ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಪಂದ್ಯ ನಡೆಸುವ ಕುರಿತು ರಾಜ್ಯ ಸರ್ಕಾರದಿಂದ ಇನ್ನೂ ಅನುಮತಿ ನೀಡಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಜಸ್ಟೀಸ್ ಕುನ್ಹಾ ವರದಿಯ ಶಿಫಾರಸುಗಳನ್ನು ಪಾಲಿಸುವಂತೆ ಸರ್ಕಾರ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಬಿಎ ಹಾಗೂ ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯು ಕೂಡ ಕೆಲವು ಶಿಫಾರಸುಗಳನ್ನು ಸಲ್ಲಿಸಿದೆ. ಐಪಿಎಲ್ ಪಂದ್ಯಗಳು ಸಮೀಪಿಸುತ್ತಿರುವುದರಿಂದ ನಮ್ಮ ಕಡೆಯಿಂದ ಕ್ಲಿಯರೆನ್ಸ್ ಅಗತ್ಯವಿದೆ. ಈ ಸಂಬಂಧ ಬುಧವಾರ ಸಭೆ ಕರೆದಿದ್ದು, ಸರ್ಕಾರದ ಹಂತದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಜತೆಗೂ ಚರ್ಚೆ ನಡೆಸಬೇಕಿದೆ. ಸಮಿತಿಯ ಶಿಫಾರಸುಗಳನ್ನು ಎಷ್ಟರ ಮಟ್ಟಿಗೆ ಅನುಷ್ಠಾನಗೊಳಿಸಲಾಗಿದೆ ಎಂಬುದನ್ನು ಪರಿಶೀಲಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಬೆಂಗಳೂರಿನಲ್ಲಿ ಪಂದ್ಯ ನಡೆಯಬೇಕು ಎಂಬುದು ಅಭಿಮಾನಿಗಳ ಆಶಯವಾದರೂ, ಸುರಕ್ಷತೆ ಮುಖ್ಯ. ಕಾಲ್ತುಳಿತದಂತಹ ದುರ್ಘಟನೆಗಳು ಮರುಕಳಿಸಬಾರದು ಎಂಬ ಕಾರಣದಿಂದ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.
ಈ ವೇಳೆ ಸಂಸದ ತೇಜಸ್ವಿ ಸೂರ್ಯ ಅವರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಅವರು ರಾಜ್ಯ ಸರ್ಕಾರವನ್ನು ಟೀಕಿಸುವ ಬದಲು ಕೇಂದ್ರ ಸರ್ಕಾರದಿಂದ ಬಾಕಿ ಇರುವ ಅನುದಾನವನ್ನು ತರಿಸಿಕೊಡಬೇಕು. ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ಅನುದಾನ ಬಾಕಿ ಇದೆ. ಅದನ್ನು ತರಿಸಿಕೊಟ್ಟರೆ ರಾಜ್ಯದ ಹಣಕಾಸು ಸ್ಥಿತಿ ಸುಧಾರಿಸುತ್ತದೆ ಎಂದು ಟಾಂಗ್ ನೀಡಿದರು.ಇದನ್ನು ಓದಿ –ಭೀಕರ ಅಗ್ನಿ ಅವಘಡ: ನಾಲ್ಕು ಗೋದಾಮುಗಳು ಭಸ್ಮ
ಇದೇ ವಿಷಯವಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಪಂದ್ಯ ಆಯೋಜನೆ ಕುರಿತಂತೆ ಕೆಎಸ್ಸಿಎ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಯೋಗ ಗೃಹ ಸಚಿವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದೆ. ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹಾಗೂ ಆರ್ಸಿಬಿ ಪ್ರತಿನಿಧಿ ರಾಜೇಶ್ ಮೆನನ್ ನೇತೃತ್ವದ ನಿಯೋಗ ಸಭೆ ನಡೆಸಿದ್ದು, ಫೆಬ್ರವರಿ 12ರಂದು ಮತ್ತೊಂದು ಸಭೆ ನಡೆಸಿ ಪಂದ್ಯಾವಳಿ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ಭರವಸೆ ನೀಡಿದ್ದಾರೆ.








