂತರ ನಾಗಪ್ಪನಿಗೆ ಹಾಕಿದ ಹಂಗನೂಲನ್ನು ಮನೆಯ ಪ್ರತಿಯೊಬ್ಬರೂ ಕೊರಳಿಗೆ ಹಾಕಿಕೊಳ್ಳುತ್ತಾರೆ ಇಲ್ಲವೆ ಕೈಗೆ ಕಟ್ಟಿಕೊಳ್ಳುತ್ತಾರೆ.
ನಂತರ ಮನೆಗೆ ಬಂದು ನೈವೇದ್ಯವನ್ನು ಪ್ರಸಾದದ ರೂಪದಲ್ಲಿ ಎಲ್ಲರಿಗೂ ಹಂಚಿ ತಿನ್ನುತ್ತಾರೆ. ಮನೆಯಲ್ಲಿರುವ ಹೆಣ್ಣು ಮಕ್ಕಳು ಮಧ್ಯಾಹ್ನದ ಅಡುಗೆಗೆ ತಯಾರಿ ಮಾಡಿಕೊಂಡರೆ ಗಂಡು ಮಕ್ಕಳು ಆವರಣದಲ್ಲಿ ಕಟ್ಟಿರುವ ಜೋಕಾಲಿಯನ್ನು ಆಡಲು ಹೋಗುತ್ತಾರೆ.
ಬೃಹದಾಕಾರದ ಮರಗಳಿಗೆ ದೊಡ್ಡ ದೊಡ್ಡ ಹಗ್ಗದ ಜೋಕಾಲಿಗಳನ್ನು ಕಟ್ಟಿದ್ದು ಅಲ್ಲಿಯೂ ಕೂಡ ತಮ್ಮ ಧೈರ್ಯ ಸಾಹಸಗಳನ್ನು ತೋರಿಸುವಂತಹ ಸ್ಪರ್ಧೆಗಳನ್ನು ಏರ್ಪಡಿಸಿರುತ್ತಾರೆ ಎತ್ತರವಾದ ಮರದ ಮೇಲೆ ಕಟ್ಟಿರುವ ಕೊಬ್ಬರಿ ಮತ್ತು ಬೆಲ್ಲದ ಬಟ್ಟಲನ್ನು ಜೋಕಾಲಿಯಲ್ಲಿ ಜೀಕುತ್ತಲೇ ಹೋಗಿ ಬಾಯಲ್ಲಿ ಕಚ್ಚಿ ಹಿಡಿದು ತರಬೇಕು ಎಂಬುದು ಒಂದು ಪಣ ಇಂತಹ ಪಣವನ್ನು ಸ್ವೀಕರಿಸಿ ಜೋರಾಗಿ ಜೀಕುತ್ತಲೇ ಹೋಗಿ ಬಾಯಲ್ಲಿ ಕೊಬ್ಬರಿಯ ಗಿಟುಕನ್ನು ಕಚ್ಚಿಕೊಂಡು ಬರುವವರು ವಿಜಯಶಾಲಿಗಳೆಂದು ಪರಿಗಣಿಸಲ್ಪಡುತ್ತಾರೆ.
ಮಧ್ಯಾಹ್ನದ ಭೂರಿ ಭೋಜನದ ನಂತರ ಹೆಣ್ಣು ಮಕ್ಕಳು ಕೂಡ ಈ ಆಟದಲ್ಲಿ ಪಾಲ್ಗೊಳ್ಳುತ್ತಾರೆ. ಜೊತೆಯಾಗಿ ಎದುರು ಬದುರಾಗಿ ಜೋಕಾಲಿಗೆ ಸೇರಿಸಿರುವ ಒಂದು ಕೋಲಿನ ಮೇಲೆ ನಿಲ್ಲುವ ಹೆಣ್ಣು ಮಕ್ಕಳು ಜೋರಾಗಿ ಜೀಕುತ್ತಾ ಜೋಕಾಲಿಯ ವೇಗವನ್ನು ಹೆಚ್ಚಿಸಿ ಆನಂದ ಪಡುತ್ತಾರೆ.
