- ಶಿಷ್ಟಾಚಾರ ಪಾಲನೆ ಕಡ್ಡಾಯ
ಬೆಂಗಳೂರು: ರಾಜ್ಯ ಸರ್ಕಾರದ ಸಭೆ ಹಾಗೂ ಸಮಾರಂಭಗಳಲ್ಲಿ ಜನಪ್ರತಿನಿಧಿಗಳಿಗೆ ಆಹ್ವಾನ ನೀಡುವ ಕ್ರಮಕ್ಕೆ ಹೊಸ ಮಾರ್ಗಸೂಚಿಗಳನ್ನು ಸರ್ಕಾರ ಪ್ರಕಟಿಸಿದೆ.
2019ರ ಸುತ್ತೋಲೆಯನ್ನು ಪರಿಷ್ಕರಿಸಿ, ಆಡಳಿತ ಸುಧಾರಣೆ ಮತ್ತು ಸಿಬ್ಬಂದಿ ಇಲಾಖೆ ಹೊಸ ನಿಯಮಾವಳಿಗಳನ್ನು ಹೊರಡಿಸಿದೆ. ಇದರ ಉದ್ದೇಶ — ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಕಾಪಾಡುವುದು ಹಾಗೂ ಆಹ್ವಾನ ಪ್ರಕ್ರಿಯೆಯಲ್ಲಿ ಸ್ಪಷ್ಟತೆ ತರಿಸುವುದು.
ಈ ಹೊಸ ಮಾರ್ಗಸೂಚಿಗಳು ರಾಜ್ಯಮಟ್ಟ, ಜಿಲ್ಲಾಮಟ್ಟ ಮತ್ತು ತಾಲೂಕು ಮಟ್ಟದ ಕಾರ್ಯಕ್ರಮಗಳಿಗೆ ಅನ್ವಯವಾಗಲಿವೆ. ಜೊತೆಗೆ, ರಾಜ್ಯದಲ್ಲಿ ಆಯೋಜಿಸಲ್ಪಡುವ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಿಗೂ ಇದೇ ನಿಯಮಗಳು ಅನ್ವಯಿಸಲಿವೆ.
ರಾಜ್ಯಮಟ್ಟದ ಕಾರ್ಯಕ್ರಮಗಳ ಹೊಸ ನಿಯಮಗಳು:
- ಕಾರ್ಯಕ್ರಮದ ಉದ್ಘಾಟನೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಅಥವಾ ಸಂಬಂಧಿತ ಇಲಾಖೆಯ ಸಚಿವರಿಂದ ನಡೆಯಲಿದೆ.
- ಸಿಎಂ ಅಥವಾ ಡಿಸಿಎಂ ಉದ್ಘಾಟನೆ ಮಾಡಿದರೆ, ಸಂಬಂಧಿತ ಇಲಾಖೆಯ ಸಚಿವರು ಅಧ್ಯಕ್ಷತೆ ವಹಿಸಲಿದ್ದಾರೆ.
- ಇಲಾಖೆಯ ಸಚಿವರು ಉದ್ಘಾಟನೆ ಮಾಡಿದರೆ, ಸ್ಥಳೀಯ ಶಾಸಕರು ಅಧ್ಯಕ್ಷತೆ ವಹಿಸಬೇಕು.
- ಇತರೆ ಗಣ್ಯರು ಉದ್ಘಾಟನೆ ಮಾಡಿದರೆ, ಯಾರು ಅಧ್ಯಕ್ಷತೆ ವಹಿಸಬೇಕು ಎಂಬುದನ್ನು ಇಲಾಖಾ ಸಚಿವರು ನಿರ್ಧರಿಸಲಿದ್ದಾರೆ.
- ಆಹ್ವಾನ ಪತ್ರಿಕೆ ಮತ್ತು ವೇದಿಕೆಯ ಮೇಲೆ ಆಸೀನರಾಗುವ ಗಣ್ಯರ ಸಂಖ್ಯೆ 9 ಮೀರಬಾರದು; ಅಗತ್ಯವಿದ್ದಲ್ಲಿ ಗರಿಷ್ಠ 13 ಮಂದಿ ಇರಬಹುದು.
- ಸ್ಥಳೀಯ ಶಾಸಕರ ಹೆಸರು ಕಡ್ಡಾಯವಾಗಿ ಸೇರಿಸಬೇಕು.
- ವಿಧಾನಸೌಧ ಅಥವಾ ವಿಕಾಸಸೌಧದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಸಭಾಪತಿ ಹಾಗೂ ಸಭಾಧ್ಯಕ್ಷರ ಅನುಮತಿ ಪಡೆದು ಅತಿಥಿಗಳನ್ನು ಆಹ್ವಾನಿಸಬೇಕು.
ಜಿಲ್ಲಾ ಮತ್ತು ತಾಲೂಕು ಮಟ್ಟದ ಕಾರ್ಯಕ್ರಮಗಳ ನಿಯಮಗಳು:
- ಸಿಎಂ, ಡಿಸಿಎಂ, ಇಲಾಖಾ ಸಚಿವರು ಅಥವಾ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ ಗಣ್ಯರು ಉದ್ಘಾಟನೆ ಮಾಡಬಹುದು.
- ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟನೆ ಮಾಡಿದರೆ, ಸ್ಥಳೀಯ ಶಾಸಕರು ಅಧ್ಯಕ್ಷತೆ ವಹಿಸಬೇಕು.
