ಬೆಂಗಳೂರು: ಸದ್ಯಕ್ಕೆ ಸೋಮವಾರದಿಂದ ಮೆಟ್ರೋ ಟಿಕೆಟ್ ದರ ಏರಿಕೆ ಜಾರಿಯಾಗುವುದಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಸ್ಪಷ್ಟಪಡಿಸಿದ್ದಾರೆ.
ಮೆಟ್ರೋ ದರ ಏರಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ದರ ಪರಿಷ್ಕರಣೆಯಲ್ಲಿ ಕಂಡುಬಂದ ನ್ಯೂನತೆಗಳ ಬಗ್ಗೆ ಮರುಪರಿಶೀಲನೆ ನಡೆಸುವಂತೆ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರಿಗೆ ಮನವಿ ಮಾಡಲಾಗಿತ್ತು ಎಂದು ಹೇಳಿದರು. ಈ ಮನವಿಯನ್ನು ಪರಿಗಣಿಸಿದ ಸಚಿವರು, ದರ ಏರಿಕೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದರು.
ಈ ಹಿಂದೆ ಜಾರಿಗೊಳಿಸಲು ಉದ್ದೇಶಿಸಿದ್ದ ದರ ಏರಿಕೆಯಲ್ಲಿ ಹಲವು ತೊಂದರೆಗಳು ಮತ್ತು ಅಸಂಗತತೆಗಳು ಇದ್ದವು. ಅವುಗಳ ಕುರಿತು ಅಗತ್ಯ ದಾಖಲೆಗಳೊಂದಿಗೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಇದೀಗ ಹೊಸದಾಗಿ ದರ ನಿಗದಿ ಸಮಿತಿಯನ್ನು ರಚಿಸಿ ಸಂಪೂರ್ಣ ಪರಿಶೀಲನೆ ನಡೆಸಬೇಕಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಹೊಸ ದರ ನಿಗದಿ ಸಮಿತಿಯನ್ನು ರಚಿಸುವ ಜವಾಬ್ದಾರಿ ರಾಜ್ಯ ಸರ್ಕಾರದ್ದೇ ಆಗಿದ್ದು, ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಮೇಲೆ ಹೊಣೆ ಹಾಕಬಾರದು ಎಂದು ತೇಜಸ್ವಿ ಸೂರ್ಯ ಹೇಳಿದರು. ಮುಂದಿನ ದಿನಗಳಲ್ಲಿ ಮತ್ತೆ ದರ ಪರಿಷ್ಕರಣೆ ಕುರಿತು ಹೋರಾಟ ನಡೆಸಲಾಗುವುದು. ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ, ಜನರ ಹಿತಕ್ಕಾಗಿ ಹೋರಾಟ ಮುಂದುವರಿಸುತ್ತೇವೆ ಎಂದು ಅವರು ಎಚ್ಚರಿಸಿದರು.