ಈ ಜೋಕಾಲಿಯು ನಾವು ಬದುಕಿನಲ್ಲಿ ಯಾವುದೇ ರೀತಿಯ ಏರಿಳಿತಗಳಿಗೆ ಹೆದರದೆ ಬದುಕನ್ನು ಎದುರಿಸಬೇಕು ಎನ್ನುವ ಪಾಠವನ್ನು ಕಲಿಸುತ್ತದೆ. ಅದೆಷ್ಟೇ ಜೇಕಿದರೂ ಮತ್ತೆ ತನ್ನ ಸ್ಥಾನಕ್ಕೆ ಬಂದು ನಿಲ್ಲುವ ಜೋಕಾಲಿ ಮನುಷ್ಯನ ಸ್ಥಿತ ಪ್ರಜ್ಞನಾಗಿರಬೇಕಾದ ಅವಶ್ಯಕತೆಯ ಕುರಿತು ಹೇಳುತ್ತದೆ.
ಜೀವನವು ಒಂದು ತೂಗುಯ್ಯಾಲೆ ಇದ್ದಂತೆ ಅದೆಷ್ಟೇ ಮುಂದೆ ಹಿಂದೆ ತೂಗಿದರು ಮತ್ತೆ ಒಂದು ನಿಲುಗಡೆಗೆ ಬಂದು ನಿಲ್ಲಲೇ ಬೇಕು, ನಿಲ್ಲುತ್ತದೆ ಕೂಡ… ಹಾಗೆಯೇ ನಮ್ಮ ಬದುಕಿನಲ್ಲಿ ಅದೆಷ್ಟೇ ಕಷ್ಟ ಸುಖಗಳು ನೋವು ನಲಿವುಗಳು ನಮಗೆ ಎದುರಾದರೂ ಕೂಡ ಅವಕ್ಕೆಲ್ಲ ಒಂದು ಅಂತ್ಯ ಇದ್ದೇ ಇದೆ ನಿಲುಗಡೆ ಬದುಕಿನಲ್ಲಿಯೂ ಇದೆ ಎಂಬ ಪಾಠವನ್ನು ಜೋಕಾಲಿ ನಮಗೆ ಕಲಿಸುತ್ತದೆ.
ಇನ್ನು ಜಗಳವಾಡಿ ಪರಸ್ಪರ ಮಾತು ಬಿಟ್ಟಿರುವ, ದೂರವಾಗಿರುವ ಸ್ನೇಹಿತರನ್ನು ಒಂದುಗೂಡಿಸುವ ಹಬ್ಬ ಜೋಕಾಲಿ ಹಬ್ಬ. ಪರಸ್ಪರ ಅದೆಷ್ಟೇ ವೈರತ್ವವನ್ನು ಸಾಧಿಸಿರುವ ಇಬ್ಬರೂ ವ್ಯಕ್ತಿಗಳನ್ನು ಜೋಕಾಲಿ ಹಬ್ಬದಲ್ಲಿ ಜೊತೆಗೂಡಿಸುವರು.
