- ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ
ಮೈಸೂರು : ಪಾಕಿಸ್ತಾನದ ಜೊತೆ ಯುದ್ಧ ಬೇಡ. ಯುದ್ಧದ ಮಾಡಬೇಕಾದ ಅಗತ್ಯ ಇಲ್ಲ. ಮತ್ತಷ್ಟು ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸುವ ಕೆಲಸ ಮಾಡಬೇಕು. ನಾವು ಯುದ್ಧದ ಪರ ಇಲ್ಲ, ಶಾಂತಿ ಇರಬೇಕು, ಜನರಿಗೆ ಭದ್ರತೆಯನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಶನಿವಾರ ಅಭಿಪ್ರಾಯಪಟ್ಟರು
ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಅವರು, ರಾಜ್ಯದಲ್ಲಿರುವ ಪಾಕಿಸ್ತಾನದ ಪ್ರಜೆಗಳನ್ನು ವಾಪಸ್ ಕಳಿಸುವ ವಿಚಾರದಲ್ಲಿ ಕೇಂದ್ರದ ಸೂಚನೆಯನ್ನು ಪಾಲಿಸುತ್ತೇವೆ ಹಾಗೂ ನಾವು ಸಹಕಾರ ಸಹ ನೀಡುತ್ತೇವೆ. ರಾಜ್ಯದಲ್ಲಿ ಎಷ್ಟು ಜನ ಇದ್ದಾರೆ ಎಂಬುದು ಗೊತ್ತಿಲ್ಲ. ಆದರೆ ಬೆಂಗಳೂರಿನಲ್ಲಿ ಹೆಚ್ಚು ಜನ ಇರುವ ಸಾಧ್ಯತೆ ಇದ್ದು, ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.
ಕಾಶ್ಮೀರದಲ್ಲಿ ಭದ್ರತಾ ವೈಫಲ್ಯವನ್ನು ಕೇಂದ್ರದವರೇ ಒಪ್ಪಿಕೊಂಡಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಲ್ಲಿ ಭದ್ರತಾ ವ್ಯವಸ್ಥೆ ಮಾಡಬೇಕಾಗಿತ್ತು, ಅಲ್ಲಿ ಪುಲ್ವಾಮದಲ್ಲಿ 40 ಜನರು ಮೃತಪಟ್ಟಿದ್ದರು. ಹೀಗಾಗಿ ಬಹಳ ಎಚ್ಚರಿಕೆಯಿಂದ ಇರಬೇಕು, ಅಲ್ಲಿ ಭದ್ರತೆ ಹಾಗೂ ಗುಪ್ತಚರ ಇಲಾಖೆಯ ವೈಫಲ್ಯವಾಗಿದೆ ಎಂದು ಹೇಳಿದರು.
ಸಚಿವ ಸಂತೋಷ್ ಲಾಡ್ ಅವರು ಅಲ್ಲಿ ಸಿಲುಕಿರುವ ಎಲ್ಲಾ ಕನ್ನಡಿಗರನ್ನು ಕರೆದುಕೊಂಡು ಬಂದಿದ್ದಾರೆ. ಸದ್ಯ ನಾನು ಸಚಿವ ಸಂತೋಷ್ ಲಾಡ್ ಅವರಿಂದ ಮಾಹಿತಿ ಪಡೆದುಕೊಂಡಿಲ್ಲ. ಮಾಹಿತಿಯನ್ನು ಪಡೆದುಕೊಂಡ ನಂತರ ಇತರ ವಿಚಾರಗಳ ಬಗ್ಗೆ ಮಾತನಾಡುತ್ತೇನೆ ಎಂದು ತಿಳಿಸಿದರು.ಇದನ್ನು ಓದಿ –ಒಂದು ವಾರದಲ್ಲಿ ಕಾವೇರಿ ಆರತಿಯ ನೀಲನಕ್ಷೆ ಸಿದ್ಧವಾಗಲಿದೆ – ಡಿಸಿಎಂ ಡಿ.ಕೆ. ಶಿವಕುಮಾರ್
ಆರೋಗ್ಯವಾಗಿದ್ದೇನೆ :
ನಾನು ಈಗ ಆರೋಗ್ಯವಾಗಿದ್ದೇನೆ. ಶೇಕಡಾ 90% ರಷ್ಟು ಸುಧಾರಣೆ ಆಗಿದೆ. ಇನ್ನು 10 % ಸ್ವಲ್ಪ ನೋವಿದೆ. ಈಗ ತಿರುಗಾಡಬಹುದು ಎಂದು ಹೇಳಿದರು.
20 ಬಾರಿ ಚಾಮರಾಜನಗರಕ್ಕೆ ಹೋಗಿದ್ದೇನೆ:
ನಾನು ಮೊದಲ ಬಾರಿಗೆ ಚಾಮರಾಜನಗರಕ್ಕೆ ಹೋದಾಗಲೇ ಅಲ್ಲಿನ ಮೌಢ್ಯ ತೊಲಗಿತು. ಇಲ್ಲಿವರೆಗೆ 20 ಬಾರಿ ಚಾಮರಾಜನಗರಕ್ಕೆ ಹೋಗಿದ್ದೇನೆ. ಈಗ ಅಲ್ಲಿ ಯಾವುದೇ ಮೌಢ್ಯ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.