- ಇತರ ಗಣ್ಯರು ಉದ್ಘಾಟನೆ ಮಾಡಿದರೆ, ಯಾರು ಅಧ್ಯಕ್ಷತೆ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ನಿರ್ಧಾರ ಮಾಡುತ್ತಾರೆ.
- ಆಹ್ವಾನ ಪತ್ರಿಕೆ ಮತ್ತು ವೇದಿಕೆ ಮೇಲಿನ ಗಣ್ಯರ ಹೆಸರು 9 ಮೀರಬಾರದು; ಅಗತ್ಯವಿದ್ದರೆ ಗರಿಷ್ಠ 13 ಮಂದಿ ಇರಬಹುದು.
- ಸ್ಥಳೀಯ ಶಾಸಕರ ಹೆಸರು ಕಡ್ಡಾಯವಾಗಿ ಸೇರಿಸಬೇಕು.
ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಿಗೆ ಮಾರ್ಗಸೂಚಿ:
- ರಾಜ್ಯಪಾಲರು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಕೇಂದ್ರ ಕ್ಯಾಬಿನೆಟ್ ಸಚಿವರು ಅಥವಾ ಸಿಎಂ ಸೂಚಿಸಿದ ಗಣ್ಯರು ಉದ್ಘಾಟನೆ ಮಾಡುತ್ತಾರೆ.
- ರಾಜ್ಯಪಾಲರು ಉದ್ಘಾಟನೆ ಮಾಡಿದರೆ, ಸಿಎಂ ಅಥವಾ ಡಿಸಿಎಂ ಅಧ್ಯಕ್ಷತೆ ವಹಿಸುತ್ತಾರೆ.
- ಸಿಎಂ, ಡಿಸಿಎಂ ಅಥವಾ ಕೇಂದ್ರ ಸಚಿವರು ಉದ್ಘಾಟನೆ ಮಾಡಿದರೆ, ಇಲಾಖಾ ಸಚಿವರು ಅಧ್ಯಕ್ಷತೆ ವಹಿಸುತ್ತಾರೆ.
- ಇಲಾಖಾ ಸಚಿವರು ಉದ್ಘಾಟನೆ ಮಾಡಿದರೆ, ಸ್ಥಳೀಯ ಶಾಸಕರು ಅಧ್ಯಕ್ಷತೆ ವಹಿಸುತ್ತಾರೆ.
- ಗಣ್ಯರು ಉದ್ಘಾಟನೆ ಮಾಡಿದರೆ, ಅಧ್ಯಕ್ಷತೆಯನ್ನು ಸಿಎಂ ನಿರ್ಧರಿಸುತ್ತಾರೆ.
ಗಣ್ಯರ ಜೇಷ್ಠತಾ ಪಟ್ಟಿ (Seniority Protocol):
ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಗಣ್ಯರ ಸ್ಥಾನಮಾನ ಅನುಸಾರ ಶಿಷ್ಟಾಚಾರ ಕಾಪಾಡಬೇಕು ಎಂದು ಸರ್ಕಾರ ಸೂಚಿಸಿದೆ. ಪಟ್ಟಿಯಲ್ಲಿ ರಾಜ್ಯಪಾಲರು ಮೊದಲ ಸ್ಥಾನದಲ್ಲಿದ್ದು, ನಂತರ ಕ್ರಮವಾಗಿ ಸಿಎಂ, ಉಪಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಸಭಾಪತಿಗಳು, ಸಭಾಧ್ಯಕ್ಷರು, ನ್ಯಾಯಮೂರ್ತಿಗಳು, ಶಾಸಕರು, ಸಂಸದರು ಹಾಗೂ ಇತರೆ ಗೌರವಾನ್ವಿತರು ಸ್ಥಾನ ಪಡೆದಿದ್ದಾರೆ.
ಇದೇ ರೀತಿ, ಜಿಲ್ಲಾ ಮಟ್ಟದ ಕಾರ್ಯಕ್ರಮಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಇಲಾಖಾ ಮುಖ್ಯಸ್ಥರಿಗೂ ಸ್ಥಳಮಾನ ನೀಡಲಾಗಿದೆ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಸ್ವಾತಂತ್ರ ಹೋರಾಟಗಾರರು, ಕಲಾವಿದರು, ವಿಜ್ಞಾನಿಗಳು, ಕ್ರೀಡಾಪಟುಗಳು ಹಾಗೂ ಸಮಾಜ ಸೇವಕರಿಗೂ ಆಹ್ವಾನ ನೀಡುವಾಗ ಗೌರವಪೂರ್ಣ ಶಿಷ್ಟಾಚಾರ ಪಾಲಿಸಬೇಕು ಎಂದು ಸರ್ಕಾರ ಸೂಚಿಸಿದೆ.ಇದನ್ನು ಓದಿ –ಗ್ರಾಮಪಂಚಾಯಿತಿ ಕಚೇರಿ ಮುಂದೆ ವಾಟರ್ ಮ್ಯಾನ್ ಆತ್ಮಹತ್ಯೆ
ಈ ಹೊಸ ಮಾರ್ಗಸೂಚಿಗಳು ಸರ್ಕಾರಿ ಸಮಾರಂಭಗಳಲ್ಲಿ ಪಾರದರ್ಶಕತೆ, ಗೌರವ ಹಾಗೂ ಸರಿಯಾದ ಶಿಸ್ತನ್ನು ಕಾಪಾಡಲು ಸರ್ಕಾರ ಕೈಗೊಂಡ ಮಹತ್ವದ ಹೆಜ್ಜೆಯಾಗಿದೆ.