ಮದುವೆಯ ನಂತರ ಮೊಟ್ಟ ಮೊದಲ ಬಾರಿಗೆ ತವರಿಗೆ ಬರುವ ಹೆಣ್ಣು ಮಕ್ಕಳಿಗೆ ಜೋಕಾಲಿ ಹಬ್ಬದಲ್ಲಿ ವಿಶೇಷವಾಗಿ ಆದರ ಸತ್ಕಾರಗಳು ತವರಿನ ಬಳಗದಿಂದ. ಲವ್ವ ವಧು ವರರನ್ನು ಗೋಳು ಹೊಯ್ದುಕೊಳ್ಳುತ್ತಲೇ ಅವರಿಗೆ ಪ್ರೀತಿಯ ಉಪಚಾರವನ್ನು ಮಾಡುತ್ತಾರೆ. ಮುತ್ತೈದೆತನದ ವಿಶೇಷ ಕಳೆಯಿಂದ ಒಡಗೂಡಿರುವ ಹೆಣ್ಣು ಮಕ್ಕಳು ತವರಿನ ಉಡಿಯನ್ನು ಪಡೆದು ಸಂಭ್ರಮಿಸುತ್ತಾರೆ. ಜೊತೆಗೆ ಮಂಗಳ ಗೌರಿ ಪೂಜೆಯನ್ನು ಕೂಡ ತವರಿನಲ್ಲಿ ಆರಂಭಿಸುತ್ತಾರೆ.
ಮೊದಲ ದಿನ ಹೊಲದಲ್ಲಿ ಇಲ್ಲವೇ ಹುತ್ತದ ನಾಗಪ್ಪನಿಗೆ ಹಾಲು ಹಾಕುವ ಜನ ಮರುದಿನ ಪಂಚಮಿ ಯಂದು ಮನೆಯಲ್ಲಿಯೇ ಮಣ್ಣಿನಲ್ಲಿ ತಯಾರಿಸಿದ ನಾಗರ ಮೂರ್ತಿಗೆ ಹಾಲನ್ನು ಹಾಕುತ್ತಾರೆ. ಈ ದಿನ ನಾಗಪ್ಪನಿಗೆ ವಿಶೇಷವಾಗಿ ಕುದಿಸಿದ ಕಡುಬಿನ ನೈವೇದ್ಯವನ್ನು ಮಾಡುತ್ತಾರೆ.
ಹಬ್ಬಕ್ಕಾಗಿ ತಯಾರಿಸಿದ ಎಳ್ಳು, ಶೇಂಗಾ, ಡಾಣಿ, ಗುಳಿಗೆಯ ಉಂಡೆಗಳು ಪುಟಾಣಿ ಹಿಟ್ಟಿನ ಸಿಣ್ಣಿ, ಅವಲಕ್ಕಿ ಚಕ್ಕುಲಿ ಕೋಡುಬಳೆ ಮುಂತಾದ ತಿಂಡಿಗಳನ್ನು ಪರಸ್ಪರ ಹಂಚಿ ಸಂತಸ ಪಡುತ್ತಾರೆ. ಮತ್ತೆ ಕೆಲವರು ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಉಡುಗೊರೆಯ ಜೊತೆಗೆ ಮಂಗಳ ದ್ರವ್ಯಗಳನ್ನು ಇಟ್ಟು ಈ ಎಲ್ಲ ಸಿಹಿ ಖಾರದ ಪದಾರ್ಥಗಳನ್ನು ಕೊಟ್ಟು ಕಳುಹಿಸುತ್ತಾರೆ.
ಇನ್ನು ಉತ್ತರ ಕರ್ನಾಟಕದ ಹಲವೆಡೆ ಈಗಾಗಲೇ ತಮ್ಮ ಮಗನಿಗೆ ನಿಶ್ಚಿತವಾಗಿರುವ ವಧುವಿಗೆ ಸೀರೆ ಮತ್ತು ಉಡಿ ಸಾಮಾನುಗಳನ್ನು, ಅರಿಶಿಣ, ಕುಂಕುಮ, ಹೂ, ಹಣ್ಣಿನ ಜೊತೆಗೆ ಕೊಂಡೊಯ್ದು ಬಂಧು-ಬಾಂಧವರನ್ನು ಕೂಡ ಜೊತೆಗೆ ಕರೆದುಕೊಂಡು ಹೋಗಿ ಆಕೆಗೆ ಸೀರೆ ತೊಡಿಸಿ ಉಡಿ ತುಂಬಿ ಈ ಎಲ್ಲಾ ಉಂಡಿಗಳನ್ನು ಮಡಿಲಲ್ಲಿ ತುಂಬುತ್ತಾರೆ. ಇತ್ತ ಹೆಣ್ಣಿನ ಮನೆಯವರು ತಮ್ಮ ಮಗಳಿಗೆ ಉಂಡಿ ತಂದ ಬೀಗರಿಗೆ ಔತಣದ ಅಡುಗೆ ಮಾಡಿಸಿ ಉಣ ಬಡಿಸುತ್ತಾರೆ ಹಾಗೂ ಅವರು ತಂದ ದೊಡ್ಡ ದೊಡ್ಡ ಗಾತ್ರದ ಉಂಡಿಗಳನ್ನು ಸ್ನೇಹಿತರು ಮತ್ತು ಬಂಧು ಬಾಂಧವರ ಮನೆಗೆ ಹಂಚುತ್ತಾರೆ.
