ದಕ್ಷಿಣ ಕೊರಿಯಾದ ಸಾಂಗ್ಕ್ಯುಂಕ್ವಾನ್ ವಿಶ್ವವಿದ್ಯಾಲಯದ ಸಂಶೋಧಕರು ಮೂಳೆ ಚಿಕಿತ್ಸೆಯಲ್ಲಿ ಕ್ರಾಂತಿಕಾರಿ ಆವಿಷ್ಕಾರ ಮಾಡಿದ್ದಾರೆ. ಸಾಮಾನ್ಯ ಅಂಟು ಗನ್ ಬದಲಿಗೆ 3D ಮುದ್ರಣ ಸಾಧನ ಬಳಸಿ, ಮುರಿದ ಮೂಳೆಯ ಮೇಲೆಯೇ ನೇರವಾಗಿ ಮೂಳೆಯಂತೆಯೇ ವಸ್ತುಗಳನ್ನು ಮುದ್ರಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.
ಬಯೋಮೆಡಿಕಲ್ ಎಂಜಿನಿಯರ್ ಜಂಗ್ ಸೆಯುಂಗ್ ಲೀ ಅವರ ನೇತೃತ್ವದ ತಂಡ ಈ ವಿಶೇಷ ಸಾಧನವನ್ನು ರಚಿಸಿದ್ದು, ಮೊದಲು ಮೊಲಗಳ ಮೇಲೆ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಈ ತಂತ್ರಜ್ಞಾನವು ಸಂಕೀರ್ಣ ಮೂಳೆ ಶಸ್ತ್ರಚಿಕಿತ್ಸೆಗಳನ್ನು ಸುಲಭ, ವೇಗ ಮತ್ತು ಪರಿಣಾಮಕಾರಿಯಾಗಿಸಲು ನೆರವಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಜಂಗ್ ಸೆಯುಂಗ್ ಲೀ ಅವರ ಪ್ರಕಾರ, “ನಮ್ಮ ತಂತ್ರಜ್ಞಾನವು ಶಸ್ತ್ರಚಿಕಿತ್ಸೆಯ ಸಮಯದಲ್ಲೇ ಮುರಿದ ಮೂಳೆಯ ಮೇಲೆ ನೇರವಾಗಿ ಸ್ಕ್ಯಾಫೋಲ್ಡ್ (ಮೂಳೆ ತರಹದ ರಚನೆ) ನಿರ್ಮಿಸಲು ನೆರವಾಗುತ್ತದೆ. ಇದರಿಂದ ಮುಂಚಿತ ಇಮೇಜಿಂಗ್, ಮಾಡೆಲಿಂಗ್ ಅಥವಾ ಕತ್ತರಿಸುವ ಅಗತ್ಯವಿಲ್ಲದೆ ಸಂಕೀರ್ಣ ಮತ್ತು ಅಸಮರೂಪದ ಮೂಳೆ ದೋಷಗಳನ್ನು ಸರಿಪಡಿಸಬಹುದು” ಎಂದಿದ್ದಾರೆ.
ಮೂಳೆ ಇಂಪ್ಲಾಂಟ್‌ಗಳನ್ನು ಪಾಲಿಕ್ಯಾಪ್ರೊಲ್ಯಾಕ್ಟೋನ್ (PCL) ಮತ್ತು ಹೈಡ್ರಾಕ್ಸಿಅಪಟೈಟ್ (HA) ಎಂಬ ಅಂಶಗಳಿಂದ ತಯಾರಿಸಲಾಗುತ್ತದೆ. ಕಡಿಮೆ ತಾಪಮಾನದಲ್ಲಿ ಕರಗುವ ಈ ತಂತ್ರಜ್ಞಾನದಿಂದ ಅಂಗಾಂಶಗಳಿಗೆ ಹಾನಿಯಾಗದೇ ಮೂಳೆಯ ಮುದ್ರಣ ಸಾಧ್ಯವಾಗಿದೆ.
ಇದನ್ನು ಓದಿ –ಮೈಸೂರು: 14.1 ಕೆ.ಜಿ ಗಾಂಜಾ ವಶ — ಓರ್ವನ ಬಂಧನ
ಇದಲ್ಲದೆ, ಸಂಶೋಧನಾ ತಂಡವು HA ಪ್ರಮಾಣ ಹಾಗೂ PCL ನ ಆಣ್ವಿಕ ತೂಕವನ್ನು ಸರಿಹೊಂದಿಸುವ ಮೂಲಕ ಸ್ಕ್ಯಾಫೋಲ್ಡಿನ ಶಕ್ತಿ, ದೀರ್ಘಕಾಲೀನ ಬಾಳಿಕೆ ಮತ್ತು ಮೂಳೆ ರಚನಾ ಗುಣಲಕ್ಷಣಗಳನ್ನು ಸುಧಾರಿಸಿದೆ. ಜೊತೆಗೆ, ಪ್ರತಿಜೀವಕಗಳನ್ನು ಸೇರಿಸುವ ಮೂಲಕ ಸೋಂಕಿನ ಅಪಾಯವನ್ನು ಕಡಿಮೆ ಮಾಡಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.