ನಮ್ಮ ಭಾರತೀಯ ಜನಪದ ಸಂಪ್ರದಾಯದಲ್ಲಿ ಪ್ರತಿ ಹಬ್ಬವೂ ಸಾಮಾಜಿಕ ಸಾಮರಸ್ಯವನ್ನು ಬಿಂಬಿಸುವ ಪ್ರೀತಿ, ವಿಶ್ವಾಸವನ್ನು ಹೆಚ್ಚಿಸುವ, ಊಟೋಪಚಾರಗಳನ್ನು ಮಾಡುವ ಕೇವಲ ತಾನು ಮಾತ್ರ ಸಂಭ್ರಮಿಸದೆ ತನ್ನ ಸುತ್ತಣ ಸಮಾಜದ ಎಲ್ಲರೊಂದಿಗೆ ಹಂಚಿ ಉಣ್ಣುವ ಮೂಲಕ ಎಲ್ಲರಲ್ಲೂ ಹೊಸ ಹುಮ್ಮಸ್ಸನ್ನು ಹುಟ್ಟು ಹಾಕುತ್ತದೆ. ಪಶು ಪಕ್ಷಿಗಳು ಪ್ರಕೃತಿ ಕೂಡ ಮನುಷ್ಯನಿಗೆ ಈ ನಿಟ್ಟಿನಲ್ಲಿ ತಮ್ಮದೇ ಆದ ಕಾಣಿಕೆಯನ್ನು ನೀಡುತ್ತವೆ ಎಂಬ ಕಾರಣಕ್ಕಾಗಿ ಅವುಗಳನ್ನು ಕೂಡ ಕೃತಜ್ಞತೆಯಿಂದ ನೆನೆಯುವ ನಮ್ಮ ಜನಪದ ಹಬ್ಬಗಳು ಆಧುನಿಕತೆಯ ಭರಾಟೆಯಲ್ಲಿ ತಮ್ಮ ಮೊದಲಿನ ಸಡಗರ ಸಂಭ್ರಮಗಳನ್ನು ಕಳೆದುಕೊಂಡಿದ್ದರೂ ಕೂಡ ನಶಿಸಿ ಹೋಗಿಲ್ಲ ಎಂಬುದು ಸಮಾಧಾನದ ಸಂಗತಿ.
ಹಾಗೆಯೇ ನಮ್ಮ ಈ ಎಲ್ಲಾ ಹಬ್ಬಗಳನ್ನು ಉಳಿಸಿಕೊಂಡು ಮತ್ತೆ ಮುನ್ನೆಲೆಗೆ ತರುವುದು ಇಂದಿನ ಯುವ ಪೀಳಿಗೆಯ ಜವಾಬ್ದಾರಿ.
ಹೌದಲ್ಲವೇ ಸ್ನೇಹಿತರೆ?
ನಾಗರ ಪಂಚಮಿ ಹಬ್ಬದ ಶುಭಾಶಯಗಳು.

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್